ಕುಟುಂಬ ಮತ್ತು ಸಮಾಜದಿಂದ ದೂರ ಉಳಿದಿರುವ ಲಿಂಗತ್ವ ಅಲ್ಪಸಂಖ್ಯಾತರು, ಇಷ್ಟವಿಲ್ಲದಿದ್ದರೂ ಜೀವನ ನಿರ್ವಹಣೆಗಾಗಿ ಭಿಕ್ಷಾಟನೆ ಮತ್ತಿತರ ಚಟುವಟಿಗಳಲ್ಲಿ ಅನಿವಾರ್ಯವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಕೌಶಲ್ಯಾಬಿವೃಧ್ದಿ ತರಬೇತಿಗಳನ್ನು ನೀಡಿ, ಉತ್ತಮ ಬದುಕು ಕಟ್ಟಿಕೊಳ್ಳಲು ನೆರವು ನೀಡುವ ಉದ್ದೇಶದಿಂದ ‘ಯಕ್ಷಗಾನ ಕೌಶಲ್ಯ ತರಬೇತಿ’ ಶಿಬಿರ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ತಿಳಿಸಿದ್ದಾರೆ.
ಶಿಬಿರ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಉಡುಪಿ ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಜೊತೆಗೂಡಿ ಶಿಬಿರ ಆಯೋಜಿಸಿದ್ದವು. ಜಿಲ್ಲೆಯಲ್ಲಿರುವ ಆಸಕ್ತ 19 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಕಾರ್ಕಳದಲ್ಲಿ ಒಂದು ತಿಂಗಳು (ಜೂನ್ 5ರಿಂದ ಜುಲೈ 4) ಯಕ್ಷಗಾನ ತರಬೇತಿ ನೀಡಲಾಗಿದೆ. ಜೊತೆಗೆ, ಶಿಬಿರಾರ್ಥಿಗಳಿಗೆ 10,000 ರೂ. ಮಾಸಿಕ ಸ್ಟೈಪೆಂಡ್ ಕೂಡ ನೀಡಲಾಗಿದೆ” ಎಂದು ಹೇಳಿದ್ದರೆ.
“ಯಕ್ಷಗಾನ ನೃತ್ಯ, ಅಭಿನಯ, ಸಂಭಾಷಣೆಯ ಕುರಿತು ತರಬೇತಿ ನೀಡಲಾಗಿದೆ. ಅಲ್ಲದೆ, ‘ಶ್ವೇತ ಕುಮಾರ ಚೆರಿತ್ರೆ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಶಿಬಿರಾರ್ಥಿಗಳು ಪ್ರದರ್ಶನ ಮಾಡಿದ್ದಾರೆ. ಶಿಬಿರಾರ್ಥಿಗಳಿಗೆ ಯಕ್ಷಗಾನ ತರಬೇತಿಯ ನಾಟ್ಯ ಗುರು ಸುಧೀರ್ ಉಪ್ಪೂರು ಮತ್ತು ವಿಜಯಗಾಣಿಗ ಬೀಜಮಕ್ಕಿ, ಚಂಡೆ ಶಶಿಕುಮಾರ್, ಮದ್ದಳೆ ನವೀನ್ ಕುಮಾರ್ ಮತ್ತು ಭಾಗವತಿಕೆಯಲ್ಲಿ ಸುದೀಪ್ ಚಂದ್ರ ಶೆಟ್ಟಿ ತರಬೇತಿ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
“ಯಕ್ಷಗಾನ ತರಬೇತಿ ಪಡೆದಿರುವ ಈ ಲಿಂಗತ್ವ ಅಲ್ಪಸಂಖ್ಯಾತರು ಯಕ್ಷಗಾನ ಪ್ರಸಂಗಗಳಲ್ಲಿ ಸ್ವತಂತ್ರವಾಗಿ ವೇಷದಾರಿಗಳಾಗಿ ಅಭಿನಯಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಜೀವನ ನಿರ್ವಹಣೆಗಾಗಿ ಆರ್ಥಿಕವಾಗಿ ಸಂಪಾದನೆ ಮಾಡಲು ಹಾಗೂ ತಮ್ಮದೇ ತಂಡಗಳನ್ನು ರಚಿಸಿಕೊಂಡು ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನೀಡಲು ಸಮರ್ಥರಾಗಿದ್ದಾರೆ. ಹೊರ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಲು ಉತ್ಸುಕರಾಗಿರುವ ಅವರಿಗೆ ಸೂಕ್ತ ಪ್ರೋತ್ಸಾಹ, ಬೆಂಬಲ ಮತ್ತು ಅವಕಾಶಗಳನ್ನು ನೀಡುವ ಮಹತ್ತರ ಜವಾಬ್ದಾರಿ ಇಡೀ ಸಮಾಜದ್ದಾಗಿದೆ” ಎಂದು ಹೇಳಿದ್ದಾರೆ.
“ಜಿಲ್ಲೆಯಲ್ಲಿ 283 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಅವರು ಜೀವನ ನಿರ್ವಹಣೆಗೆ ತಮಗೆ ಇಷ್ಠವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಬದಲು, ಕೌಶಲ್ಯ ತರಬೇತಿಗಳ ಮೂಲಕ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಲು ಯಕ್ಷಗಾನ ತರಬೇತಿ ನೀಡಲಾಗಿದೆ. ಕಲಾ ಪ್ರತಿಭೆಯ ಮೂಲಕ ಅವರು ಸಾಮಾಜಿಕವಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯವಿದೆ. ಯಕ್ಷಗಾನ ಮಾತ್ರವಲ್ಲದೇ ಇತರೇ ಕೌಶಲ್ಯಯುಕ್ತ ತರಬೇತಿ ಪಡೆಯಲು ಇಚ್ಚಿಸಿದಲ್ಲಿ ಜಿಲ್ಲಾಡಳಿತ ಎಲ್ಲಾ ಅಗತ್ಯ ನೆರವು ನೀಡಲಿದೆ” ಎಂದು ತಿಳಿಸಿದ್ದಾರೆ.