ಮನುಷ್ಯ ತನ್ನ ಎಲ್ಲಾ ಸಣ್ಣತನಗಳನ್ನು ಕಳೆದುಕೊಂಡು ಮಾನವೀಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಮೂಕಜ್ಜಿಯ ಕನಸು ಕಾದಂಬರಿಯ ಪ್ರಮುಖ ಸಂದೇಶವಾಗಿದೆ ಎಂದು ಲೇಖಕ ಪ್ರೊ.ಸ್ವೀವನ್ ಕ್ವಾಡ್ರಸ್ ಹೇಳಿದರು.
ಅವರು ಮಂಗಳವಾರ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ಡಾ.ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ನಡೆದ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-13 ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ “ಮೂಕಜ್ಜಿಯ ಕನಸು – ಒಂದು ಚಿಂತನೆ” ವಿಷಯದ ಕುರಿತು ಉಪನ್ಯಾಸ ನೀಡಿದರು.
ಮೂಕಿಯಾಗಿದ್ದ ಮೂಕಜ್ಜಿ ಪ್ರತಿಯೊಂದನ್ನೂ ಪ್ರಶ್ನಿಸುತ್ತಾ ಮಾನವೀಯ ಗುಣಗಳನ್ನು ಸಮರ್ಥಿಸುವುದು ವಿಶೇಷವಾಗಿದ್ದು, ಸಮಾಜದಲ್ಲಿ ವೈಚಾರಿಕತೆ ಬೆಳೆಸುವಲ್ಲಿ ಈ ಕಾದಂಬರಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಕಿರಣ್ ಎಂ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿರುವ ಮೌಢ್ಯ ಮತ್ತು ಅಸಮಾನತೆಗಳನ್ನು ಪ್ರಶ್ನಿಸುವ ಕ್ರಾಂತಿಕಾರಿ ಮನೋಭಾವವನ್ನು ಮೂಕಜ್ಜಿಯ ಕನಸು ಪುಸ್ತಕ ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆ ಅತ್ಯಗತ್ಯ ಎಂದರು.
ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಶಿವರಾಮ ಕಾರಂತರ ಬರಹಗಳು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುತ್ತವೆ. ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡದೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಲೋಕೇಶ್ ಉಪಸ್ಥಿತರಿದ್ದರು. ಟ್ರಸ್ಟಿನ ಸದಸ್ಯ ಸತೀಶ್ ಕೊಡವೂರು ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







