ಪ್ರತಿದಿನ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನರಿಗೆ “ಸ್ಲೋ ಪಾಯ್ಸನ್” ನೀಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಧಿಕಾರಕ್ಕೆ ಬರುವ ಮೊದಲು “ಅಚ್ಚೇ ದಿನ್” ನೀಡುವುದಾಗಿ ದೇಶದ ಜನರಿಗೆ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಧಿಕಾರಕ್ಕೆ ಬಂದ ಬಳಿಕ ನಿರಂತರ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಟೀಕಿಸಿದರು.
ಅದಾನಿ ಹಾಗೂ ಅಂಬಾನಿ ಅವರಂತಹ ಕಾರ್ಪೊರೇಟ್ ಉದ್ಯಮಿಗಳ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ದೇಶದ ಜನರ ಬದುಕು ದುಸ್ತರವಾಗುವಂತೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿದಿನ ಸ್ವಲ್ಪ ಸ್ವಲ್ಪವೇ ಬೆಲೆ ಏರಿಕೆ ಮಾಡುವ ತಂತ್ರವನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ನಡೆ, ವ್ಯಕ್ತಿಗೆ ಗೊತ್ತಾಗದಂತೆ ನಿಧಾನವಾಗಿ ವಿಷ ನೀಡಿ ಕೊನೆಗೆ ಸಾವಿನಂಚಿಗೆ ತಳ್ಳುವ ಕ್ರಿಮಿನಲ್ ಮನಸ್ಥಿತಿಗೆ ಸಮಾನವಾಗಿದೆ ಎಂದು ರಮೇಶ್ ಕಾಂಚನ್ ವಾಗ್ದಾಳಿ ನಡೆಸಿದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ, ಮಧ್ಯಪ್ರಾಚ್ಯದ ಯುದ್ಧದ ನೆಪವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಇದರ ಮೂಲಕ ಜನರನ್ನು ಆರ್ಥಿಕವಾಗಿ ಲೂಟಿ ಮಾಡಲಾಗುತ್ತಿದೆ ಎಂದು ಅವರು ದೂರಿದರು.
ಕೇಂದ್ರ ಬಿಜೆಪಿ ಸರ್ಕಾರದ ಈ “ಸ್ಲೋ ಪಾಯ್ಸನ್” ತಂತ್ರಗಾರಿಕೆ ಈಗ ಜನರಿಗೆ ಅರ್ಥವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸರ್ಕಾರ ಜನಾಕ್ರೋಶಕ್ಕೆ ಗುರಿಯಾಗಲಿದೆ ಎಂದು ರಮೇಶ್ ಕಾಂಚನ್ ಎಚ್ಚರಿಕೆ ನೀಡಿದರು.






