ಕೇರಳ ಸಮಾಜಂ ಉಡುಪಿ (ರಿ) ವತಿಯಿಂದ ದ್ವಿತೀಯ ವರ್ಷದ ಅದ್ದೂರಿ ಓಣಂ ಸಂಭ್ರಮಾಚರಣೆ ಸೆಪ್ಟೆಂಬರ್ 6ರ ಭಾನುವಾರ ಅಂಬಾಗಿಲು ಬಳಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜಂ ಉಡುಪಿ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ನಡೆದ ಮೊದಲ ವರ್ಷದ ಓಣಂ ಸಂಭ್ರಮಾಚರಣೆಗೆ ಸಾರ್ವಜನಿಕರಿಂದ ಹಾಗೂ ಸಮಾಜದ ಸದಸ್ಯರಿಂದ ಅತ್ಯುತ್ತಮ ಸ್ಪಂದನೆ ದೊರೆತು ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಯಶಸ್ಸಿನ ಮುಂದುವರಿದ ಭಾಗವಾಗಿ ಈ ಬಾರಿ ಇನ್ನಷ್ಟು ವೈಭವೋಪೇತವಾಗಿ ಓಣಂ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಮಣಿಪಾಲ ಕೆಎಂಸಿ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಶ್ಯಾಮ್ ಕೆ. ಅಶೋಕ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಪಿ.ವಿ., ಕೇರಳ ಸಮಾಜಂ ಮಂಗಳೂರು ಅಧ್ಯಕ್ಷ ಟಿ.ಕೆ. ರಾಜನ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಸಿದ್ಧ ಮಲಯಾಳಂ ಚಿತ್ರನಟಿಯರಾದ ಸುಚಿತ್ರ ನಾಯರ್, ನೀನಾ ಕುರುಪ್ ಹಾಗೂ ಪ್ರಸಿದ್ಧ ಬಾಲ ಕಲಾವಿದೆ ಮತ್ತು ಗಾಯಕಿ ರಾನಿಯ ರಫೀಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಓಣಂ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ.
ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ
ಓಣಂ ಸಂಭ್ರಮಾಚರಣೆಯ ಅಂಗವಾಗಿ ವಿವಿಧ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪೂಕಳಂ ಸ್ಪರ್ಧೆ, ಮಕ್ಕಳಿಗಾಗಿ ಓಣಂ ಆಟಗಳು, ಕೇರಳ ಸಮಾಜಂ ಸದಸ್ಯರಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು, ಕಳರಿ ಪಯಟ್ಟು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಧ್ಯಾಹ್ನ ಕೇರಳದ ಸಾಂಪ್ರದಾಯಿಕ ಹಾಗೂ ವಿಶೇಷ ‘ಓಣಂ ಸದ್ಯ’ ಭೋಜನ ಕೂಟವನ್ನು ಆಯೋಜಿಸಲಾಗಿದೆ.
ಕೇರಳದ ಸಾಂಪ್ರದಾಯಿಕ ಓಣಂ ಆಚರಣೆ, ಅಲ್ಲಿನ ಕಲೆ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಯನ್ನು ಕರಾವಳಿಯ ಜನರಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಉಡುಪಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಓಣಂ ಸಂಭ್ರಮವನ್ನು ಯಶಸ್ವಿಗೊಳಿಸುವಂತೆ ಕೇರಳ ಸಮಾಜಂ ಉಡುಪಿ ವತಿಯಿಂದ ಮನವಿ ಮಾಡಲಾಗಿದೆ.






