ಆದಿ ಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯದಲ್ಲಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ವಿಭಾಗಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು, ಪದವಿಯನ್ನು ಮುಗಿಸಿದ ಈ ವಿಶ್ವವಿದ್ಯಾಲಯದ ಅಧೀನದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ, ಫಲಿತಾಂಶವನ್ನು ಬಿಡುಗಡೆ ಮಾಡದೇ ಹಾಗೂ ಸೂಕ್ತ ಸಮಯಕ್ಕೆ ಅಂಕಪಟ್ಟಿಗಳನ್ನು ಮುದ್ರಿಸಿ ಕೊಡದೆ ಇರುವುದರಿಂದ ವಿದ್ಯಾರ್ಥಿಗಳ ಉನ್ನತ ಮಟ್ಟದ ಶಿಕ್ಷಣಕ್ಕೆ ದೊಡ್ಡ ಪೆಟ್ಟು ಬೀಳುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗೊಳಿಯುವ ಆತಂಕದಲ್ಲಿದ್ದಾರೆ ಎಂದು ಸಂಘಟನಕಾರರು ಆರೋಪಿಸಿದರು.
ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೂಲ ಅಂಕ ಪಟ್ಟಿಗಳನ್ನು ಕೇಳುತ್ತಿದ್ದು ಜೊತೆಗೆ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಪ್ರೋತ್ಸಾಹಧನದ ಅರ್ಜಿ ಹಾಕಲು ಇಲಾಖೆಯವರು ಮೂಲಕ ಪಟ್ಟಿಯನ್ನು ಕೇಳುತ್ತಿದ್ದು ಇದರಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತು ವಿಶ್ವವಿದ್ಯಾಲಯ ಆರಂಭವಾಗಿ ಐದು ವರ್ಷಗಳು ಗತಿಸಿದರೂ ಇನ್ನುವರೆಗೂ ಘಟಿಕೋತ್ಸವ ಕಾರ್ಯ ಆರಂಭವಾಗಿಲ್ಲ, ಇದರಿಂದಾಗಿ ಪದವಿ ಮುಗಿಸಿರುವ ವಿದ್ಯಾರ್ಥಿಗಳು ಉದ್ಯೋಗಗಳಿಂದ ವಂಚಿತರಾಗುವ ಭಯದಲ್ಲಿದ್ದಾರೆ ಎಂದರು.
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಕೂಡಲೇ ಎಚ್ಚೆತ್ತುಕೊಂಡು ಬಾಕಿ ಇರುವ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳ ಫಲಿತಾಂಶವನ್ನು ಪ್ರಕಟಿಸಬೇಕು. ಬಾಕಿ ಉಳಿದಿರುವ ಎಲ್ಲಾ ವಿಭಾಗಗಳ ಅಂಕಪಟ್ಟಿಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ತಕ್ಷಣ ವಿತರಿಸಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕಾಲೇಜುಗಳ ಗ್ರಂಥಾಲಯಗಳಲ್ಲಿ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಪಠ್ಯಪುಸ್ತಕಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಕಾಲೇಜು ಶುಲ್ಕ ಹಾಗೂ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸಬೇಕು. ಪ್ರಸಕ್ತ ವರ್ಷವೇ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದೆ.
ಅಲ್ಲದೆ, ವಿಶ್ವವಿದ್ಯಾಲಯದ ವ್ಯಾಪ್ತಿಯ ಪ್ರತಿಯೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವಿಭಾಗದ ಅಡಿಯಲ್ಲಿ ಕನ್ನಡ, ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯಗಳ ಕೋರ್ಸ್ಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ದಲಿತ ವಿದ್ಯಾರ್ಥಿ ಪರಿಷತ್ ರಾಯಚೂರು ಜಿಲ್ಲಾ ಸಮಿತಿಯಿಂದ ವಿಶ್ವವಿದ್ಯಾಲಯದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರಿನಲ್ಲಿ ನಿಲ್ಲದ ರೈತರ ಆತ್ಮಹತ್ಯೆ ಸರಣಿ, ಪರಿಹಾರ ವಿತರಣೆಯ ಅಂಕಿ-ಅಂಶಗಳಲ್ಲೇ ಗೊಂದಲ!
ಈ ಸಂದರ್ಭದಲ್ಲಿ ಮಹಾಶಕ್ತಿ ಮಹಿಳಾ ಸಬಲೀಕರಣ ಸಂಘಟನೆ ಅಧ್ಯಕ್ಷರಾದ ಶ್ರೀಮತಿ ವಿಜಯರಾಣಿ, ಕರಿಯಪ್ಪ ತೋರಣದಿನ್ನಿ, ಕವಿಗಳಾದ ಪ್ರಶಾಂತ ದಾನಪ್ಪ, ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾದ ಚನ್ನಬಸವ ಯಾಪಲಪರ್ವಿ, ಮೌನೇಶ ತುಗ್ಗಲದಿನ್ನಿ, ಕುಮಾರ್ ಬೈಲ ಮರ್ಚಡ್, ದುರ್ಗೇಶ ಕಲಮಂಗಿ, ಶರಣಬಸವ ಕಲಮಂಗಿ, ಆಂಜನೇಯ ಗುಂಜಳ್ಳಿ,ನಾಗರಾಜ ಬಾಗಲವಾಡ, ವಂಶಿ ಜುಕೂರ್ ಉಪಸ್ಥಿತರಿದ್ದರು.






