ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಸೋನಂ ವಾಂಗ್ಚುಕ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಸಿಐಟಿಯು ಸಂಚಲನ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಮುಖಂಡ ಎಚ್. ನರಸಿಂಹ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕುರಿತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ನಾಚಿಕೆಗೇಡಿನ ಸಂಗತಿಯಾಗಿದೆ. ಭ್ರಷ್ಟಾಚಾರವನ್ನು ಪೋಷಿಸುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸುವುದಾಗಿ ಹೇಳಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಗಾರ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರತಿಭಟನೆಗೆ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ವಿ. ನೇತೃತ್ವ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಸುರೇಂದ್ರ, ರಾಜು ದೇವಾಡಿಗ, ಸಂತೋಷ್ ಹೆಮ್ಮಾಡಿ, ಹಂಚು ಸಂಘದ ಮುಖಂಡರಾದ ಚಂದ್ರ ದೇವಾಡಿಗ, ಪ್ರಕಾಶ್ ಕೋಣೆ, ಲಕ್ಷ್ಮಣ ಡಿ., ಚಂದ್ರ ಪೂಜಾರಿ, ಬೀಡಿ ಕಾರ್ಮಿಕರ ಮುಖಂಡರಾದ ಬಲ್ಕಿಸ್ ಮಹಾಬಲ, ಜೆಎಂಎಸ್ ಮುಖಂಡೆ ಶೀಲಾವತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಹಯವದನ ಮೂಡುಸಗ್ರಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.






