ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಮತ್ತು ಅವರ ಪುತ್ರಿಯ ಬಗ್ಗೆ ಹರಡುತ್ತಿದ್ದ ಸುಳ್ಳು ಸುದ್ದಿಗಳು ಹಾಗೂ ಟ್ರೋಲ್‌ಗಳ ವಿರುದ್ಧ ಈಗ ಕಾನೂನು ಸಮರ ಆರಂಭವಾಗಿದೆ. ಸಮಾಜದ ಶಾಂತಿ ಕದಡುವ ಮತ್ತು ಚಾರಿತ್ರ್ಯಹನನ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಅನಿತಾ ಕಾಸರಗೋಡು, ಕಿಶನ್ ಪೂಜಾರಿ, ದೀಪಕ್ ಶೆಟ್ಟಿ, ನರಸಿಂಹ ಮೂರ್ತಿ, ವಸಂತ ಗಿಳಿಯಾರ್ ಫ್ಯಾನ್ ಪೇಜ್ ವಿರುದ್ಧ ದಿನೇಶ್ ಗಾಣಿಗ ಅವರು ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ: ಗಾಣಿಗ ಅವರ ಪುತ್ರಿ ಮುಸ್ಲಿಂ ವ್ಯಕ್ತಿಯ ಜೊತೆಗೆ ಮನೆಬಿಟ್ಟು ಹೋಗಿದ್ದಾಳೆ ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದರು. ತಂದೆಯ ಜೊತೆಗೆ ಮನಸ್ತಾಪದಿಂದಾಗಿ ಮಗಳು ಮನೆಬಿಟ್ಟು ಸ್ನೇಹಿತೆಯ ಮನೆಗೆ ಹೋಗಿದ್ದಳು. ಗಾಬರಿಗೊಂಡ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಕೆಲವು ಕಿಡಿಗೇಡಿಗಳು ದಿನೇಶ್ ಗಾಣಿಗ ಮತ್ತು ಪುತ್ರಿಯ ವಿರುದ್ಧ ಮಾನಹಾನಿಕರ ಪೋಸ್ಟ್‌ಗಳನ್ನು ಹಾಕಿದ್ದರು. ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಬಗ್ಗೆ ವರದಿಯಾಗಿತ್ತು. ವಿಷಯದ ಸತ್ಯಾಸತ್ಯತೆ ತಿಳಿಯದೆ, ಕೋಮು ಪ್ರಚೋದಿತವಾಗಿ ಈ ಸುದ್ದಿಯನ್ನು ಹರಡಲಾಗಿತ್ತು. ಇದು ಕೇವಲ ಒಂದು ಕುಟುಂಬದ ಘನತೆಗೆ ಧಕ್ಕೆ ತರುವುದು ಮಾತ್ರವಲ್ಲದೆ, ಸಮಾಜದಲ್ಲಿ ಅಶಾಂತಿ ಮೂಡಿಸುವ ಸಂಚು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ವ್ಯವಸ್ಥಿತ ಅಪಪ್ರಚಾರವನ್ನು ಗಂಭೀರವಾಗಿ ಪರಿಗಣಿಸಿರುವ ದಿನೇಶ್ ಗಾಣಿಗ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ನಾಲ್ಕೈದು ಪ್ರಮುಖ ಟ್ರೋಲ್ ಪೇಜ್‌ಗಳು ಮತ್ತು ಅಪಪ್ರಚಾರ ನಡೆಸಿದ ಕೆಲವು ವೈಯಕ್ತಿಕ ಖಾತೆಗಳ ವಿರುದ್ಧ ದೂರು ದಾಖಲಾಗಿದೆ.
ಸೈಬರ್ ಕ್ರೈಮ್ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರ ಐಪಿ ಅಡ್ರೆಸ್ ಮತ್ತು ಅಕೌಂಟ್ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ದಿನೇಶ್ ಗಾಣಿಗ ಅವರು, “ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ. ನಮ್ಮ ಕುಟುಂಬದ ನೆಮ್ಮದಿ ಕೆಡಿಸಲು ಕಿಡಿಗೇಡಿಗಳು ಮಾಡಿರುವ ಪಿತೂರಿ ಇದು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕಿಡಿಗೇಡಿಗಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲಾಗುವುದು” ಎಂದು ಹೇಳಿದ್ದಾರೆ.
ಮುಂದೇನಾಗುತ್ತದೆ?
”ಪೊಲೀಸ್ ತನಿಖೆ ನಡೆಯುತ್ತಿದ್ದು, ಸುಳ್ಳು ಸುದ್ದಿ ಹರಡಿದವರನ್ನು ಮತ್ತು ಅದಕ್ಕೆ ಬೆಂಬಲ ನೀಡಿದವರನ್ನು ಬಂಧಿಸುವ ಸಾಧ್ಯತೆಯಿದೆ. ಮುಂದೇನಾಗುತ್ತದೆ ಕಾದು ನೋಡಿ” ಎನ್ನುವ ಮೂಲಕ ದಿನೇಶ್ ಗಾಣಿಗ ಅವರು ಅಪರಾಧಿಗಳಿಗೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪಿಆರ್‌ಎಸ್ ಅವರು, ಸುಮಾರು ಇಪ್ಪತ್ತು ವರ್ಷಗಳಿಂದ ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ದಿನೇಶ್ ಗಾಣಿಗರನ್ನು ತೆಜೋವಧೆ ಮಾಡಲು ಕೆಲವರು ಸಂಚು ರೂಪಿಸಿ ತಪ್ಪು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆ ತಂದೆಯ ಬೈದರೆಂದು ಮನನೊಂದು ಯುವತಿ ತನ್ನ ನೆಂಟರಿಷ್ಟರ ಮನೆಗೆ ತೆರಳಿದ್ದಳು. ಆದರೆ ಈ ಘಟನೆಯನ್ನು ದುರುಪಯೋಗಪಡಿಸಿಕೊಂಡು, ಆಕೆಯನ್ನು ಮುಸ್ಲಿಂ ಯುವಕನ ಜೊತೆ ನಾಪತ್ತೆಯಾಗಿದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಎಐ ತಂತ್ರಜ್ಞಾನ ಬಳಸಿ ಮಾಡಿದ ಫೋಟೋಗಳನ್ನು ಹರಿಬಿಡಲಾಗಿದೆ ಎಂದು ಆರೋಪಿಸಿದರು.
ಆ ಯುವತಿ ಸುರಕ್ಷಿತವಾಗಿ ಮನೆಯಲ್ಲೇ ಇದ್ದಾಳೆ. ಯಾವುದೇ ಸಮಸ್ಯೆ ಇಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ತೆಜೋವಧೆ ಮಾಡಲಾಗುತ್ತಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿತರೆಲ್ಲರೂ ಧರ್ಮಸ್ಥಳದಲ್ಲಿ ನಡೆದ ಅಕ್ರಮ ಶವ ಹೂತ ಪ್ರಕರಣ, ಭೂ ಒತ್ತುವರಿ ಮತ್ತು ಹೆಣ್ಣುಮಕ್ಕಳ ಅತ್ಯಾಚಾರ ಕೊಲೆ ವಿರುದ್ಧ ಹೋರಾಟದಲ್ಲಿ ಭಾಗಿಯಾದವರನ್ನು ಟಾರ್ಗೆಟ್ ಮಾಡಿ ಮಾನಹಾನಿಕರ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಗಾಣಿಗ ಅವರೂ ಈ ಹೋರಾಟದಲ್ಲಿದ್ದಾರೆ.








