ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ವಿರುದ್ಧ ಪಕ್ಷಪಾತದ ಆರೋಪಗಳನ್ನು ಮಾಡಿದ್ದರು. ಹಾಗೆಯೇ ಜಸ್ಟೀಸ್ ಸ್ವರ್ಣ ಕಾಂತ ಈ ಪ್ರಕರಣದಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಿದ್ದರು.
ಕೇಜ್ರಿವಾಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಯಮೂರ್ತಿ ಸ್ವರ್ಣ ಕಾಂತಾ ಶರ್ಮಾ, “ರಾಜಕಾರಣಿಯೊಬ್ಬರು ಮಿತಿ ಮೀರಿ ಮಾತನಾಡುವುದಕ್ಕೆ ಅವಕಾಶ ನೀಡಲಾಗದು. ಹಾಗೆಯೇ ರಾಜಕಾರಣಿಗಳು ನ್ಯಾಯಾಂಗ ಸಾಮರ್ಥ್ಯವನ್ನು ನಿರ್ಣಯಿಸಲು ಸಾಧ್ಯವಿಲ್ಲ. ರಾಜಕಾರಣಿಗಳ ಮಕ್ಕಳು ರಾಜಕಾರಣಕ್ಕೆ ಬರಬಹುದಾದರೆ, ನ್ಯಾಯಮೂರ್ತಿಗಳ ಮಕ್ಕಳು ಅಥವಾ ಕುಟುಂಬ ನ್ಯಾಯಾಂಗದಲ್ಲಿ ಯಾಕೆ ಕಾರ್ಯನಿರ್ವಹಿಸಬಾರದು” ಎಂದು ಪ್ರಶ್ನಿಸಿದರು.
“ಆರೋಪಿಯು ತಾನು ನಿರಪರಾಧಿ ಎಂದು ಸಾಬೀತುಪಡಿಸಬಹುದು. ಆದರೆ ನ್ಯಾಯಮೂರ್ತಿಗಳು ಕಳಂಕಿತರು ಎಂದು ಸಾಬೀತುಪಡಿಸುವ ಅವಕಾಶ ಆರೋಪಿಗಿಲ್ಲ” ಎಂದೂ ಹೇಳಿದ್ದಾರೆ. ಹಾಗೆಯೇ “ಕೇಜ್ರಿವಾಲ್‌ಗೆ ಚೆಲ್ಲಾಟ, ನನಗೆ ಪ್ರಾಣಸಂಕಟ” ಎಂದರು.
ದೆಹಲಿ ಹೈಕೋರ್ಟ್‌ನಲ್ಲಿ ಖುದ್ದಾಗಿ ಹಾಜರಾಗಿ ತಮ್ಮದೇ ವಾದ ಮಂಡಿಸಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನ್ಯಾಯಮೂರ್ತಿಗಳು ಪ್ರಕರಣದಿಂದ ಹಿಂದೆ ಸರಿಯಲು ಪ್ರಮುಖವಾಗಿ ನಾಲ್ಕು ಕಾರಣಗಳನ್ನು ಮುಂದಿಟ್ಟಿದ್ದರು.
ವಿಚಾರಣಾ ನ್ಯಾಯಾಲಯವು ಸುಮಾರು 40,000ಕ್ಕೂ ಹೆಚ್ಚು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನೀಡಿದ್ದ ಸಮಗ್ರ ಆದೇಶವನ್ನು, ಹೈಕೋರ್ಟ್ ಕೇವಲ ಐದು ನಿಮಿಷಗಳ ವಿಚಾರಣೆ ನಡೆಸಿ ರದ್ದುಗೊಳಿಸಿದೆ ಹಾಗೂ ಈ ವೇಳೆ ತಮ್ಮ ಕಡೆಯ ವಾದವನ್ನು ಆಲಿಸಿಲ್ಲ ಎಂಬುದು ಅವರ ಮೊದಲ ಆಕ್ಷೇಪವಾಗಿತ್ತು. ಎರಡನೆಯದಾಗಿ, ಸುಪ್ರೀಂ ಕೋರ್ಟ್‌ನ ‘ರಂಜಿತ್ ಠಾಕೂರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಅವರು, ನ್ಯಾಯಾಧೀಶರ ವಿರುದ್ಧ ‘ಪಕ್ಷಪಾತವನ್ನು’ ಸಾಬೀತುಪಡಿಸುವ ಅಗತ್ಯವಿಲ್ಲ, ಬದಲಾಗಿ ‘ಪಕ್ಷಪಾತದ ಆತಂಕ’ ಮೂಡಿದರೆ ಅದುವೇ ಅವರು ಪ್ರಕರಣದಿಂದ ಹಿಂದೆ ಸರಿಯಲು ಸಾಕಷ್ಟು ಆಧಾರವಾಗುತ್ತದೆ ಎಂದು ವಾದಿಸಿದರು.
ಇದರ ಜೊತೆಗೆ, ಈ ಪ್ರಕರಣಕ್ಕೆ ರಾಜಕೀಯ ಆಯಾಮವನ್ನೂ ನೀಡಿದ ಕೇಜ್ರಿವಾಲ್, ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಆರ್‌ಎಸ್‌ಎಸ್ ಸಂಯೋಜಿತ ವಕೀಲರ ಸಂಘಟನೆಯಾದ ‘ಅಖಿಲ ಭಾರತೀಯ ಅಧಿವಕ್ತ ಪರಿಷತ್’ ಆಯೋಜಿಸಿದ್ದ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಆರ್‌ಎಸ್‌ಎಸ್ ಆಡಳಿತರೂಢ ಬಿಜೆಪಿಯ ಸೈದ್ಧಾಂತಿಕ ಮಾತೃಸಂಸ್ಥೆಯಾಗಿದ್ದು, ಆಮ್ ಆದ್ಮಿ ಪಕ್ಷಕ್ಕೆ ಪ್ರಬಲ ರಾಜಕೀಯ ವಿರೋಧಿಯಾಗಿದೆ ಎಂದು ವಿವರಿಸಿದ್ದರು. ಅಲ್ಲದೆ, ಇದೊಂದು ‘ರಾಜಕೀಯ ಪ್ರೇರಿತ ಪ್ರಕರಣ’ ಎಂದು ನೇರವಾಗಿ ನ್ಯಾಯಾಲಯದಲ್ಲೇ ಹೇಳಿದ್ದರು.
ಇದೇ ವೇಳೆ, ನ್ಯಾಯಮೂರ್ತಿಗಳ ಪುತ್ರ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ‘ಗ್ರೂಪ್ ಎ’ ವಕೀಲರಾಗಿದ್ದರೆ, ಪುತ್ರಿ ದೆಹಲಿ ಹೈಕೋರ್ಟ್‌ನಲ್ಲಿ ‘ಗ್ರೂಪ್ ಸಿ’ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರಿಗೂ ಪ್ರಕರಣಗಳನ್ನು ಹಂಚಿಕೆ ಮಾಡುವುದು ಇದೇ ಅಬಕಾರಿ ಪ್ರಕರಣದಲ್ಲಿ ಸಿಬಿಐ ಪರ ವಾದಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರೇ ಆಗಿರುವುದರಿಂದ, ಇಲ್ಲಿ ಸ್ಪಷ್ಟವಾದ ‘ಹಿತಾಸಕ್ತಿ ಸಂಘರ್ಷ’ ಅಡಗಿದೆ ಎಂದು ಕೇಜ್ರಿವಾಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.





