12ನೇ ಶತಮಾನದ ಶರಣ ಕ್ರಾಂತಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರು ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಕಾಯಕವೇ ಕೈಲಾಸ ತತ್ವವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಕರೆ ನೀಡಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೀದರ್ ಇವರ ಸಹಯೋಗದಲ್ಲಿ ಬುಧವಾರ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
“ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ನೆರಳಿನಂತೆ ಕಾರ್ಯನಿರ್ವಹಿಸಿ, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಹಡಪದ ಅಪ್ಪಣ್ಣನವರು ತಮ್ಮ ಕಾಯಕ, ನಿಷ್ಠೆ ಹಾಗೂ ಸರಳ ಜೀವನದ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅವರ ವಚನಗಳಲ್ಲಿನ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.

ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಶಿವಶರಣಪ್ಪ ವಾಲಿ ಅವರು, “ಶರಣರ ತತ್ವ-ಸಿದ್ಧಾಂತ ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿವೆ. ಹಡಪದ ಅಪ್ಪಣ್ಣನವರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೆ ಸಮಾನತೆ, ಮಾನವೀಯತೆ ಹಾಗೂ ಶೋಷಣೆ ರಹಿತ ಸಮಾಜ ನಿರ್ಮಾಣದ ಸಂದೇಶ ಸಾರಿದ ಮಹಾನ್ ಶರಣರಾಗಿದ್ದಾರೆ. ಯುವಜನತೆ ಶರಣರ ವಿಚಾರಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಸನ್ಮಾರ್ಗದಲ್ಲಿ ಸಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಣಿಕರಣಿಕ ಗಣೇಶ ಹಡಪದ ಎಂಬ ಐದು ವರ್ಷದ ಪುಟಾಣಿಯು ಭಾರತದ ಸಂವಿಧಾನ ಪೀಠಿಕೆಯನ್ನು ಕಂಠಪಾಠ ಮಾಡಿ ನಿರೂಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರಳಾದಳು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಶಿವಾಜಿ ವೃತ್ತದಿಂದ ವಿವಿಧ ಪ್ರಮುಖ ರಸ್ತೆಗಳಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಯು ವಿವಿಧ ವೃತ್ತಗಳ ಮಾರ್ಗವಾಗಿ ರಂಗಮಂದಿರಕ್ಕೆ ತಲುಪಿತು.
ಇದನ್ನೂ ಓದಿ : ಬೀದರ್ | ಯಾರೊಬ್ಬರೂ ವಲಸೆ ಹೋಗದಂತೆ ಕ್ರಮವಹಿಸಿ : ಸಚಿವ ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಬೀದರ ತಹಶೀಲ್ದಾರ್ ಜಿಯಾವುದ್ದೀನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಬೀದರ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ದತ್ತಾತ್ರೇಯ ಬಾಂದೇಕರ್, ಸಮಾಜದ ಮುಖಂಡರಾದ ಸಂಗಮೇಶ ಎಣಕೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.




