ಕಳೆದ ಕೆಲವು ದಿನಗಳಿಂದ ಅವ್ಯವಸ್ಥೆಯ ಆಗರವಾಗಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತಹಶೀಲ್ದಾರ್ ಕಚೇರಿ ಆವರಣವನ್ನು ಇದೀಗ ಸ್ವಚ್ಛಗೊಳಿಸಿದ್ದು, ಸಾರ್ವಜನಿಕರು ನೆಮ್ಮದಿಯಿಂದ ಉಸಿರಾಡುವಂತಾಗಿದೆ.
ನಿರಂತರ ಮಳೆ ಸುರಿದ ಕಾರಣ ತಾಲೂಕು ಕಚೇರಿ ಎದುರಿದ್ದ ಚರಂಡಿ ನೀರು ಕಚೇರಿ ಆವರಣಕ್ಕೆ ನುಗ್ಗಿ ಎಲ್ಲೆಡೆ ಸಂಗ್ರಹವಾಗಿದ್ದರಿಂದ ದುರ್ವಾಸನೆ ಹರಡಿತ್ತು. ತಮ್ಮ ಕೆಲಸಗಳಿಗಾಗಿ ತಲೂಕು ಕಚೇರಿಗೆ ಆಗಮಿಸುತ್ತಿದ್ದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ, ಕಚೇರಿಯ ಒಳಭಾಗದಲ್ಲಿರುವ ಗಾರ್ಡನ್‌ನಲ್ಲಿಯೂ ಸ್ವಚ್ಛತೆ ಕೊರತೆ ಕಂಡುಬಂದಿದ್ದು, ಗಿಡಗಂಟಿಗಳು ಬೆಳೆದು ಅಸ್ತವ್ಯಸ್ತ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಮೇ 14ರಂದು, ರಾಮದುರ್ಗ | ಒಡೆದ ಮೋರಿ: ಗಬ್ಬು ನಾರುತ್ತಿರುವ ತಹಶೀಲ್ದಾರ್ ಕಚೇರಿ ಆವರಣ ಎಂಬ ತಲೆಬರಹದಡಿ ವರಿದಿ ಪ್ರಕಟ ಮಾಡಿತ್ತು.
ಇದರಲ್ಲಿ, ಕಚೇರಿಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿಗಳು ಹಾಗೂ ಎಲ್ಲೆಂದರಲ್ಲಿ ಹರಡಿದ್ದ ಕಸದಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರಿ ಕಚೇರಿಯೊಂದರ ಪರಿಸ್ಥಿತಿ ಹೀಗಿರುವುದು ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಸಮಸ್ಯೆಯನ್ನು ಕೂಡಲೇ ಪರಿಹರಿಸಿ ಸ್ವಚ್ಛತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ಈ ಕುರಿತು ಈ ದಿನ.ಕಾಮ್ ವಿಸ್ತ್ರತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ತಹಶೀಲ್ದಾರ್ ಕಚೇರಿಯ ಒಳ ಹಾಗೂ ಹೊರ ಆವರಣದಲ್ಲಿ ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಿ, ಚರಂಡಿ ನೀರು ತೆರವುಗೊಳಿಸುವ ಕೆಲಸ ಕೈಗೊಳ್ಳಲಾಗಿದೆ. ಅಲ್ಲದೆ, ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ, ಕಚೇರಿ ಆವರಣವನ್ನು ಸ್ವಚ್ಛಗೊಳಿಸಲಾಗಿದೆ.
ಪ್ರಸ್ತುತ ತಹಶೀಲ್ದಾರ್ ಕಚೇರಿ ಆವರಣ ಸ್ವಚ್ಛ ಹಾಗೂ ಸುಂದರವಾಗಿ ಕಾಣುತ್ತಿದ್ದು, ಸಾರ್ವಜನಿಕರು ಯಾವುದೇ ತೊಂದರೆಯಿಲ್ಲದೆ ಕಚೇರಿಗೆ ಭೇಟಿ ನೀಡಿ ತಮ್ಮ ಕೆಲಸಗಳನ್ನು ನಿರ್ವಹಿಸುವಂತಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಂಡ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿದ್ದೀರಾ? ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ; ವಿಶೇಷಾಧಿಕಾರಿ ನೇಮಕ
ಜನಸಾಮಾನ್ಯರ ಸಮಸ್ಯೆಗಳನ್ನು ಬೆಳಕಿಗೆ ತಂದು ಆಡಳಿತದ ಗಮನ ಸೆಳೆಯುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದ್ದು, ಈ ದಿನ.ಕಾಮ್ ಪ್ರಕಟಿಸಿದ ವರದಿಯ ಪರಿಣಾಮವಾಗಿ ಸಮಸ್ಯೆ ಪರಿಹಾರಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ನಿರಂತರವಾಗಿ ಬೆಳಕಿಗೆ ತರುವ ಕಾರ್ಯವನ್ನು ಮಾಧ್ಯಮಗಳು ಮುಂದುವರಿಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.





