ಪ್ರಶ್ನೆಗಳನ್ನು ಎತ್ತುವುದಷ್ಟೇ ಮುಖ್ಯವಲ್ಲ; ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವೂ ಅಗತ್ಯ. ಸಾಹಿತ್ಯವು ಮನುಷ್ಯನಲ್ಲಿ ಪ್ರಶ್ನಿಸುವ, ವಿಶ್ಲೇಷಿಸುವ ಮತ್ತು ಹೋಲಿಕೆ ಮಾಡಿ ನೋಡುವ ಮನೋಭಾವವನ್ನು ಬೆಳೆಸುತ್ತದೆ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಹಾಗೂ ಲೇಖಕಿ ಸುಲೋಚನಾ ಪಚ್ಚಿನಡ್ಕ ಅಭಿಪ್ರಾಯಪಟ್ಟರು.
ಅವರು ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಟ್ಟಿದುದನ್ನು ಪುನರ್ಚಿಂತನೆಯ ಮೂಲಕ ಹೊಸದಾಗಿ ಕಟ್ಟುವ ಕಲೆ ಸಾಹಿತ್ಯಕ್ಕಿದೆ. ಪುಸ್ತಕಗಳು ಏಕಾಗ್ರತೆಯನ್ನು ಬೆಳೆಸುವ ಉತ್ತಮ ಸಂಗಾತಿಗಳು. ಮೊಬೈಲ್ ಬಳಕೆಯ ತ್ವರಿತ ಆಕರ್ಷಣೆಯ ನಡುವೆ, ಪುಸ್ತಕಗಳನ್ನು ದೀರ್ಘಕಾಲದ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಓದುವ ಹವ್ಯಾಸ ಸಂವೇದನೆ, ಆಲಿಸುವ ಸಾಮರ್ಥ್ಯ ಮತ್ತು ಸೌಜನ್ಯಯುತ ಸಂವಹನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳು ಬದುಕಿನ ಸವಾಲುಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಂಡು, ತಮ್ಮ ಪ್ರಯತ್ನದಿಂದ ಬದುಕನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಬಿ. ಪ್ರಸನ್ನ, ಸಾಹಿತ್ಯವು ಮನುಷ್ಯನನ್ನು ಮಾನವೀಯತೆಯತ್ತ ಕರೆದೊಯ್ಯುವ ಶಕ್ತಿಯಾಗಿದೆ. ದುರ್ವರ್ತನೆ, ದುರ್ಗುಣಗಳಿಂದ ದೂರ ಸರಿಸಿ, ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿತ್ವ ನಿರ್ಮಾಣ ಸಾಹಿತ್ಯದ ಉದ್ದೇಶವಾಗಬೇಕು ಎಂದು ಅವರು ತಿಳಿಸಿದರು.
ಸಾಹಿತ್ಯ ಸಂಘದ ಸಂಚಾಲಕಿ ರಮ್ಯಾ ಕೆ ಐತಾಳ್ ಮಾತನಾಡಿ, ಸಾಹಿತ್ಯವು ಕಲ್ಪನಾಶಕ್ತಿಯನ್ನು ಅನಾವರಣಗೊಳಿಸಿ, ಆಲೋಚನೆಗಳಿಗೆ ಧ್ವನಿ ನೀಡುತ್ತದೆ ಹಾಗೂ ಸಮಾಜದಲ್ಲಿ ಬದಲಾವಣೆ ತರಲು ಪ್ರಶ್ನಿಸುವ ಮನೋಭಾವ ಬೆಳೆಸುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಪ್ರೊ. ನಿಕೇತನ ಸಾಹಿತ್ಯವು ಮನುಷ್ಯನನ್ನು ಪ್ರಕೃತಿಯೊಂದಿಗೆ ಅನುಸಂಧಾನಗೊಳಿಸಿ, ಮನಸ್ಸುಗಳನ್ನು ಅರಳಿಸುವ ಸೃಜನಶೀಲ ಶಕ್ತಿಯಾಗಿದೆ ಎಂದರು. ಸಾಹಿತ್ಯವು ಓದುಗರನ್ನು ಚಿಂತನೆಗೆ ಹಚ್ಚುವ, ಸಂವೇದನೆಗಳನ್ನು ಅರಳಿಸುವ ಮತ್ತು ಮನುಷ್ಯರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ ಎಂದರು. ಸಾಹಿತ್ಯದ ಆಳ ಮತ್ತು ಅಗಲವನ್ನು ಅರಿಯುವ ಅಧ್ಯಯನಶೀಲತೆ, ಜೀವಪರ ಚಿಂತನೆ ಹಾಗೂ ಸೃಜನಶೀಲ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಇಂಚರ ಅತಿಥಿಗಳನ್ನು ಪರಿಚಯಿಸಿದರು. ನಿಖಿತ ಸ್ವಾಗತಿಸಿದರು. ನಾಗರತ್ನ ವಂದಿಸಿದರು. ಭವ್ಯಶ್ರೀ ಭಾವಗೀತೆ ಹಾಡಿದರು.
ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕಿ ರೇಖಾ ಎಸ್ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.






