ಉಡುಪಿ ನಗರದ ತೆಂಕುಪೇಟೆಯ ವಸತಿ ನಿಲಯದ ಫ್ಲಾಟ್ ಒಂದರಲ್ಲಿ ಪ್ರಜ್ಞೆ ಇಲ್ಲದೆ ಚಿಂತಾ ಜನಕ ಸ್ಥಿತಿಯಲ್ಲಿದ್ದ ಮಹಿಳೆಯೋರ್ವರನ್ನು ವಿಶು ಶೆಟ್ಟಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಮಹಿಳೆ ಶರ್ವಾಣಿ (37ವ) ಫ್ಲ್ಯಾಟ್ ಒಂದರಲ್ಲಿ ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಸೇರಿದ್ದರು. ಕಳೆದ 15 ದಿನಗಳಿಂದ ಮಹಿಳೆ ಒಂಟಿಯಾಗಿ ಜೀವಿಸುತ್ತಿದ್ದು ಫ್ಲಾಟ್ ಮಾಲೀಕ ಬೆಂಗಳೂರಿಗೆ ತೆರಳಿದ್ದರು. ಇಂದು ಹಿರಿಯ ನಾಗರಿಕರಾದ ಮಾಲೀಕ ಬಂದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿ ನೋಡಿ ವಿಶು ಶೆಟ್ಟಿಗೆ ಮಾಹಿತಿ ನೀಡಿದ್ದರು. 3ನೇ ಮಹಡಿಯಿಂದ ಮಹಿಳೆಯನ್ನು ಲಿಫ್ಟ್ ಇಲ್ಲದೆ ಇರುವುದರಿಂದ ವಿಶು ಶೆಟ್ಟಿ ಎತ್ತಿಕೊಂಡು ಬಂದು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿದರು. ರಕ್ಷಿಸುವ ಸಮಯ ಇರುವೆಗಳೆಲ್ಲ ಮಹಿಳೆಯ ದೇಹವನ್ನು ಆವರಿಸಿಕೊಂಡಿದ್ದು ಅಸಹನೀಯ ಸ್ಥಿತಿ ಎದುರಾಗಿತ್ತು.

ಮಹಿಳೆ ಅನ್ನ ಆಹಾರ ಸೇವಿಸದೆ ಎರಡು ಮೂರು ದಿನಗಳಾಗಿರಬಹುದು ಹಾಗೂ ಪರಿಸ್ಥಿತಿ ಚಿಂತಾ ಜನಕವಿದೆ. ಮಹಿಳೆಯ ಸಂಬಂಧಿಕರ ಪತ್ತೆಗಾಗಿ ಮಾಹಿತಿ ಇಲ್ಲದಿರುವುದರಿಂದ ಸಂಬಂಧಿಕರು ಅಥವಾ ಸಂಬಂಧ ಪಟ್ಟವರು ಜಿಲ್ಲಾಸ್ಪತ್ರೆಗೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ನಗರ ಠಾಣೆಗೆ ಮಾಹಿತಿ ನೀಡಲಾಗಿದೆ.