ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳಾದ ಎಸ್ಐಆರ್ ಪ್ರಕ್ರಿಯೆ, ನೀಟ್ ಹಗರಣ ಹಾಗೂ ಬೆಲೆ ಏರಿಕೆ ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜೋಡುಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು. ಬ್ರಹ್ಮಗಿರಿಯ ಕಾಂಗ್ರೆಸ್ ಭವನದಿಂದ ಆರಂಭವಾದ ಮೆರವಣಿಗೆ ಅಜ್ಜರಕಾಡು ಮಾರ್ಗವಾಗಿ ಜೋಡುಕಟ್ಟೆ ತಲುಪಿತು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ಬದಲಾಗಿ ಮಾರಾಟವಾಗಿದೆ ಎಂದು ಆರೋಪಿಸಿದರು. ಮೊದಲ ಬಾರಿಗೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳು ಮರುಪರೀಕ್ಷೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಮಕ್ಕಳ ಮೇಲೆ ಮಾನಸಿಕ ಒತ್ತಡ ಉಂಟುಮಾಡಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಹಾಗೂ ನೀಟ್ ವ್ಯವಸ್ಥೆಯನ್ನು ರದ್ದುಗೊಳಿಸಿ ರಾಜ್ಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರದ ಆರ್ಥಿಕ ಮತ್ತು ವಿದೇಶಾಂಗ ನೀತಿಗಳು ಸಂಪೂರ್ಣ ವಿಫಲವಾಗಿದ್ದು, ಇದರ ಪರಿಣಾಮವಾಗಿ ದೇಶದ ಆರ್ಥಿಕ ಸ್ಥಿತಿ 25 ವರ್ಷ ಹಿಂದಕ್ಕೆ ಹೋಗಿದೆ ಎಂದು ಅವರು ಆರೋಪಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್, ಎಸ್ಐಆರ್ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ಕೆಲವು ಮತಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕವಿದೆ. ಈ ಪ್ರಕ್ರಿಯೆಯನ್ನು ಬಳಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಲಾಭ ಪಡೆಯುತ್ತಿದೆ ಎಂಬುದು ನಮ್ಮ ಆರೋಪವಾಗಿದೆ. ವಿವಿಧ ರಾಜ್ಯಗಳಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ,” ಎಂದು ಹೇಳಿದರು.

“ಎಸ್ಐಆರ್ ಮೂಲಕ ಸಾಮಾನ್ಯ ಜನರ ಮತದಾನದ ಹಕ್ಕನ್ನು ಕಸಿಯುವ ಕೆಲಸ ನಡೆಯಬಾರದು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತಕ್ಕೂ ಮಹತ್ವವಿದೆ. ಮತದಾನದ ಹಕ್ಕನ್ನು ಜನರಿಗೆ ನೀಡುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದಾಗಿದ್ದರೆ, ಇಂದು ಆ ಹಕ್ಕಿಗೆ ಧಕ್ಕೆಯಾಗುವಂತಹ ಕ್ರಮಗಳನ್ನು ಬಿಜೆಪಿ ಸರ್ಕಾರ ಕೈಗೊಳ್ಳುತ್ತಿದೆ,” ಎಂದು ಅವರು ಆರೋಪಿಸಿದರು.
“ಈ ಹಿನ್ನೆಲೆಯಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಮತ್ತೊಮ್ಮೆ ಸಮಗ್ರವಾಗಿ ಪರಿಶೀಲಿಸಬೇಕು. ಮತದಾರರ ಹಕ್ಕುಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಚುನಾವಣಾ ಆಯೋಗ ಮತ್ತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ಮುನಿಯಾಲು ಉದಯ ಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು.

ಪ್ರತಿಭಟನೆಯಲ್ಲಿ ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಸೇರಿದಂತೆ ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಅಮೃತ್ ಶೆಣೈ, ಕೃಷ್ಣ ಶೆಟ್ಟಿ, ಸರ್ಫುದ್ದೀನ್, ಜ್ಯೋತಿ ಹೆಬ್ಬಾರ್, ಇಸ್ಮಾಯಿಲ್ ಆತ್ರಾಡಿ, ಡಾ. ಸುನೀತಾ ಶೆಟ್ಟಿ, ಶಬ್ಬೀರ್ ಉಡುಪಿ, ಅಝೀಝ್ ಹೆಜಮಾಡಿ, ಡಾ. ಗಣನಾಥ ಎಕ್ಕಾರು, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.





