ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಕೃಷಿ ಮತ್ತು ತೋಟಗಾರಿಕಾ ಮೇಳಗಳು ರೈತರಲ್ಲಿ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರಕ್ಕೆ ಪರಿಚಯಿಸುವ ವೇದಿಕೆಗಳಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ನಡೆದ ಕೃಷಿ ಮತ್ತು ತೋಟಗಾರಿಕಾ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಜೀವನಶೈಲಿ ಹಾಗೂ ತಂತ್ರಜ್ಞಾನದ ಬೆಳವಣಿಗೆಗೆ ಅನುಗುಣವಾಗಿ ಕೃಷಿ ಕ್ಷೇತ್ರದಲ್ಲಿಯೂ ಮಹತ್ವದ ಬದಲಾವಣೆಗಳಾಗುತ್ತಿವೆ. ಈ ಮೇಳದಲ್ಲಿ 100ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಪ್ರದರ್ಶಿಸಿರುವುದು ವಿಶೇಷ. ಇಂತಹ ಕಾರ್ಯಕ್ರಮಗಳು ಕೃಷಿಯತ್ತ ಆಸಕ್ತಿ ಹೊಂದಿರುವ ಯುವಜನರಿಗೆ ಹಾಗೂ ಮುಂದಿನ ತಲೆಮಾರಿನ ಕೃಷಿಕರಿಗೆ ಹೊಸ ಅವಕಾಶಗಳನ್ನು ಪರಿಚಯಿಸುತ್ತವೆ. ತಂತ್ರಜ್ಞಾನದ ನೆರವಿನಿಂದ ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.
ತೋಟಗಾರಿಕಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರುತ್ತಿದ್ದು, ತೋಟಗಾರಿಕಾ ಬೆಳೆಗಳೊಂದಿಗೆ ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಅನೇಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆಯನ್ನು ನಂಬಿ ದುಡಿಯುವವರು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಹೊಸ ಬೆಳೆ ತಳಿಗಳು, ನವೀನ ತಂತ್ರಜ್ಞಾನ ಹಾಗೂ ಸರಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ತುಂಬಬಹುದು ಎಂದರು.

ಕೃಷಿ ಸಂಶೋಧನೆಗೆ ಆದ್ಯತೆ ನೀಡಿ: ಎಂ.ಎ. ಗಫೂರ್
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿಯೂ ಭತ್ತ, ಕಬ್ಬು, ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಜಾರಿಗೊಳಿಸಿದ ಭೂಸುಧಾರಣೆ ಕಾಯ್ದೆಯಿಂದ ಕರಾವಳಿಯ ಸುಮಾರು ಆರು ಲಕ್ಷ ಕುಟುಂಬಗಳು ಭೂಮಿಯ ಮಾಲೀಕತ್ವ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ವಿದ್ಯಾರ್ಥಿಗಳು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ವಾರಾಹಿ ಯೋಜನೆಯ ನೀರಾವರಿ ಸೌಲಭ್ಯಗಳು ಸ್ಥಳೀಯ ಕೃಷಿಕರಿಗೆ ಸಮರ್ಪಕವಾಗಿ ದೊರೆಯುವಂತಾಗಬೇಕು ಎಂದರು.
ಸೀಮಿತ ಜಾಗದಲ್ಲಿಯೂ ವಿವಿಧ ಬೆಳೆಗಳನ್ನು ಬೆಳೆದು ಯಶಸ್ಸು ಸಾಧಿಸಬಹುದು ಎಂಬುದನ್ನು ಜಿಲ್ಲೆಯ ರೈತರು ತೋರಿಸಿಕೊಟ್ಟಿದ್ದಾರೆ. ರೈತರಿಗೆ ಅಗತ್ಯವಿರುವ ಬೆಂಬಲ ಮತ್ತು ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಕರಾವಳಿ ಪ್ರವಾಸೋದ್ಯಮದ ಜೊತೆಗೆ ಕೃಷಿ ಮತ್ತು ತೋಟಗಾರಿಕಾ ಪ್ರವಾಸೋದ್ಯಮಕ್ಕೂ ಸರಕಾರದಿಂದ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಕೃಷಿಯಲ್ಲಿ ಮೌಲ್ಯವರ್ಧನೆಗೆ ಒತ್ತು: ಡಾ. ಎಂ.ವಿ. ಧನಂಜಯ
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ವಿ. ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿ ಕರ್ನಾಟಕದಲ್ಲಿ ಕೃಷಿಗೆ ಉತ್ತಮ ಅವಕಾಶಗಳಿವೆ. ಹವಾಮಾನ ವೈಪರೀತ್ಯವನ್ನು ಎದುರಿಸುವ ಸಾಮರ್ಥ್ಯ, ಸುಸ್ಥಿರ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನ ಆಧಾರಿತ ಉತ್ಪಾದನೆಗೆ ಆದ್ಯತೆ ನೀಡಬೇಕು. ರೈತರು ಬೆಳೆಗಳ ಮೌಲ್ಯವರ್ಧನೆಗೆ ಇರುವ ಅವಕಾಶಗಳನ್ನು ಬಳಸಿಕೊಂಡು ಉದ್ಯಮಿಗಳಾಗಿ ಬೆಳೆಯಬೇಕು ಎಂದರು.

ಕೃಷಿಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ವತಿಯಿಂದ ‘ಚಂದದ ಮನೆಯೊಡತಿಯಿಂದ ಅಂದದ ತಾರಸಿ ತೋಟ’ ಎಂಬ ತಾಂತ್ರಿಕ ಕೈಪಿಡಿ ಹಾಗೂ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು. ಪ್ರಗತಿಪರ ಕೃಷಿಕರನ್ನು ಮತ್ತು ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2020-21ರಿಂದ 2024-25ರವರೆಗೆ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಗೌರವಾನ್ವಿತ ಸದಸ್ಯರಾದ ಎಚ್.ಡಿ. ದೇವಿಕುಮಾರ್, ಎಚ್.ಎಸ್. ಶಶಾಂಕ್, ಟಿ. ಬಸವರಾಜ ನಾಯ್ಕ್, ಡಾ. ಶಾಮರಾವ್ ಜಹಾಗೀರದಾರ್, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ ಕುಮಾರ್ ಕೊಡ್ಗಿ, ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ., ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ, ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕಿ ಡಾ. ಬಿ. ಹೇಮ್ಲಾ ನಾಯಕ್, ಸಂಶೋಧನಾ ನಿರ್ದೇಶಕ ಡಾ. ಶ್ರೀಧರ ಎಸ್., ವಿಸ್ತರಣಾ ನಿರ್ದೇಶಕ ಡಾ. ರಾಘವೇಂದ್ರ ಕೆ. ಮೆಸ್ತಾ ಸೇರಿದಂತೆ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಡಲ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ನವೀನ್ ಎನ್.ಈ. ವಂದಿಸಿದರು.






