Home ಜಿಲ್ಲೆಗಳು ಉಡುಪಿ ಉಡುಪಿ | ಶಾಸಕ ಯಶ್ಪಾಲ್ ಸುವರ್ಣ ಅವರ ದ್ವೇಷ ಭಾಷಣ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ : ಸಿಪಿಎಂ

ಉಡುಪಿ | ಶಾಸಕ ಯಶ್ಪಾಲ್ ಸುವರ್ಣ ಅವರ ದ್ವೇಷ ಭಾಷಣ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ : ಸಿಪಿಎಂ

ಉಡುಪಿ | ಶಾಸಕ ಯಶ್ಪಾಲ್ ಸುವರ್ಣ ಅವರ ದ್ವೇಷ ಭಾಷಣ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ : ಸಿಪಿಎಂ

ನೀಟ್ ಪರೀಕ್ಷೆಯಲ್ಲಿನ ಅಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಶಾಂತಿಯುತ ಹೋರಾಟದ ವಿರುದ್ಧ ಬಿಜೆಪಿ ಉಡುಪಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು ಆಡಿರುವ ಸಂವಿಧಾನ ವಿರೋಧಿ, ಪ್ರಚೋದನಕಾರಿ ಹಾಗೂ ದ್ವೇಷಪೂರಿತ ಭಾಷಣವನ್ನು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಳ್ಳಬೇಕಾದ ಜನಪ್ರತಿನಿಧಿಯೊಬ್ಬರು ಸಮಾಜದಲ್ಲಿ ದ್ವೇಷ ಮತ್ತು ಉದ್ವಿಗ್ನತೆ ಸೃಷ್ಟಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ಭಾಷಣ ಮಾಡಿರುವುದು ಅತ್ಯಂತ ಖಂಡನೀಯ. ಇದು ಶಾಸಕರ ಘನತೆಗೆ ಮಾತ್ರವಲ್ಲ, ಉಡುಪಿ ಜಿಲ್ಲೆಯ ಗೌರವಕ್ಕೂ ಕಳಂಕ ತರುವಂತಹ ವರ್ತನೆಯಾಗಿದೆ ಎಂದು ಸಿಪಿಎಂ ತಿಳಿಸಿದೆ.

ಯಶ್ಪಾಲ್ ಸುವರ್ಣ ಅವರು ಶಾಸಕರಾಗುವ ಮುನ್ನವೂ ಹಲವು ವಿವಾದಾತ್ಮಕ ನಡೆ-ನುಡಿಗಳ ಮೂಲಕ ಸುದ್ದಿಯಾಗಿದ್ದರು. ಆದರೆ ಶಾಸಕರಾದ ನಂತರವೂ ತಮ್ಮ ಜವಾಬ್ದಾರಿಯ ಅರಿವಿಲ್ಲದೆ ಅದೇ ರೀತಿಯ ಪ್ರಚೋದನಕಾರಿ ಕೊಲೆ ಬೆದರಿಕೆಯ ಹೇಳಿಕೆಗಳನ್ನು ಮುಂದುವರಿಸಿರುವುದು ಅವರ ಪ್ರಜಾಪ್ರಭುತ್ವ ವಿರೋಧಿ ಹಾಗೂ ಕೊಳಕು ಮನೋಭಾವವನ್ನು ಬಯಲಿಗೆಳೆಯುತ್ತದೆ ಎಂದು ಜಿಲ್ಲಾ ಸಮಿತಿ ಆರೋಪಿಸಿದೆ.

ದೇಶದ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಮತ್ತು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸುವ ಬದಲು, ಅವರ ವಿರುದ್ಧವೇ ಪ್ರತಿಭಟನೆ ನಡೆಸಿರುವ ಬಿಜೆಪಿ, ವಿದ್ಯಾರ್ಥಿ ಮತ್ತು ಯುವಜನರ ಬಗ್ಗೆ ತನ್ನ ನೈಜ ಧೋರಣೆಯನ್ನು ಬಹಿರಂಗಪಡಿಸಿದೆ.

ಅಲ್ಲದೆ, ಜಿಲ್ಲಾಡಳಿತದ ನಿಯಮಗಳನ್ನು ಉಲ್ಲಂಘಿಸಿ ಉಡುಪಿ ಬಸ್ ನಿಲ್ದಾಣದ ಸಮೀಪ ಪ್ರತಿಭಟನೆ ನಡೆಸಿರುವುದು ಹಾಗೂ ಸಾರ್ವಜನಿಕವಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಪ್ರಕರಣವನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರುವುದರಿಂದ ಶಾಸಕ ಯಶ್ಪಾಲ್ ಸುವರ್ಣ ಅವರ ವಿರುದ್ಧವೂ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬ ತತ್ವವನ್ನು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

eedina
ಈ ದಿನ ಡೆಸ್ಕ್‌
Website | + posts