ಅಂಬೇಡ್ಕರ್ ಅವರನ್ನು ರಾಷ್ಟ್ರದ ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸುತ್ತೇವೆ. ಅವರನ್ನು ಮಹಾನ್ ಚಿಂತಕ, ನಾಯಕ ಅಂತೆಲ್ಲಾ ಒಪ್ಪಿಕೊಳ್ಳುತ್ತೇವೆ. ಆದರೆ ಅವರ ಅರ್ಥಶಾಸ್ತ್ರದ ಕೊಡುಗೆಗಳನ್ನು ಗಮನಿಸುವುದಿಲ್ಲ. ಆದರೆ ಪ್ರಾರಂಭಿಕ ದಿನಗಳಲ್ಲಿ ಅವರು ತೊಡಗಿಕೊಂಡಿದ್ದೇ ಅರ್ಥಶಾಸ್ತ್ರದಲ್ಲಿ, ಅದನ್ನು ಅವರು ವ್ಯವಸ್ಥಿತವಾಗಿ ಅಧ್ಯಯನ ಮಾಡಿದ್ದರು. ಭಾರತದಿಂದ ವಿದೇಶಕ್ಕೆ ಹೋಗಿ ಅರ್ಥಶಾಸ್ತ್ರದಲ್ಲಿ ಉನ್ನತ ಅಧ್ಯಯನ ಮಾಡಿದ ಮೊದಲಿಗರಲ್ಲಿ ಅವರೂ ಒಬ್ಬರು. ಅವರಿಗಿಂತ ಮೊದಲು ದಾದಾಬಾಯಿ ನವರೋಜಿ, ರಾನಡೆ ಇವರೆಲ್ಲಾ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರಾರೂ ವೃತ್ತಿಪರ ಅರ್ಥಶಾಸ್ತ್ರಜ್ಞರಲ್ಲ. ರಾಜಕೀಯ ಉದ್ದೇಶಕ್ಕಾಗಿ ಆರ್ಥಿಕ ವಿಶ್ಲೇಷಣೆ ಮಾಡಿದವರು. ಅಂಬೇಡ್ಕರ್ ಅಮೇರಿಕೆಯ ಕೊಲೊಂಬಿಯ ವಿಶ್ವವಿದ್ಯಾನಿಲಯ, ಹಾಗೂ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರ ಮಾರ್ಗದರ್ಶನಲ್ಲಿ ಅಧ್ಯಯನ ಮಾಡಿದ್ದಾರೆ. ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಆದರೆ ಅಧ್ಯಯನ ಮುಗಿಸಿ ಭಾರತಕ್ಕೆ ಹಿಂತಿರುಗಿದ ಮೇಲೆ ಕೆಲ ಕಾಲ ಬಾಂಬೆಯಲ್ಲಿ ಅಧ್ಯಾಪನ ಮಾಡಿದ್ದು ಬಿಟ್ಟರೆ ಅವರು ಅದನ್ನು ಮುಂದುವರಿಸಲಿಲ್ಲ. ಅವರನ್ನು ಒಬ್ಬ ಅರ್ಥಶಾಸ್ತ್ರಜ್ಞ ಎಂದು ಗುರುತಿಸದೇ ಇರುವುದಕ್ಕೆ ಅದು ಒಂದು ಕಾರಣವೆನ್ನಲಾಗಿದೆ. ಆದರೆ ಅವರನ್ನು ಕೇವಲ ಒಬ್ಬ ದಲಿತ ನಾಯಕರನ್ನಾಗಿಯಷ್ಟೇ ಸೀಮಿತಗೊಳಿಸುವ ಪ್ರಯತ್ನ ಬಹುತೇಕ ಈ ನಿರ್ಲಕ್ಷ್ಯಕ್ಕೆ ಕಾರಣ ಅನ್ನುವುದು ವಾಸ್ತವ. ಅವರ ಆರ್ಥಿಕ ಚಿಂತನೆಗಳನ್ನು ನಿರ್ಲಕ್ಷಿಸಿದ್ದರಿಂದ ಭಾರತೀಯ ಸಮಾಜವನ್ನು ಗ್ರಹಿಸಿಕೊಳ್ಳುವುದಕ್ಕೆ ಅವಶ್ಯಕವಾಗಿದ್ದ ಒಂದು ಆಯಾಮವನ್ನೇ ನಾವು ಕಳೆದುಕೊಂಡಿದ್ದೇವೆ ಅನ್ನುವುದೂ ಅಷ್ಟೇ ಸತ್ಯ.
ಅಂಬೇಡ್ಕರ್ ಅವರು 1923ರಲ್ಲಿ ಭಾರತಕ್ಕೆ ಮರಳಿದ ನಂತರ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಇತ್ಯಾದಿಗಳ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಹೋರಾಟಕ್ಕಿಳಿದರು. ಹಾಗಾಗಿ ಅವರು ಬರೆದದ್ದು ಮತ್ತು ಮಾತನಾಡಿದ್ದು ಹೆಚ್ಚಾಗಿ ಸಾಮಾಜಿಕ ವ್ಯವಸ್ಥೆ, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಇತ್ಯಾದಿಗಳ ಬಗ್ಗೆ, ನೇರವಾಗಿ ಅರ್ಥಶಾಸ್ತ್ರದ ಬಗ್ಗೆ ಏನನ್ನೂ ಬರೆಯದಿದ್ದರೂ ಅವರ ಉಳಿದ ಬರಹಗಳಲ್ಲೂ ಆಳವಾದ ಆರ್ಥಿಕ ಒಳನೋಟಗಳಿರುತ್ತಿತ್ತು. ಅವರ ವಿವಿಧ ಆಯೋಗಗಳಿಗೆ, ಸರ್ಕಾರಕ್ಕೆ ನೀಡಿದ ಮನವಿಗಳು, ದಾಖಲಿಸಿದ ಸಾಕ್ಷ್ಯಗಳು, ಹೇಳಿಕೆಗಳು, ಭಾಷಣಗಳು, ಪುಸ್ತಕ ವಿಮರ್ಶೆ ಹೀಗೆ ಪ್ರತಿಯೊಂದರಲ್ಲೂ ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಅವರಿಗಿದ್ದ ಆಳವಾದ ಒಳನೋಟ ಕಾಣುತ್ತದೆ. ಅವರು ಸಂವಿಧಾನ ಸಭೆಗೆ ನೀಡಿದ ‘ಸ್ಟೇಟ್ಸ್ ಅಂಡ್ ಮೈನಾರಿಟೀಸ್’ ಪತ್ರವನ್ನು ಕೇವಲ ಒಂದು ರಾಜಕೀಯ ಪತ್ರವನ್ನಾಗಿ ನೋಡುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿ ಅವರ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಒಳನೋಟ ಸಿಗುತ್ತದೆ. ಭಾರತದ ಸಾಮಾಜಿಕ ಪಿಡುಗುಗಳನ್ನು ಆರ್ಥಿಕ ಆಯಾಮದಿಂದ ವಿಶ್ಲೇಷಿಸಿದವರಲ್ಲಿ ಬಹುಶಃ ಇವರು ಮೊದಲಿಗರು. ಅಷ್ಟೇ ಅಲ್ಲ ಅವರು ರಚಿಸಿದ ಸಂವಿಧಾನದಲ್ಲಿ ಇರುವಷ್ಟು ಆರ್ಥಿಕ ಹಾಗೂ ಹಣಕಾಸಿನ ನಿಬಂಧನೆಗಳು ಜಗತ್ತಿನ ಬೇರೆ ಯಾವುದೇ ಸಂವಿಧಾನದಲ್ಲೂ ಇದ್ದಂತಿಲ್ಲ.
ಅವರ ಆರ್ಥಿಕ ವಿಚಾರಗಳನ್ನು ಎರಡು ಹಂತಗಳಲ್ಲಿ ನೋಡಬಹುದು. ಒಂದು ಅವರ ಅಧಿಕೃತ ಆರ್ಥಿಕ ಬರಹಗಳು. ಅಂದರೆ ವಿಶ್ವವಿದ್ಯಾನಿಲಯಗಳಲ್ಲಿ ಅವರು ಪದವಿಗಳಿಗಾಗಿ ಸಲ್ಲಿಸಿದ ಸಂಶೋಧನಾ ಪ್ರಬಂಧಗಳು. ಇನ್ನೊಂದು ಸಾಮಾಜಿಕ ರಾಜಕೀಯ ಬರಹಗಳಲ್ಲಿ ವ್ಯಕ್ತವಾಗಿರುವ ಆರ್ಥಿಕ ಒಳನೋಟಗಳು. ಇವೆಲ್ಲಾ 1923ರವರೆಗೆ ಬರೆದ ಬರಹಗಳು. ಈ ಆರಂಭಿಕ ಶೈಕ್ಷಣಿಕ ಬರಹಗಳಲ್ಲಿ ಅನಂದ್ ತೇಲ್ತುಂಬೆ ಗುರುತಿಸುವಂತೆ ಅಂಬೇಡ್ಕರ್ ಅವರ ಆರಂಭಿಕ ಶೈಕ್ಷಣಿಕ ಬರಹಗಳಲ್ಲಿ ಅವರ ನಂತರದ ಜೀವನದ ಮುಖ್ಯ ಕಾಳಜಿಯಾಗಿದ್ದ ದಲಿತರ ವಿಮೋಚನೆಯ ಬಗ್ಗೆ ಯಾವುದೇ ಚರ್ಚೆಯೂ ಕಾಣಿಸುವುದಿಲ್ಲ.
ಮೊದಲನೆಯದಾಗಿ ಅವರ ಅಧಿಕೃತ ಆರ್ಥಿಕ ಬರಹಗಳನ್ನು ಗಮನಿಸೋಣ. ಕೊಲೊಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿಗಾಗಿ ಅವರು ‘ಪ್ರಾಚೀನ ಭಾರತೀಯ ವಾಣಿಜ್ಯ’ ಮತ್ತು ‘ಭಾರತದ ರಾಷ್ಟ್ರೀಯ ಡಿವಿಡೆಂಡ್- ಒಂದು ಚಾರಿತ್ರಿಕ ಹಾಗೂ ವಿಶ್ಲೇಷನಾತ್ಮಕ ಅಧ್ಯಯನ” ಎಂಬ ಪ್ರಬಂಧಗಳನ್ನು ಸಲ್ಲಿಸಿದರು. ನಂತರ ಇದನ್ನು ವಿಸ್ತರಿಸಿ ಪಿಎಚ್ಡಿ ಪದವಿಗಾಗಿ ಸಂಶೋಧನಾ ಪ್ರಬಂಧವನ್ನು 1916ರಲ್ಲಿ ಮಂಡಿಸಿದರು. ನಂತರ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಎಂಎಸ್ಸಿ ಪದವಿಗಾಗಿ 1921ರಲ್ಲಿ ‘ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ’ ಎಂಬ ವಿಷಯದ ಬಗ್ಗೆ ಪ್ರಬಂಧ ಬರೆದರು. ನಂತರ ಡಿಎಸ್ಸಿ ಪದವಿಗಾಗಿ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ‘ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ ಎಂಬ ಪ್ರಬಂಧವನ್ನು ಸಲ್ಲಿಸಿದರು. ಇವೆಲ್ಲವೂ ಸಾರ್ವಜನಿಕ ಹಣಕಾಸಿಗೆ ಸಂಬಂಧಿಸಿದ ಸಂಶೋಧನೆಗಳಾಗಿದ್ದವು. ಇದರಲ್ಲಿ ಅವರು ತಮ್ಮ ವಾದವನ್ನು ಸಮರ್ಥಿಸುವುದಕ್ಕೆ ಐತಿಹಾಸಿಕ ಅಧ್ಯಯನದ ಜೊತೆಗೆ, ಸಂಬಂಧಿಸಿದ ಅಂಕಿ-ಅಂಶಗಳನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಆರ್ಥಿಕ ತತ್ತ್ವಗಳನ್ನು ಕೂಡ ಬಳಸಿಕೊಂಡಿದ್ದಾರೆ. ರೂಪಾಯಿ ಸಮಸ್ಯೆ ಕುರಿತ ಕೃತಿಯಲ್ಲಿ ಗೋಲ್ಡ್ ಸ್ಟಾಂಡರ್ಡ್ ಬದಲಿಗೆ ಚಿನ್ನದ ವಿನಿಮಯ ಸ್ಟಾಂಡರ್ಡ ಪದ್ದತಿಯನ್ನು ಜಾರಿಗೆ ತಂದ ಬಗ್ಗೆ ಚರ್ಚಿಸಿದ್ದಾರೆ. ಇದು ಆ ಕಾಲದ ಅರ್ಥಶಾಸ್ತ್ರಜ್ಞರ ನಡುವೆ ಗಂಭೀರವಾಗಿ ಚರ್ಚೆಯಾಗುತ್ತಿದ್ದ ವಿಷಯ.

ಅಂಬೇಡ್ಕರ್ ಅವರು ತಮ್ಮ ಶೈಕ್ಷಣಿಕ ಸಂಶೋಧನೆಗಳಿಗಾಗಿ ಆರಿಸಿಕೊಂಡ ವಿಷಯಗಳೆಲ್ಲಾ ರಾಜ್ಯದ ಆಡಳಿತ ಮತ್ತು ಹಣಕಾಸಿಗೆ ಸಂಬಂಧಿಸಿದ ವಿಷಯಗಳೆ. ಏಕೆ ಈ ವಿಷಯಗಳನ್ನು ಆರಿಸಿಕೊಂಡರು ಅನ್ನುವುದಕ್ಕೆ ಅನಂದ್ ತೇಲ್ತುಂಬ್ಲೆ ಕೆಲವು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದಾಗಿ ಅಂಬೇಡ್ಕರ್ ಅವರು ಆರಿಸಿಕೊಂಡ ವಿಷಯಗಳು ಅಂದಿನ ಕಾಲಕ್ಕೆ ಅತ್ಯಂತ ಪ್ರಸ್ತುತವಾಗಿದ್ದವು ಮತ್ತು ಆಳವಾದ ಕಲಿಕೆಗೆ ಅವಕಾಶ ಮಾಡಿಕೊಟ್ಟಿದ್ದವು.
ಶೈಕ್ಷಣಿಕ ಅಧ್ಯಯನದ ಮುಖ್ಯ ಉದ್ದೇಶವೆ ಕಲಿಕೆ ಮತ್ತು ಜ್ಞಾನಾರ್ಜನೆ, ಎರಡನೆಯದಾಗಿ ಅವರ ಸಂಶೋಧನೆಗೆ ಮಾರ್ಗದರ್ಶನ ಮಾಡುತ್ತಿದ್ದವರು ಆ ವಿಷಯಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಪ್ರಭಾವಿ ತಜ್ಞರಾಗಿದ್ದರು. ಮೂರನೆಯದಾಗಿ ಅಂಬೇಡ್ಕರ್ ಅವರಿಗೆ ಭಾರತದ ಮೇಲೆ ಬ್ರಿಟಿಷ್ ವಸಾಹತುಶಾಹಿ ನಡೆಸುತ್ತಿದ್ದ ಶೋಷಣೆಯ ತಂತ್ರಗಳನ್ನು ಜಗತ್ತಿನ ಮುಂದೆ ತೆರೆದಿಡಬೇಕಿತ್ತು. ಅದಕ್ಕೆ ಆಡಳಿತ ಹಾಗೂ ಹಣಕಾಸು ಅತ್ಯಂತ ಸೂಕ್ತವಾದ ಕ್ಷೇತ್ರವಾಗಿತ್ತು.
ಅಂಬೇಡ್ಕರ್ ಅವರು ಇಲ್ಲಿ ಹಳೆಯ ಕಾಲದ ‘ರಾಜಕೀಯ ಅರ್ಥಶಾಸ್ತ್ರದ ಪರಂಪರೆಯ ಭಾಗವಾಗಿ ಬರೆಯುತ್ತಿದ್ದರು. ಆಗಿನ ಬಹುತೇಕ ಬರಹಗಳಂತೆ ಅವರ ಬರಹಗಳಲ್ಲೂ ರಾಜಕೀಯ ಹಾಗೂ ಅರ್ಥಶಾಸ್ತ್ರ ಯಾವಾಗಲೂ ಒಂದಕ್ಕೊಂದು ಬೆಸೆದುಕೊಂಡಿರುತ್ತಿದ್ದವು. ನಂತರದಲ್ಲಿ ಅವರ ಸಾಮಾಜಿಕ ವಿಶ್ಲೇಷಣೆಯಲ್ಲಿ ರಾಜಕೀಯ ಹಾಗೂ ಅರ್ಥಶಾಸ್ತ್ರ ಸೇರಿಕೊಂಡಿತ್ತು. ಅಂಬೇಡ್ಕರ್ ಈ ಕೃತಿಗಳನ್ನು ರಚಿಸುವ ಸಂದರ್ಭದಲ್ಲಿ ರಾಜಕೀಯ ಚಳುವಳಿ ತೀವ್ರವಾಗಿತ್ತು. ಸಹಜವಾಗಿಯೇ ಅಂಬೇಡ್ಕರ್ ಮೇಲೂ ಅದರ ಪ್ರಭಾವ ಕಾಣುತ್ತಿತ್ತು. ಅವರ ಆಗಿನ ಎಲ್ಲಾ ಬರಹಗಳಲ್ಲೂ ಒಂದು ಬಗೆಯ ದೇಶಪ್ರೇಮದ ಛಾಯೆಯನ್ನು ಕಾಣಬಹುದು. ನಾನು ಮುಖ್ಯವಾಗಿ ಭಾರತೀಯ ಜನರ ಹಿತದೃಷ್ಟಿಯಿಂದ ಬರೆಯುತ್ತಿದ್ದೇನೆ”ಎಂದು ಅವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ತಮ್ಮ ಕೃತಿಗಳಲ್ಲಿ ಬ್ರಿಟಿಷ್ ನೀತಿಗಳು ಭಾರತದ ಹಿತಾಸಕ್ತಿಗೆ ಹೇಗೆ ಮಾರಕವಾಗಿವೆ ಎಂಬುದನ್ನು ಅಂಕಿ ಅಂಶಗಳ ಸಮೇತ ಸಾಬೀತುಪಡಿಸಿದ್ದರು. ಅವರ ಬರಹಗಳಲ್ಲಿ ಕಾಣುವ ದೇಶಪ್ರೇಮಿ ಛಾಯೆಯಿಂದಾಗಿಯೇ ಬಹುಶಃ ಬ್ರಿಟಿಷರು ಅವರನ್ನು ಒಬ್ಬ ‘ಕ್ರಾಂತಿಕಾರಿ’ ಎಂದು ಶಂಕಿಸಿ, ಅವರ ಲಗೇಜುಗಳನ್ನು ತಪಾಸಣೆ ಮಾಡಿದ್ದೂ ಉಂಟು.
ಆದರೆ ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನೇರವಾಗಿ ಭಾಗವಹಿಸಲಿಲ್ಲ. ಇದಕ್ಕೆ ತೇಲ್ತುಂಬೆ ಮೂರು ಮುಖ್ಯ ಕಾರಣಗಳನ್ನು ನೀಡುತ್ತಾರೆ. ಒಂದು ಜ್ಯೋತಿಬಾ ಫುಲೆಯವರಂತೆ ಅಂಬೇಡ್ಕರ್ ಕೂಡ ಭಾರತವನ್ನು ಒಂದು ‘ರಾಷ್ಟ್ರ’ ಎಂದು ಒಪ್ಪಿಕೊಂಡಿರಲಿಲ್ಲ. ಎರಡನೆಯದಾಗಿ ಅವರು ರಾಷ್ಟ್ರೀಯತೆಗಿಂತ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ಮಾನವೀಯ ಮೌಲ್ಯಗಳೇ ಶ್ರೇಷ್ಠ ಎಂದು ನಂಬಿದ್ದರು. ಮೂರನೆಯದಾಗಿ ಮೇಲ್ವರ್ಗದ ಹಿಂದುಗಳ ಸಾವಿರಾರು ವರ್ಷಗಳ ದಬ್ಬಾಳಿಕೆಯಿಂದ ಮುಕ್ತಿ ಪಡೆಯಲು ಬ್ರಿಟಿಷ್ ಆಡಳಿತವು ಒಂದು ದಾರಿಯಾಗಬಲ್ಲದು ಎಂದು ಅವರು ಭಾವಿಸಿದ್ದರು. ಬ್ರಿಟಿಷರ ಮೂಲಕ ದಲಿತರಿಗೆ ಸಾಮಾಜಿಕ ಹಕ್ಕುಗಳನ್ನು ಕೊಡಿಸುವುದು ಅವರ ತಂತ್ರವಾಗಿತ್ತು. ಹಾಗಾಗಿಯೇ ಅವರು ಬ್ರಿಟಿಷ್ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯದೆ. ಸರ್ಕಾರದ ಭಾಗವಾಗಿಯೇ (ಮಂತ್ರಿಗಳಾಗಿ) ದಲಿತರ ಹಕ್ಕುಗಳಿಗಾಗಿ ಹೋರಾಡಲು ನಿರ್ಧರಿಸಿದರು ಬ್ರಿಟಿಷ್ ಆಡಳಿತದಲ್ಲಿನ ಸಾರ್ವಜನಿಕ ಹಣಕಾಸು ವ್ಯವಸ್ಥೆ ಭಾರತದ ಆರ್ಥಿಕ ಇತಿಹಾಸದಲ್ಲಿ ಬಹಳ ಮುಖ್ಯವಾದ ವಿಷಯವಾಗಿದ್ದರೂ, ಎಂ.ಜಿ. ರಾನಡೆಯವರನ್ನು ಹೊರತುಪಡಿಸಿ ಯಾರೂ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಅಂಬೇಡ್ಕರ್ ಅವರ ಅಧ್ಯಯನ ನಿಜವಾಗಿಯೂ ಮಹತ್ವದ್ದು. ಅವರ ಮಾರ್ಗದರ್ಶಿ ಎಡ್ರಿನ್ ಆರ್ ಎ ಸೆಲಿಗ್ನನ್ ಗುರುತಿಸುವಂತೆ :
“ಈ ಚರ್ಚೆಯಲ್ಲಿ ಅಂಬೇಡ್ಕರ್ ಅವರ ಚರ್ಚೆಯ ಮಹತ್ವ ಗಣನೀಯವಾದದ್ದು. ತಮ್ಮ ವಾದಕ್ಕೆ ಬೇಕಾದ ಅಂಕಿ-ಅಂಶಗಳನ್ನು ನೀಡುವುದರ ಜೊತೆಗೆ ತನ್ನ ದೇಶದಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಬೆಳವಣೆಗೆಯ ಅತ್ಯಂತ ನಿಷ್ಪಕ್ಷಪಾತವಾದ ವಿಶ್ಲೇಷಣೆಯನ್ನು ನೀಡುತ್ತಾರೆ. ಇದನ್ನು ಬೇರೆ ದೇಶಗಳಿಗೂ ಅನ್ವಯಿಸಬಹುದು. ನನಗೆ ತಿಳಿದಮಟ್ಟಿಗೆ ಈ ವಿಷಯವನ್ನು ಕುರಿತಂತೆ ಇಷ್ಟೊಂದು ವಿವರವಾದ ಅಧ್ಯಯನವನ್ನು ಬೇರೆ ಯಾರೂ ಮಾಡಿಲ್ಲ.”
ಈಸ್ಟ್ ಇಂಡಿಯ ಆಳ್ವಿಕೆಯಲ್ಲಿ ನಿಧಾನವಾಗಿ ವಿತ್ತೀಯ ಅಧಿಕಾರ ಕೇಂದ್ರೀಕರಣಗೊಳ್ಳುತ್ತಾ ಹೋಯಿತು. ಬ್ರಿಟಿಷರ ಆಳ್ವಿಕೆಯ ಪ್ರಾರಂಭದಲ್ಲಿ ಬಂಗಾಳ, ಮದ್ರಾಸ್ ಮತ್ತು ಮುಂಬೈ ಪ್ರಾಂತ್ಯಗಳಿಗೆ ಅವುಗಳದೇ ಆದ ಸ್ವತಂತ್ರ ತೆರಿಗೆ ಮತ್ತು ಆಡಳಿತ ವ್ಯವಸ್ಥೆ ಇತ್ತು. ಆದರೆ 1833ರ ನಂತರ ಬ್ರಿಟಿಷರು ಎಲ್ಲವನ್ನೂ ಕೇಂದ್ರಿಕೃತಗೊಳಿಸಿ 1833ರಲ್ಲಿ ಸಾಮ್ರಾಜ್ಯಶಾಹಿ ಹಣಕಾಸು ವ್ಯವಸ್ಥೆಯನ್ನು ಜಾರಿಗೆ ತಂದರು. ಆದರೆ ಇದು ಸಫಲವಾಗಲಿಲ್ಲ. ಹಣಕಾಸಿನ ಕೊರತೆಯಿಂದಾಗಿ ಈ ಕೇಂದ್ರೀಕೃತ ವ್ಯವಸ್ಥೆ ವಿಫಲವಾಯಿತು. ಅಂಬೇಡ್ಕರ್ ಈ ಹಣಕಾಸಿನ ವಿಫಲತೆಗೆ ನಾಲ್ಕು ಕಾರಣಗಳನ್ನು ಗುರುತಿಸುತ್ತಾರೆ.
ಮೊದಲನೆಯದಾಗಿ ಸರ್ಕಾರದ ಆರ್ಥಿಕ ಯೋಜನೆಗಳು ಮತ್ತು ಆರ್ಥಿಕ ನಿರ್ವಹಣೆ ಸರಿಯಾಗಿರಲಿಲ್ಲ. ಎರಡನೆಯದಾಗಿ ರೈತರ ಮೇಲೆ ವಿಪರೀತ ತೆರಿಗೆ ಹೇರಲಾಗಿತ್ತು. ಭೂ ಕಂದಾಯದ ಪ್ರಮಾಣವು ಕನಿಷ್ಠ 31.68% ರಿಂದ ಗರಿಷ್ಠ 66.17% ವರೆಗಿತ್ತು (ಸರಾಸರಿ 52.48% ರಷ್ಟು ತೆರಿಗೆ ಇತ್ತು). ಮೂರನೆಯದಾಗಿ ತೆರಿಗೆ ತೀರಾ ಅಸಮಾನವಾಗಿತ್ತು. ಇದರಿಂದ ಸಮಾಜದ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಂಡಿತು. ಆಂತರಿಕ ಮತ್ತು ವಿದೇಶಿ ವ್ಯಾಪಾರದ ಮೇಲೆ ಮೇಲೆ ಬೇಕಾಬಿಟ್ಟಿ ತೆರಿಗೆ ಹಾಕಿದ್ದರಿಂದ ದೇಶದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ತೊಂದರೆಯಾಯಿತು.
ಬ್ರಿಟಿಷ್ ಸರ್ಕಾರದ ಈ ತಪ್ಪು ಕಂದಾಯ ಪದ್ದತಿಯೇ ಭಾರತದ ಎಲ್ಲಾ ಆರ್ಥಿಕ ಸಮಸ್ಯೆಗಳಿಗೆ ನೇರವಾಗಿ ಕಾರಣ ಎಂಬುದನ್ನು ಅಂಕಿ ಅಂಶಗಳ ಸಮೇತ ಅಂಬೇಡ್ಕರ್ ಸಾದರಪಡಿಸಿದ್ದರು.
ಸಮಸ್ಯೆ ಕೇವಲ ತೆರಿಗೆ ಸಂಗ್ರಹಣೆಯದ್ದಲ್ಲ. ಸಾರ್ವಜನಿಕ ಖರ್ಚಿನ ವಿಷಯದಲ್ಲೂ ಸಮಸ್ಯೆಗಳಿದ್ದವು, ಬ್ರಿಟಿಷ್ ಸರ್ಕಾರ ಕಠಿಣ ತೆರಿಗೆ ಮೂಲಕ ವಸೂಲಿ ಮಾಡುತ್ತಿದ್ದ ಹಣದಲ್ಲಿ ಶೇ. 45ರಿಂದ ಶೇ. 65ರಷ್ಟು ಕೇವಲ ಮಿಲಿಟರಿಗಾಗಿ ಖರ್ಚಾಗುತ್ತಿತ್ತು. ಜನಸಾಮಾನ್ಯರ ಶಿಕ್ಷಣ ಅಥವಾ ಆರೋಗ್ಯಕ್ಕೆ ದುಡ್ಡ ಉಳಿಯುತ್ತಿರಲಿಲ್ಲ. ಹೀಗೆ ಬಡವರಿಂದ ಕಿತ್ತುಕೊಂಡ ಹಣವು ಸಮಾಜದ ಅಭಿವೃದ್ಧಿಗೆ ಬಳಕೆಯಾಗದೆ ಬರೀ ಯುದ್ಧ ಮತ್ತು ಬ್ರಿಟಿಷರ ಆಡಳಿತಕ್ಕೆ ಬಳಕೆಯಾಗುತ್ತಿತ್ತು.
ಅಂಬೇಡ್ಕರ್ ಅವರ ಪ್ರಕಾರ, “ಹಣಕಾಸು ಎಂಬುದು ಆಡಳಿತ ಯಂತ್ರದ ಇಂಧನ. ಸರ್ಕಾರಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿಕೊಂಡು ಆಡಳಿತ ನಡೆಸಬೇಕು. ಆದರೆ ಅಂದಿನ ‘ದ್ವಿಪ್ರಭುತ್ವ’ (Diarchy) ವ್ಯವಸ್ಥೆಯಲ್ಲಿ ಯಾರಿಗೂ ಜವಾಬ್ದಾರಿ ಇರಲಿಲ್ಲ. ಜನರ ನಾಡಿಮಿಡಿತ ಅರಿಯದ ಸರ್ಕಾರದಿಂದ ಉತ್ತಮ ಹಣಕಾಸು ವ್ಯವಸ್ಥೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ”ಎಂದು ಅವರು ವಾದಿಸಿದರು. ಅಂಬಿರಾಜನ್ ಹೇಳುವಂತೆ ಅಂಬೇಡ್ಕರ್ ಅವರ ಟೀಕೆ ಇಂದಿಗೂ ಅನ್ವಯವಾಗುತ್ತದೆ. ಇಂದಿಗೂ ಭಾರತದಲ್ಲಿ ತೆರಿಗೆ ವ್ಯವಸ್ಥೆ ಬಡವರ ಪರವಾಗಿಲ್ಲ. ಶ್ರೀಮಂತ ಕಂಪನಿಗಳ ಮೇಲಿನ ತೆರಿಗೆಗಿಂತ ಸಾಮಾನ್ಯ ಜನರ ಮೇಲಿನ ಪರೋಕ್ಷ ತೆರಿಗೆಯ ಹೊರೆ ಹೆಚ್ಚಿದೆ. ಕಂಪೆನಿಗಳು ದೊಡ್ಡದಾದಷ್ಟೂ ಅವರು ಕಟ್ಟುವ ತೆರಿಗೆ ಕಡಿಮೆಯಾಗುತ್ತದೆ. ಬ್ರಿಟಿಷರ ಕಾಲದಂತೆಯೇ ಇಂದಿಗೂ ಶಿಕ್ಷಣ ಮತ್ತು ಆರೋಗ್ಯವನ್ನು ನಿರ್ಲಕ್ಷಿಸಲಾಗಿದೆ. ಇಂದಿಗೂ ಶಿಕ್ಷಣಕ್ಕೆ ಕೇವಲ ಶೇ. 3-4 ಮತ್ತು ಆರೋಗ್ಯಕ್ಕೆ ಕೇವಲ ಶೇ. 1-1.2ರಷ್ಟು ಮಾತ್ರ ಖರ್ಚು ಮಾಡಲಾಗುತ್ತಿದೆ. ಬದಲಾಗಿ ಮಿಲಿಟರಿ ಮತ್ತು ಪೊಲೀಸರ ಮೇಲಿನ ಖರ್ಚು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಂಬೇಡ್ಕರ್ ಅವರು ಬ್ರಿಟಿಷರ ಆರ್ಥಿಕ ಲೂಟಿಯನ್ನು ಬಯಲಿಗೆಳೆಯಲು ಮಾಡಿರುವ ವಿಶ್ಲೇಷಣೆಯನ್ನು ಇಂದಿನ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಅಳೆಯಲು ಒಂದು ಮಾಪನವಾನ್ನಾಗಿ ಬಳಸಬಹುದು.
ರೂಪಾಯಿಯ ಸಮಸ್ಯೆ
ಕೊಲೊಂಬಿಯಾದಲ್ಲಿ ತಮ್ಮ ವ್ಯಾಸಂಗ ಮುಗಿಸಿದ ನಂತರ. ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ತಮ್ಮ ಎರಡನೇ ಡಾಕ್ಟರೇಟ್ ಪದವಿಗಾಗಿ ‘ದಿ ಪ್ರಾಬ್ಲೆಂ ಆಫ್ ದಿ ರೂಪಾಯಿ’ ಪ್ರಬಂಧವನ್ನು ಮಂಡಿಸಿದರು. ( ಆ ಗ್ರಂಥದ ವಿವರವಾದ ಚರ್ಚೆಯನ್ನು ಪ್ರತ್ಯೇಕ ಬಾಕ್ಸ್ನಲ್ಲಿ ನೀಡಲಾಗಿದೆ). ಅವರು ಅದರಲ್ಲಿ ಚಿನ್ನದ ಮಾನದಂಡವನ್ನು ಬಲವಾಗಿ ಬೆಂಬಲಿಸಿದರು. ಒಂದು ದೇಶದ ಬಳಿ ಎಷ್ಟು ಚಿನ್ನದ ಸಂಗ್ರಹ ಇರುತ್ತದೆಯೋ ಅದಕ್ಕೆ ಅನುಗುಣವಾಗಿ ಹಣವನ್ನು ಮುದ್ರಿಸಬೇಕು. ಆಗ ಹಣದ ಮೌಲ್ಯದಲ್ಲಿ ಸ್ಥಿರತೆ ಸಾಧ್ಯವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಚಿನ್ನದ ವಿನಿಮಯ ಮಾನದಂಡ ಸರ್ಕಾರಕ್ಕೆ ಮಿತಿಮೀರಿ ಹಣವನ್ನು ಮುದ್ರಿಸಲು ಅವಕಾಶ ನೀಡುತ್ತದೆ. ಸರ್ಕಾರ ಹಣದ ಪೂರೈಕೆಯನ್ನು ವಿಪರೀತ ಹೆಚ್ಚಿಸಿದರೆ ಹಣದ ಮೌಲ್ಯ ಕುಸಿಯುತ್ತದೆ. ಇದರಿಂದ ಹಣದುಬ್ಬರವಾಗುತ್ತದೆ.. ಈ ಹಣದುಬ್ಬರದ ಹೊರೆಯು ಶ್ರೀಮಂತರಿಗಿಂತ ಹೆಚ್ಚಾಗಿ ಬಡವರ ಮೇಲೆ ಬೀಳುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಆದರೆ ಅಂಬೇಡ್ಕರ್ ಸೂಚಿಸುವ ಚಿನ್ನದ ಮಾನದಂಡದಿಂದ ಬೆಲೆ ಸ್ಥಿರತೆಯನ್ನು ಸಾಧಿಸಬಹುದು ಎನ್ನುವುದನ್ನು ಹಲವರು ಒಪ್ಪುವುದಿಲ್ಲ. ಐತಿಹಾಸಿಕವಾಗಿ ನೋಡಿದರೆ ಚಿನ್ನದ ಮಾನದಂಡದ ಕಾಲದಲ್ಲೂ ಆರ್ಥಿಕ ಬಿಕ್ಕಟ್ಟುಗಳು, ಕರೆನ್ಸಿಯ ಅಪಮೌಲೀಕರಣ ಇವೆಲ್ಲಾವೂ ಇತ್ತು, ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದವು. ಅದರಿಂದಲೂ ಹಣದುಬ್ಬರವಾಗಿದ್ದನ್ನು ಹಲವು ಕಡೆಗಳಲ್ಲಿ ನೋಡಬಹುದು. ಹಾಗಾಗಿ ಕೇವಲ ಚಿನ್ನವೊಂದೇ ಸಾಲುವುದಿಲ್ಲ, ಹಣದ ಮೌಲ್ಯ ಕುಸಿಯದಂತೆ ನೋಡಿಕೊಳ್ಳುವುದಕ್ಕೆ ಸರ್ಕಾರಗಳು ಬದ್ಧವಾಗಿರಬೇಕು ಎನ್ನುವ ವಾದವೂ ಇದೆ. ಅಂದರೆ ಜೊತೆಗೆ ಆರ್ಥಿಕ ಶಿಸ್ತು ಹಾಗೂ ಜವಾಬ್ದಾರಿಯುತ ನಿರ್ವಹಣೆ ಮುಖ್ಯವಾಗುತ್ತದೆ ಎನ್ನಲಾಗಿದೆ.
ಕೃಷಿ ಆರ್ಥಿಕತೆ ಮತ್ತು ಸಣ್ಣ ಹಿಡುವಳಿಗಳು.
ಅಂಬೇಡ್ಕರ್ ಅವರು ತಮ್ಮ ಪದವಿಗಾಗಿ ಬರೆದ ಪ್ರಬಂಧಗಳ ಹೊರತಾಗಿ, 1918ರಲ್ಲಿ ಭಾರತದ ಸಣ್ಣ ಕೃಷಿ ಭೂಮಿಯ ಸಮಸ್ಯೆಗಳ ಬಗ್ಗೆ ಒಂದು ಸೊಗಸಾದ ಲೇಖನ ಬರೆದಿದ್ದರು. ಆ ಕಾಲದ ತಜ್ಞರೆಲ್ಲಾ “ಭಾರತದ ಕೃಷಿ ಹಿಂದುಳಿಯಲು ಸಣ್ಣ ಸಣ್ಣ ಜಮೀನುಗಳೇ ಕಾರಣ”ಎಂದು ನಂಬಿದ್ದರು. ಆದರೆ ಅಂಬೇಡ್ಕರ್ ಅವರು ಇದನ್ನು ಸಂಪೂರ್ಣ ವಿಭಿನ್ನವಾಗಿ ನೋಡಿದರು.
ಅಂಬೇಡ್ಕರ್ ದೃಷ್ಟಿಯಲ್ಲಿ ಉತ್ಪಾದಕತೆಗೆ ಜಮೀನಿನ ಗಾತ್ರ ಮುಖ್ಯವಲ್ಲ. ಹಾಗೆ ಒಂದು ಮಾದರಿ ಗಾತ್ರ ಅಂತ ಯಾವುದೂ ಇಲ್ಲ. ಕೇವಲ ಜಮೀನಿನ ಗಾತ್ರ ದೊಡ್ಡದಿದ್ದರೆ ಅದು ಲಾಭದಾಯಕ ಅಂತ ಹೇಳುವುದಕ್ಕಾಗುವುದಿಲ್ಲ. ಹಾಗೆಯೇ ಅದು ಸಣ್ಣದಿದ್ದರೆ ಅದು ನಷ್ಟದ ಬಾಬು ಅಂತ ಹೇಳುವುದಕ್ಕೂ ಆಗುವುದಿಲ್ಲ. ಅವನ ಬಳಿ ಉಳುಮೆಗೆ ಬೇಕಾದ ಸಾಧನಗಳ ಕೊರತೆ ಇದ್ದರೆ, ಇರುವ ಉಪಕರಣಕ್ಕೆ ಭೂಮಿ ಹೆಚ್ಚಾಯಿತು ಅಂತಲೂ ವಾದಿಸಬಹುದು. ಅಂದರೆ ಭೂಮಿ ಲಾಭದಾಯಕವೋ ಅಲ್ಲವೋ ಅನ್ನುವದನ್ನು ನಿರ್ಧರಿಸುವುದಕ್ಕೆ ಬಂಡವಾಳ, ಕೆಲಸಗಾರರು ಮತ್ತು ಉಪಕರಣಗಳು ಇವೆಲ್ಲಾ ಬೇಕಾದಷ್ಟು ಪ್ರಮಾಣದಲ್ಲಿದೆಯೇ ಅನ್ನುವುದನ್ನು ಗಮನಿಸಬೇಕು. ಕೃಷಿಗೆ ಬೇಕಾದ ಬಂಡವಾಳ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಮಾಣದಲ್ಲಿ ಇಲ್ಲದಿರುವುದೇ ಸಣ್ಣ ಜಮೀನು ಅನುತ್ಪಾದಕವಾಗಿರುವುದಕ್ಕೆ ನಿಜವಾದ ಸಮಸ್ಯೆ ಎಂದು ಅವರು ವಾದಿಸಿದರು.

ಎರಡನೆಯ ಸಮಸ್ಯೆ ಅಂದರೆ ಗ್ರಾಮೀಣ ಭಾರತದಲ್ಲಿ ಕೃಷಿಕರ ಶ್ರಮ ಸಂಪೂರ್ಣ ಬಳಕೆಯಾಗುತ್ತಿಲ್ಲ. ಭಾರತದಲ್ಲಿ ಅವಶ್ಯಕತೆಗಿಂತ ಹೆಚ್ಚು ಜನ ಕೃಷಿಯಲ್ಲಿ ತೊಡಗಿದ್ದಾರೆ. ಪರ್ಯಾಯ ಉದ್ಯೋಗದ ಕೊರತೆಯಿಂದ ಒಬ್ಬರು ಮಾಡುವ ಕೆಲಸವನ್ನು ಹಲವರು ಮಾಡುತ್ತಿದ್ದಾರೆ. ಅದರಿಂದ ಉತ್ಪಾದನೆ ಹೆಚ್ಚುತ್ತಿಲ್ಲ. ಅರ್ಥಶಾಸ್ತ್ರದಲ್ಲಿ ಇದನ್ನು ಮರೆಮಾಚಿದ ನಿರುದ್ಯೋಗ’ (Disguised Unemployment) ಎಂದು ಕರೆಯುತ್ತಾರೆ. ಒಂದಿಷ್ಟು ಜನರನ್ನು ತೆಗೆದರೂ ಉತ್ಪಾದನೆಗೆ ಏನೂ ತೊಂದರೆಯಾಗುವುದಿಲ್ಲ.
ಈ ಪರಿಕಲ್ಪನೆಯನ್ನು ಜಾನ್ ರಾಬಿನ್ಸನ್ (1936) ಮತ್ತು ಆರ್ಥರ್ ಲೂಯಿಸ್ (1954) ಅವರು ಜಗತ್ತಿಗೆ ಮೊದಲು ಪರಿಚಯಿಸಿದರು.
ಎರಡನೆಯ ಸಮಸ್ಯೆ ಅಂದರೆ ಗ್ರಾಮೀಣ ಭಾರತದಲ್ಲಿ ಕೃಷಿಕರ ಶ್ರಮ ಸಂಪೂರ್ಣ ಬಳಕೆಯಾಗುತ್ತಿಲ್ಲ. ಭಾರತದಲ್ಲಿ ಅವಶ್ಯಕತೆಗಿಂತ ಹೆಚ್ಚು ಜನ ಕೃಷಿಯಲ್ಲಿ ತೊಡಗಿದ್ದಾರೆ. ಪರ್ಯಾಯ ಉದ್ಯೋಗದ ಕೊರತೆಯಿಂದ ಒಬ್ಬರು ಮಾಡುವ ಕೆಲಸವನ್ನು ಹಲವರು ಮಾಡುತ್ತಿದ್ದಾರೆ. ಅದರಿಂದ ಉತ್ಪಾದನೆ ಹೆಚ್ಚುತ್ತಿಲ್ಲ. ಅರ್ಥಶಾಸ್ತ್ರದಲ್ಲಿ ಇದನ್ನು ಮರೆಮಾಚಿದ ನಿರುದ್ಯೋಗ’ (Disguised Unemployment) ಎಂದು ಕರೆಯುತ್ತಾರೆ. ಒಂದಿಷ್ಟು ಜನರನ್ನು ತೆಗೆದರೂ ಉತ್ಪಾದನೆಗೆ ಏನೂ ತೊಂದರೆಯಾಗುವುದಿಲ್ಲ. ಈ ಪರಿಕಲ್ಪನೆಯನ್ನು ಜಾನ್ ರಾಬಿನ್ಸನ್ (1936) ಮತ್ತು ಆರ್ಥರ್ ಲೂಯಿಸ್ (1954) ಅವರು ಜಗತ್ತಿಗೆ ಮೊದಲು ಪರಿಚಯಿಸಿದರು
ಎನ್ನಲಾಗುತ್ತದೆ. ಆದರೆ ಅವರಿಗಿಂತ ಸುಮಾರು 18 ವರ್ಷಗಳ ಮೊದಲೇ (1918ರಲ್ಲಿ) ಅಂಬೇಡ್ಕರ್ ಅವರು ಭಾರತದ ಕೃಷಿಯಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಜನ ಇದ್ದಾರೆ ಎಂದು ಗುರುತಿಸಿದ್ದರು.
ಇದಕ್ಕೆ ಪರಿಹಾರವಾಗಿ ಅಂಬೇಡ್ಕರ್ ಕೃಷಿಯಲ್ಲಿ ಹೆಚ್ಚುವರಿಯಾಗಿರುವ ಜನರನ್ನು ಕಾರ್ಖಾನೆಗಳಿಗೆ ವರ್ಗಾಯಿಸಬೇಕೆಂದು ಸೂಚಿಸಿದ್ದರು. ಅಂದರೆ ಕೃಷಿ ಸಮಸ್ಯೆಗೆ ಕೈಗಾರಿಕೀಕರಣವನ್ನು ಪರಿಹಾರವಾಗಿ ಅವರು ಸೂಚಿಸಿದರು. ಹಳ್ಳಿಗಳಲ್ಲಿರುವ ಹೆಚ್ಚುವರಿ ಜನರಿಗೆ ಕೈಗಾರಿಕೆಗಳು ಉದ್ಯೋಗ ಕೊಡುವುದಷ್ಟೇ ಅಲ್ಲ, ಕೃಷಿಗೆ ಅತಿ ಅಗತ್ಯವಾಗಿ ಬೇಕಾದ ಬಂಡವಾಳವನ್ನೂ ಒದಗಿಸುತ್ತವೆ. ಹೆಚ್ಚುವರಿ ಜನರು ಕೃಷಿಯೇತರ ಉತ್ಪಾದನಾ ಕ್ಷೇತ್ರಗಳಲ್ಲಿ ದುಡಿಯತೊಡಗಿದರೆ, ಭೂಮಿಯ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಜೊತೆಗೆ ಜನರ ಉತ್ಪಾದಕತೆ ಹಾಗೂ ವರಮಾನವೂ ಹೆಚ್ಚುತ್ತದೆ. ಈ ಹೆಚ್ಚುವರಿ ವರಮಾನವೆ ಮುಂದೆ ಕೃಷಿಗೆ ಬಂಡವಾಳವಾಗುತ್ತದೆ. ಒಟ್ಟಾರೆ ದೇಶದ ಉತ್ಪಾದನೆ ಹೆಚ್ಚುತ್ತದೆ ಎಂದು ಅಂಬೇಡ್ಕರ್ ವಾದಿಸಿದ್ದರು. ಮುಂದೆ ನೊಬೆಲ್ ಪ್ರಶಸ್ತಿ ವಿಜೇತ ಆರ್ಥರ್ ಲೂಯಿಸ್ ಅವರು ಬಹುತೇಕ ಇದೇ ವಾದವನ್ನು ಮುಂದಿಟ್ಟಿದ್ದರು.
ಅಂಬೇಡ್ಕರ್ ಹೇಳುವಂತೆ ಬಹುತೇಕ ಜನ ಕೇವಲ ಕೃಷಿಯನ್ನೇ ನೆಚ್ಚಿಕೊಂಡಿರುವುದೇ ಭಾರತದಲ್ಲಿ ಬಡತನಕ್ಕೂ ಮುಖ್ಯ ಕಾರಣ. ಅಂದರೆ ವ್ಯವಸಾಯ ಒಂದರಿಂದಲೇ ಇಡೀ ದೇಶದ ಜನರಿಗೆ ಸಾಕಾಗುವಷ್ಟು ಅನ್ನ ಕೊಡಲು ಸಾಧ್ಯವಾಗುತ್ತಿಲ್ಲ. “ಭಾರತ ಈಗ ಒಂದು ಇಕ್ಕಳದ ಮಧ್ಯೆ ಸಿಕ್ಕಿಹಾಕಿಕೊಂಡಿದೆ. ಒಂದು ಕಡೆ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯ ಒತ್ತಡ. ಇನ್ನೊಂದು ಕಡೆ ಜನರ ಅಗತ್ಯಕ್ಕೆ ಬೇಕಾದಷ್ಟು ಭೂಮಿ ಇಲ್ಲದಿರುವುದು. ಜನಸಂಖ್ಯೆ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತಹ ಉತ್ಪಾದನೆ ಇರುವುದಿಲ್ಲ. ಇದರಿಂದ ಜನರ ಬದುಕು ಕಷ್ಟವಾಗುತ್ತಿದೆ ಮತ್ತು ಬಡತನ ಜಾಸ್ತಿ ಆಗುತ್ತಿದೆ.” ಇದನ್ನೆಲ್ಲಾ ತಡೆಯಬೇಕೆಂದರೆ ವ್ಯವಸಾಯವನ್ನು ಲಾಭದಾಯಕವನ್ನಾಗಿ ಮಾಡಬೇಕು. ಆದರೆ ವ್ಯವಸಾಯ ಲಾಭದಾಯಕವಾಗಬೇಕಾದರೆ ದೇಶದಲ್ಲಿ ದೊಡ್ಡ ಮಟ್ಟದ ಕೈಗಾರಿಕೀಕರಣ ಆಗಲೇಬೇಕು. ಯಾಕೆಂದರೆ, ಕೃಷಿಯನ್ನು ಅವಲಂಬಿಸಿರುವ ಹೆಚ್ಚುವರಿ ಜನರಿಗೆ ಉದ್ಯೋಗ ಕೊಡುವುದಕ್ಕೆ ಕೈಗಾರಿಕೆಗಳಿಂದ ಮಾತ್ರ ಸಾಧ್ಯ ಅನ್ನುವುದು ಅಂಬೇಡ್ಕರ್ ಅವರ ವಾದವಾಗಿತ್ತು.
ಒಂದು ದೇಶದಲ್ಲಿ ಫ್ಯಾಕ್ಟರಿಗಳು ತಲೆ ಎತ್ತಬೇಕಾದ್ರೆ ಮೂಲಭೂತ ಸೌಕರ್ಯ ಚೆನ್ನಾಗಿರಬೇಕು. ಒಳ್ಳೆಯ ರಸ್ತೆಗಳು, ಸಾರಿಗೆ ವ್ಯವಸ್ಥೆ, ವಿದ್ಯುತ್, ನೀರಾವರಿ ಇವೆಲ್ಲಾ ಇರಬೇಕು.. ಇವೆಲ್ಲಾ ಸರಿಯಾಗಿದ್ದರೆ ಮಾತ್ರ ಕೈಗಾರಿಕೆಗಳು ಬೆಳೆದು, ಕೃಷಿಯಲ್ಲಿ ಕೆಲಸವಿಲ್ಲದ ಜನರಿಗೆ ಅಲ್ಲಿ ಕೆಲಸ ಸಿಗುತ್ತದೆ ಎಂದು ಅವರು ಬಲವಾಗಿ ನಂಬಿದ್ದರು.
ಪ್ರಭುತ್ವ ಸಮಾಜವಾದ (State Socialism)
ಅಂಬೇಡ್ಕರ್ ಪ್ರಾರಂಭದಲ್ಲಿ ಕೈಗಾರಿಕೀಕರಣವನ್ನು ಸೂಚಿಸಿದಾಗ, ಕೈಗಾರಿಕೆಗಳ ಒಡೆತನ ಖಾಸಗಿಯವರ ಕೈಯಲ್ಲಿದ್ದರೂ ಪರವಾಗಿಲ್ಲ ಎಂದು ಭಾವಿಸಿದ್ದರು. ಆದರೆ 1940ರ ದಶಕದ ಕೊನೆಯಲ್ಲಿ ಅವರ ಯೋಚನೆಗಳು ಇನ್ನೂ ಕ್ರಾಂತಿಕಾರಿಯಾದವು. ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿಗಳ ಒಕ್ಕೂಟದ ಪರವಾಗಿ ಸಂವಿಧಾನ ಸಭೆಗೆ ಸಲ್ಲಿಸಿದ ಜ್ಞಾಪನ ಪತ್ರದಲ್ಲಿ ಪ್ರಭುತ್ವ ಸಮಾಜವಾದವನ್ನು ಪ್ರತಿಪಾದಿಸಿದ್ದಾರೆ. ದೇಶದ ಮುಖ್ಯ ಉದ್ದಿಮೆಗಳು, ವಿಮಾ ಕಂಪನಿಗಳು ಮತ್ತು ಇಡೀ ಕೃಷಿ ಭೂಮಿಯ ಮಾಲೀಕತ್ವ ಸರ್ಕಾರದ ಕೈಯಲ್ಲೇ ಇರಬೇಕು. ಕೈಗಾರಿಕೆಗಳ ಒಡೆತನ ಖಾಸಗಿಯವರದ್ದಾಗಿಬಿಟ್ಟರೆ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ತೀವ್ರವಾಗುತ್ತದೆ. ದೇಶದ ಸಂಪತ್ತು ಸಮನಾಗಿ ಹಂಚಿಕೆಯಾಗಬೇಕೆಂದರೆ ಸರ್ಕಾರವೇ ಬಂಡವಾಳ ಹಾಕಿ ಉದ್ದಿಮೆ ನಡೆಸಬೇಕು ಎಂದು ಸೂಚಿಸಿದರು. ಅಂದರೆ ಸರ್ಕಾರವು ಆರ್ಥಿಕತೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅಂಬೇಡ್ಕರ್ ಬಯಸಿದ್ದರು.
ಅಂಬೇಡ್ಕರ್ ಕೃಷಿ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಬಯಸಿದ್ದರು. ಕೃಷಿ ಭೂಮಿಯೆಲ್ಲವನ್ನೂ ಸರ್ಕಾರವೇ ವಶಪಡಿಸಿಕೊಳ್ಳಬೇಕು. ಭೂ ಮಾಲೀಕರಿಗೆ ಪ್ರತಿಯಾಗಿ ಬಾಂಡ್ಗಳನ್ನು ನೀಡಬೇಕು. ಜಮೀನನ್ನು ನಿರ್ದಿಷ್ಟ ಪ್ರಮಾಣದಲ್ಲಿ ವಿಂಗಡಿಸಿ ಗ್ರಾಮೀಣ ಜನರಿಗೆ ಸಾಮೂಹಿಕವಾಗಿ ಕೃಷಿ ಮಾಡಲು ಅವಕಾಶಮಾಡಿಕೊಡಬೇಕು. ಮಾಲಿಕ ಅಥವಾ ಕೂಲಿ ಅನ್ನುವ ವ್ಯತ್ಯಾಸವಿಲ್ಲದೆ ಜಾತಿ-ಮತದ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೃಷಿ ಮಾಡಬೇಕು. ಬೀಜ, ಗೊಬ್ಬರ, ಎತ್ತುಗಳು ಮತ್ತು ಉಪಕರಣಗಳನ್ನು ಸರ್ಕಾರವೇ ಒದಗಿಸಬೇಕು. ಬಂದ ಲಾಭದಲ್ಲಿ ಸರ್ಕಾರದ ಪಾಲನ್ನು ನೀಡಿದ ನಂತರ ಉಳಿದದ್ದನ್ನು ರೈತರು ಹಂಚಿಕೊಳ್ಳಬೇಕು. ಕೃಷಿಯಷ್ಟೇ ಅಲ್ಲದೆ, ದೇಶದ ಪ್ರಮುಖ ಮತ್ತು ಮೂಲಭೂತ ಕೈಗಾರಿಕೆಗಳು ಸರ್ಕಾರದ ಮಾಲೀಕತ್ವದಲ್ಲೇ ಇರಬೇಕು. ಜೀವ ವಿಮೆ ಎನ್ನುವುದು ಪ್ರತಿಯೊಬ್ಬ ಪ್ರಜೆಗೆ ಕಡ್ಡಾಯವಾಗಿರಬೇಕು ಮತ್ತು ಅದು ಕೇವಲ ಸರ್ಕಾರದ ಏಕಸ್ವಾಮ್ಯವಾಗಿರಬೇಕು ಎಂದು ಅವರು ಪ್ರತಿಪಾದಿಸಿದ್ದರು.
“ದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಸಿಗಬೇಕೆಂದರೆ ಜಮೀನು ಮತ್ತು ಕೈಗಾರಿಕೆಗಳ ರಾಷ್ಟ್ರೀಕರಣ ಆಗಲೇಬೇಕು”ಎಂದು ಅವರು ವಾದಿಸಿದರು. ಆದರೆ, ಸಂವಿಧಾನ ಸಭೆಯಲ್ಲಿದ್ದ ಎಲ್ಲರೂ ಇದನ್ನು ಒಪ್ಪುವುದಿಲ್ಲ ಎಂಬ ಕಹಿ ಸತ್ಯ ಅವರಿಗೆ ಗೊತ್ತಿತ್ತು. ಹಾಗಾಗಿ, ಹಿಂದೆ ಪೂನಾ ಒಪ್ಪಂದದ ಸಮಯದಲ್ಲಿ ಅನಿವಾರ್ಯವಾಗಿ ರಾಜಿ ಮಾಡಿಕೊಂಡಂತೆಯೇ, ಇಲ್ಲೂ ಕೂಡ ಅವರು ತಮ್ಮ ನಿಲುವನ್ನು ಸ್ವಲ್ಪ ಸಡಿಲಿಸಬೇಕಾಯಿತು. ಸಂವಿಧಾನ ಸಭೆಯಲ್ಲಿ ಶ್ರೀಮಂತರು ಮತ್ತು ಆಸ್ತಿವಂತರ ಪ್ರಭಾವ ಹೆಚ್ಚಿತ್ತು. ಹಾಗಾಗಿ ಅಂತಹ ಜಾಗದಲ್ಲಿ ಇಷ್ಟು ದೊಡ್ಡ ಬದಲಾವಣೆಯನ್ನು ತರುವುದು ಕಷ್ಟವೆಂದು ಅವರಿಗೆ ತಿಳಿಯಿತು. ಸ್ಟೇಟ್ ಸೋಷಿಯಲಿಸಂ ಪೂರ್ಣ ಪ್ರಮಾಣದಲ್ಲಿ ಸಂವಿಧಾನಕ್ಕೆ ಸೇರಿಸುವುದಕ್ಕೆ ಸಾಧ್ಯವಾಗಲಿಲ್ಲ. ಅದರ ಸಾರವನ್ನು ಅವರು’ಮಾರ್ಗದರ್ಶಕ ತತ್ವಗಳ’ಮೂಲಕ ಅಳವಡಿಸಲು ಪ್ರಯತ್ನಿಸಿದರು.
ಅಂಬೇಡ್ಕರ್ ಅವರ ಅರ್ಥಶಾಸ್ತ್ರವನ್ನು ಕೇವಲ ಅಂಕಿ-ಅಂಶಗಳಲ್ಲಿ ನೋಡಲು ಸಾಧ್ಯವಿಲ್ಲ. ಅವರ ಪ್ರತಿಯೊಂದು ಆರ್ಥಿಕ ವಿಚಾರವೂ ಅವರ ರಾಜಕೀಯ ಹೋರಾಟ ಮತ್ತು ಬಡವರ ಮೇಲಿನ ಕಾಳಜಿಯೊಂದಿಗೆ ಬೆಸೆದುಕೊಂಡಿದೆ. ಕೆಲವರು ಅವರನ್ನು ‘ಬಂಡವಾಳಶಾಹಿ’ ಎಂದರೆ. ಇನ್ನು ಕೆಲವರು ‘ಸಮಾಜವಾದಿ’ ಎನ್ನುತ್ತಾರೆ. ಆದರೆ ಅಂಬೇಡ್ಕರ್ ಅವರನ್ನು ಒಂದು ಚೌಕಟ್ಟಿಗೆ ಹಾಕುವುದು ಕಷ್ಟ.
ಅಂಬೇಡ್ಕರ್ ಅವರಿಗೆ ಎಲ್ಲವೂ ಸರ್ಕಾರದ ನಿಯಂತ್ರಣದಲ್ಲಿದ್ದರೆ ಮುಂದೆ ಅದು ಸರ್ವಾಧಿಕಾರಕ್ಕೆ ದಾರಿಮಾಡಿಕೊಡಬಹುದು ಎಂಬ ಆತಂಕವೂ ಇತ್ತು. ಹಾಗಾಗಿ ಅವರು ರಷ್ಯಾ ಅಥವಾ ಚೀನಾದಂತೆ ಎಲ್ಲವನ್ನೂ ಸರ್ಕಾರವೇ ಕಬಳಿಸಬಾರದು; ಜನರಿಗೆ ತಮ್ಮ ಸ್ವಂತ ಉದ್ಯಮ ನಡೆಸುವುದಕ್ಕೆ ಅಥವಾ ವೈಯಕ್ತಿಕವಾಗಿ ಬೆಳೆಯುವುದಕ್ಕೂ ಅವಕಾಶ ಇರಬೇಕು ಎಂದು ಅವರು ಹೇಳುತ್ತಿದ್ದರು.
ಅಂಬೇಡ್ಕರ್ ಅವರ ಬೌದ್ಧಿಕ ಜೀವನದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅವರ ಪ್ರೊಫೆಸರ್ ಜಾನ್ ಡ್ಯೂಯಿ. 1952ರಲ್ಲಿ ಅಂಬೇಡ್ಕರ್ ಅವರು ಅಮೆರಿಕಾಕ್ಕೆ ಹೋದಾಗ, ತಮ್ಮ ಪತ್ನಿ ಸವಿತಾ ಅಂಬೇಡ್ಕರ್ ಅವರಿಗೆ ಪತ್ರ ಬರೆದು. “ನನ್ನ ಇಡೀ ಬೌದ್ಧಿಕ ಜೀವನಕ್ಕೆ ಜಾನ್ ಡ್ಯೂಯಿ ಅವರೇ ಕಾರಣ, ಅವರು ಅದ್ಭುತ ಮನುಷ್ಯ” ಎಂದು ನೆನೆದಿದ್ದರು. ಅಂಬೇಡ್ಕರ್ ಅವರು ಡ್ಯೂಯಿ ಅವರ ಪ್ರತಿಯೊಂದು ಮಾತನ್ನೂ ಶ್ರದ್ಧೆಯಿಂದ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಎಷ್ಟು ಅಂದರೆ, “ಒಂದು ವೇಳೆ ಡ್ಯೂಯಿ ತೀರಿಕೊಂಡರೂ, ಅವರ ಎಲ್ಲ ಭಾಷಣಗಳನ್ನು ನಾನು ಹಾಗೆಯೇ ಪುನಃ ಬರೆದುಕೊಡಬಲ್ಲೆ” ಎಂದು ಗೆಳೆಯರ ಹತ್ತಿರ ಹೇಳುತ್ತಿದ್ದರಂತೆ!
ಜಾನ್ ಡ್ಯೂಯಿ ಅವರಿಂದ ಅಂಬೇಡ್ಕರ್ ಕಲಿತ ದೊಡ್ಡ ಪಾಠವೆಂದರೆ ‘ಪ್ರಾಸ್ಮಾಟಿಸಂ. ಯಾವುದು ಪ್ರಾಯೋಗಿಕವಾಗಿ ಕೆಲಸ ಮಾಡುತ್ತದೆಯೋ, ಅದೇ ಸರಿ.” ಅಂಬೇಡ್ಕರ್ ಅವರ ಆರ್ಥಿಕ ಮತ್ತು ರಾಜಕೀಯ ಚಿಂತನೆಗಳ ಮೇಲೆ ‘ಫ್ಯಾಬಿಯನ್ ಸಮಾಜವಾದ’ದ ಪ್ರಭಾವ ದಟ್ಟವಾಗಿತ್ತು.
ಫ್ಯಾಬಿಯನ್ವಾದಿಗಳು ಸಮಾಜವಾದವನ್ನು ತಕ್ಷಣದ ಕ್ರಾಂತಿಯ ಮೂಲಕ ಸಾಧಿಸುವ ಬದಲು, ಹಂತಹಂತವಾಗಿ ಜಾರಿಗೆ ತರಬಹುದು ಎಂದು ನಂಬಿದ್ದರು. ಅಸ್ತಿತ್ವದಲ್ಲಿರುವ ಸರ್ಕಾರಿ ವ್ಯವಸ್ಥೆಯನ್ನು ನಾಶಮಾಡುವ ಬದಲು, ಶಿಕ್ಷಣ ಸಂಸ್ಥೆಗಳು, ಮಾಧ್ಯಮಗಳು, ಧಾರ್ಮಿಕ ಗುಂಪುಗಳು, ಕಾರ್ಮಿಕ ಸಂಘಗಳು ಮತ್ತು ರಾಜಕೀಯ ಪಕ್ಷಗಳ ಒಳಗೆ ಹೊಕ್ಕು, ವ್ಯವಸ್ಥೆಯ ಒಳಗಿನಿಂದಲೇ ಬದಲಾವಣೆ ತರುವುದು ಇವರ ಉದ್ದೇಶವಾಗಿತ್ತು. ಈ ಬದಲಾವಣೆಯು ಕೇವಲ ಕಾರ್ಮಿಕ ವರ್ಗದಿಂದ ಮಾತ್ರವಲ್ಲದೆ, ಸಮಾಜದ ಪ್ರಬುದ್ಧ ಅಥವಾ ಸುಶಿಕ್ಷಿತ ವರ್ಗಗಳಿಂದ ಸಾಧ್ಯ ಎಂದು ಅವರು ಭಾವಿಸಿದ್ದರು.

ಅಂಬೇಡ್ಕರ್ ಅವರು ಈ ಫ್ಯಾಬಿಯನ್ ನಂಬಿಕೆಗಳನ್ನು ಮತ್ತು ಜಾನ್ ಡ್ಯೂಯಿ ಅವರ ‘ಪ್ರಾಗ್ನಟಿಸಂ’ (ವ್ಯಾವಹಾರಿಕ ಸಿದ್ಧಾಂತ) ತತ್ವಗಳನ್ನು ಅಳವಡಿಸಿಕೊಂಡಿದ್ದರು. ಆದರೆ ಅವರು ಅದನ್ನು ಹಾಗೆಯೇ ಸ್ವೀಕರಿಸದೆ. ಭಾರತದ ಸಂದರ್ಭಕ್ಕೆ ತಕ್ಕಂತೆ ತಮ್ಮದೇ ಆದ ಸೃಜನಶೀಲ ಸೇರ್ಪಡೆಗಳನ್ನು ಮಾಡಿಕೊಂಡರು. ಕೇವಲ ಆರ್ಥಿಕ ಬದಲಾವಣೆಯಷ್ಟೇ ಅಲ್ಲದೆ, ಸಮಾಜದಲ್ಲಿ ನೈತಿಕ ಮೌಲ್ಯಗಳೂ ಮುಖ್ಯ ಎಂದು ಅವರು ಒಪ್ಪಿಕೊಂಡಿದ್ದರು.
ಅಂಬೇಡ್ಕರ್ ಅವರ ಅರ್ಥಶಾಸ್ತ್ರದ ಚಿಂತನೆಗಳನ್ನು ಕೇವಲ ಅವರ ಪದವಿಗಾಗಿ ರಚಿಸಿದ ಪ್ರಬಂಧಗಳಲ್ಲಿ ಹುಡುಕುವುದು ಸರಿಯಲ್ಲ. ಅವರ ಬಹುತೇಕ ಕೃತಿಗಳಲ್ಲಿ ಆರ್ಥಿಕ ಅಂಶಗಳು ಇವೆ. ಆರ್ಥಿಕ ಒಳನೋಟಗಳು ಅವರ ಚಿಂತನೆಯ ಭಾಗವೂ ಹೌದು. ನಾವು ಅರ್ಥಶಾಸ್ತ್ರವನ್ನು ನೋಡುವ ಕ್ರಮವನ್ನು ಬದಲಿಸಿಕೊಳ್ಳಬೇಕು. ತೇಲ್ತುಂಬ್ಬೆಯವರು ಗುರುತಿಸುವಂತೆ ಅವರ ‘ಜಾತಿ ವಿನಾಶ’ ಪುಸ್ತಕವನ್ನು ಕೇವಲ ಸಾಮಾಜಿಕ ಪುಸ್ತಕ ಎನ್ನಲಾಗದು. ಜಾತಿ ಪದ್ಧತಿಯು ಮಾರುಕಟ್ಟೆಯ ವ್ಯವಹಾರಗಳನ್ನು ಹೇಗೆ ವಿಕೃತಗೊಳಿಸುತ್ತದೆ ಮತ್ತು ಆರ್ಥಿಕ ಪ್ರಗತಿಗೆ ಹೇಗೆ ತಡೆಯೊಡ್ಡುತ್ತದೆ ಎಂಬ ಆಳವಾದ ಆರ್ಥಿಕ ಸತ್ಯ ಅದರಲ್ಲಿದೆ. ಜೊತೆಗೆ ಜಾತಿ ವ್ಯವಸ್ಥೆಯು ಶ್ರಮದ ವಿಭಜನೆಯನ್ನಷ್ಟೇ ಮಾಡದೆ, ಮಾರುಕಟ್ಟೆಯ ಮುಕ್ತ ಆಯ್ಕೆಗಳನ್ನು ಹೇಗೆ ಕಸಿದುಕೊಳ್ಳುತ್ತದೆ ಎಂಬುದನ್ನು ತಿಳಿಸುತ್ತದೆ. ಆ ಮಟ್ಟಿಗೆ ಜನರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಅಭಿವೃದ್ಧಿಯನ್ನು ಸ್ವಾತಂತ್ರ್ಯ ದ ವಿಸ್ತರಣೆಯನ್ನಾಗಿ ನೋಡುವ ಅಮರ್ತ್ಯ ಸೇನರ ಚಿಂತನೆಗಳನ್ನು ಅಂಬೇಡ್ಕರ್ ಅವರ ಬರಹಗಳಲ್ಲೂ ಗುರುತಿಸಬಹುದು.
ಅವರ ಬೌದ್ಧ ಧರ್ಮದ ಸ್ವೀಕಾರದ ಹಿಂದೆಯೂ ಒಂದು ಆರ್ಥಿಕ ಚಿಂತನೆ ಇದೆ. ನೈತಿಕತೆಯ ಅಡಿಪಾಯವಿಲ್ಲದ ಸಮಾಜ ಸುಸ್ಥಿರವಾಗಿರಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆಯಾಗಿತ್ತು. ಏಕೆಂದರೆ ನೈತಿಕತೆ ಇಲ್ಲದ ಆರ್ಥಿಕ ವ್ಯವಸ್ಥೆ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ.
ಅಂಬೇಡ್ಕರ್ ಅವರು ಅನಿರ್ಬಂಧಿತ ಬಂಡವಾಳಶಾಹಿಯನ್ನು (Unfettered Capitalism) ಬಲವಾಗಿ ವಿರೋಧಿಸಿದ್ದರು. ಕೇವಲ ಲಾಭದ ಉದ್ದೇಶದಿಂದ ನಡೆಯುವ ಆರ್ಥಿಕತೆಯು ದಮನ ಮತ್ತು ಶೋಷಣೆಯ ಸಾಧನವಾಗುತ್ತದೆ ಎಂಬುದು ಅವರ ನಿಲುವಾಗಿತ್ತು. ಲಾಭಕೋರತನದ ಆರ್ಥಿಕತೆಯು ರಾಜಕೀಯ ಪ್ರಜಾಪ್ರಭುತ್ವದ ಎರಡು ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದ್ದರು: ಇದು ವ್ಯಕ್ತಿಗಳ ಜೀವನವನ್ನು ನಿಯಂತ್ರಿಸುವ ಅಧಿಕಾರವನ್ನು ಸರ್ಕಾರದ ಬದಲಿಗೆ ಖಾಸಗಿ ಮಾಲೀಕರಿಗೆ ನೀಡುತ್ತದೆ. ಜನ ಬದುಕುವುದಕ್ಕೆ ದಾರಿಯನ್ನು ಕಂಡುಕೊಳ್ಳುವ ಅನಿವಾರ್ಯತೆಯಲ್ಲಿ ತಮ್ಮ ಸಾಂವಿಧಾನಿಕ ಹಕ್ಕುಗಳನ್ನೇ ತ್ಯಾಗ ಮಾಡುವಂತೆ ಈ ವ್ಯವಸ್ಥೆ ಪ್ರೇರೇಪಿಸುತ್ತದೆ.

ಅಂಬೇಡ್ಕರ್ ಅವರು ಸರ್ಕಾರವನ್ನು ಕೇವಲ ಆಳುವ ವರ್ಗದ ನಿಯಂತ್ರಣದಲ್ಲಿರುವ ದಮನಕಾರಿ ಯಂತ್ರ ಎಂದು ನೋಡಲಿಲ್ಲ. ಬದಲಿಗೆ, ವಿವಿಧ ವರ್ಗಗಳ ನಡುವಿನ ಸಂಘರ್ಷವನ್ನು ಬಗೆಹರಿಸುವ ಒಂದು ‘ನಿಷ್ಪಕ್ಷಪಾತ ಸಂಧಾನಕಾರ’ಎಂದು ಕಂಡರು, ಶಕ್ತಿಯುತ ವರ್ಗಗಳ ಶೋಷಣೆಯ ಪ್ರವೃತ್ತಿಯನ್ನು ನಿಯಂತ್ರಿಸಲು ಮತ್ತು ಬಲಹೀನರ ಹಿತಾಸಕ್ತಿಯನ್ನು ರಕ್ಷಿಸಲು ಸರ್ಕಾರದ ಹಸ್ತಕ್ಷೇಪ ಅಗತ್ಯವೆಂದು ಅವರು ನಂಬಿದ್ದರು. ಮನುಷ್ಯನ ಒಳಗಿರುವ ಶೋಷಣೆಯ ಪ್ರವೃತ್ತಿಯನ್ನು ಹೊರಗಿನಿಂದ ಸರ್ಕಾರ ನಿಯಂತ್ರಿಸಿದರೆ, ಒಳಗಿನಿಂದ ಅದನ್ನು ಹತೋಟಿಯಲ್ಲಿಡಲು ‘ಧರ್ಮ’ ಅಥವಾ ನೈತಿಕತೆಯ ಅಗತ್ಯವಿದೆ ಎಂದು ಅವರು ಭಾವಿಸಿದ್ದರು.
ಅಂಬೇಡ್ಕರ್ ಅವರ ಚಿಂತನೆಗಳನ್ನು ಗಮನಿಸುವಾಗ ಈ ಆಯಾಮವನ್ನು ಸೇರಿಸಿಕೊಂಡರೆ ಅವರ ಆರ್ಥಿಕ ಚಿಂತನೆ 1923ರಲ್ಲೇ ನಿಂತುಹೋಗಿದೆ ಅಂತ ಭಾವಿಸುವುದು ಸರಿಯಲ್ಲ ಎಂಬುದು ತಿಳಿಯುತ್ತದೆ. ಅವರ ಪ್ರತಿಯೊಂದು ಸಾಮಾಜಿಕ ನಿರ್ಧಾರದ ಹಿಂದಿರುವ ಆರ್ಥಿಕ ಚಿಂತನೆಯನ್ನು ಗಮನಿಸಬೇಕಾದ ಅಗತ್ಯ ಇದೆ.
-ಟಿ ಎಸ್ ವೇಣುಗೋಪಾಲ್
ಗ್ರಂಥ ಋಣ
Jean Dreze. Dr. Ambedkar and the future of Indian Democracy, in The Radical Ambedkar Critical Reflection.
Anand Teltumde, Economics of Babasaheb Ambedkar
Ambirajan, S. (1999). Ambedkar’s Contributions to Indian Economics. Economic and Political Weekly, 34(46/47)
BR Ambedkar, Writings and speeches, Vol-6

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





