ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭವಾಗಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಜೆಪಿಯ ಹಲವು ನಾಯಕರ ಅಕ್ರಮ ದಾಖಲೆಗಳನ್ನ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ವೀಕ್ಷಣೆ ನಡೆಸಿರುವುದು ರಾಜಕೀಯ ಜಿದ್ದಾಜಿದ್ದಿಗೆ ಮತ್ತಷ್ಟು ತೀವ್ರತೆ ನೀಡಿದೆ.
ವಿಜಯೇಂದ್ರ ನೇತೃತ್ವದಲ್ಲಿ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭವಾಗಿದೆ. ಸುಮಾರು 170 ಕಿ.ಮೀ. ದೂರ ಕ್ರಮಿಸಲಿರುವ ಈ ಪಾದಯಾತ್ರೆ 10 ದಿನಗಳ ಕಾಲ ನಡೆಯಲಿದ್ದು, ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿದೆ.
ಮಾಜಿ ಸಚಿವ ನಾಗೇಂದ್ರರ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆಗೆ ಯೋಜಿಸಿದ್ದ ಬಿಜೆಪಿ, ನಾಗೇಂದ್ರರ ರಾಜೀನಾಮೆ ಬಳಿಕವೂ ಮುಂದುವರೆಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರ ಸಮಸ್ಯೆಗಳು ಹೆಚ್ಚಾಗಿವೆ ಎಂದು ಆರೋಪಿಸಿರುವ ಬಿಜೆಪಿ, ಬರ ಪರಿಸ್ಥಿತಿ, ನೀರಿನ ಕೊರತೆ, ಕೃಷಿ ಹಾಗೂ ರೈತರ ಸಂಕಷ್ಟ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಪಾದಯಾತ್ರೆಯ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಹಾಗೂ ಪಕ್ಷದ ಕಾರ್ಯಕರ್ತರನ್ನು ಸಂಘಟಿಸುವ ಉದ್ದೇಶವನ್ನೂ ಬಿಜೆಪಿ ಹೊಂದಿದೆ.

ಪಾದಯಾತ್ರೆಯಲ್ಲಿ ವಿಜಯೇಂದ್ರ ಸೇರಿದಂತೆ ಬಿಜೆಪಿ ಮುಖಂಡರು, ಶಾಸಕರು, ಮಾಜಿ ಸಚಿವರು ಹಾಗೂ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಮೂಲಕ ಸಾಗುತ್ತಿರುವ ಪಾದಯಾತ್ರೆಯಲ್ಲಿ ಸ್ಥಳೀಯ ರೈತರ ಸಮಸ್ಯೆಗಳನ್ನು ಆಲಿಸುವುದಾಗಿಯೂ ಬಿಜೆಪಿ ಹೇಳಿದೆ.
ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಬಿಜೆಪಿಯ ‘ಬಳ್ಳಾರಿ ಚಲೋ’ಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ ರೈತರ ಸಮಸ್ಯೆಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸಿತ್ತು ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ರೈತರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಸರ್ಕಾರದ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಸರ್ಕಾರದ ವತಿಯಿಂದಲೂ ಬರ ಪರಿಸ್ಥಿತಿಯ ಪರಿಶೀಲನೆಗೆ ಒತ್ತು ನೀಡಲಾಗಿದೆ. ಈ ಮೂಲಕ ರೈತರ ವಿಚಾರದಲ್ಲಿ ಎರಡೂ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಕ್ಕಿಳಿದಿವೆ.
ಗದಗದಲ್ಲಿ ಡಿಕೆಶಿ ಬರ ವೀಕ್ಷಣೆ

ಈ ನಡುವೆ ಮುಖ್ಯಮಂತ್ರಿ ಡಿಕೆಶಿ ಗದಗ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿನ ನೀರಿನ ಲಭ್ಯತೆ, ಜಲಾಶಯಗಳ ಸ್ಥಿತಿ, ಕೃಷಿ ಚಟುವಟಿಕೆಗಳು ಹಾಗೂ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮ, ಲಭ್ಯವಿರುವ ಜಲಮೂಲಗಳು ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆರ ನಡೆಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿರುವ ಬರ ನಿರ್ವಹಣಾ ಕ್ರಮಗಳು ರೈತರಿಗೆ ತಲುಪಬೇಕು ಎಂಬ ನಿರೀಕ್ಷೆಯೂ ಇದೆ. ಒಂದು ಕಡೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸುತ್ತಿದ್ದರೆ, ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್ ಬರ ಪರಿಸ್ಥಿತಿಯ ಪರಿಶೀಲನೆಯ ಮೂಲಕ ಪ್ರತಿಕ್ರಿಯಿಸುತ್ತಿದೆ. ಇಂದು ಫ್ರೀಡಂ ಪಾರ್ಕ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ.
ರಾಜಕೀಯದ ನಡುವೆ ರೈತನ ಅಸಲಿ ಸಂಕಷ್ಟ
ಆದರೆ ಬಿಜೆಪಿ-ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಾಜಿದ್ದಿಯಾಚೆಗೆ ಬರದ ಹೊಡೆತ ಅನುಭವಿಸುತ್ತಿರುವ ರೈತರ ಪರಿಸ್ಥಿತಿ ಬೇರೆಯೇ ಇದೆ. ಜಲಾಶಯಗಳಲ್ಲಿ ನೀರಿನ ಕೊರತೆ, ಮಳೆಯ ಅನಿಶ್ಚಿತತೆ ಹಾಗೂ ಕೃಷಿಗೆ ಅಗತ್ಯ ನೀರು ಸಿಗದಿರುವುದು ರೈತರ ಆತಂಕ ಹೆಚ್ಚಿಸಿದೆ. ಬೆಳೆಗಳಿಗೆ ನೀರು ಕೊಡಲಾಗದ ಪರಿಸ್ಥಿತಿ ನಿರ್ಮಾಣವಾದರೆ ಈಗಾಗಲೇ ಹೂಡಿಕೆ ಮಾಡಿರುವ ಹಣವೂ ಕೈತಪ್ಪುವ ಭೀತಿ ರೈತರನ್ನು ಕಾಡುತ್ತಿದೆ.

ಕಬಿನಿ ಜಲಾಶಯದ ನೀರನ್ನು ತಮಿಳುನಾಡಿಗೆ ಹರಿಸದೆ ರಾಜ್ಯದ ಬೆಳೆಗಳಿಗೇ ಹರಿಸಿ ಎಂದು ಆಗ್ರಹಿಸಿ ಟಿ ನರಸೀಪುರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘ ಹಾಗೂ ಕಬಿನಿ ರೈತ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಮಳೆ ಕೈಕೊಟ್ಟು ಬರ ಆವರಿಸಿದ್ದರೂ ಕ್ರಮ ಕೈಗೊಳ್ಳದ ಸರ್ಕಾರದ ವಿರುದ್ಧ ವಿಜಯಪುರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾಲ್ಕಿ, ಸಿರಗುಪ್ಪವನ್ನು ಬರಪೀಡಿತ ಎಂದು ಘೋಷಿಸಲು ರೈತರು ಆಗ್ರಹಿಸುತ್ತಿದ್ದಾರೆ. ಸಾಲ ಮಾಡಿ ಬೆಳೆ ಹಚ್ಚಿ, ಈಗ ಮಳೆ ಕೈಕೊಟ್ಟ ಕಾರಣ ಇತ್ತ ಬೆಳೆಯೂ ಇಲ್ಲ ಹಣವೂ ಇಲ್ಲ ಎನ್ನುವ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸದ್ಯ ಹೋರಾಟಕ್ಕೆ ಮಣಿದ ಸರ್ಕಾರ ನೀರು ಖಾಲಿಯಾದ ಮೇಲೆ ಕಬಿನಿಯ ಹೊರಹರಿವನ್ನು ನಿಲ್ಲಿಸಿದೆ.
ರೈತರಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಬಿಜೆಪಿ ಹೇಳುತ್ತಿದ್ದರೆ, ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಆದರೆ ರೈತರ ಪಾಲಿಗೆ ಈ ರಾಜಕೀಯ ಆರೋಪ ಪ್ರತ್ಯಾರೋಪಗಳಿಗಿಂತ ಮುಖ್ಯವಾಗಿರುವುದು ಜಮೀನಿಗೆ ನೀರು ಎಷ್ಟು ತಲುಪಿದೆ?, ಬಿತ್ತಿದ ಬೆಳೆ ಕೈಹತ್ತಿತೇ? ಎಂಬುದರ ಜತೆಗೆ ಬೆಳೆ ಉಳಿಸಿಕೊಳ್ಳಲು ಅಗತ್ಯ ನೆರವು ಮತ್ತು ಬೆಳೆ ಹಾನಿಯಾದರೆ ಸೂಕ್ತ ಪರಿಹಾರವಷ್ಟೇ!.
ಇದನ್ನೂ ಓದಿ: ಬಿಡದಿ ಟೌನ್ಶಿಪ್ | ‘ರೈತರು ಪರಿಹಾರ ಪಡೆಯಲು ಒಪ್ಪಿದ್ದಾರೆ, ಪಾದಯಾತ್ರೆ ಸಾಂಕೇತಿಕ ಅಷ್ಟೇ’: ವಿಜಯೇಂದ್ರ ಹೇಳಿಕೆ ವೈರಲ್
ರೈತರ ಹೆಸರಿನಲ್ಲಿ ನಡೆಯುತ್ತಿರುವ ಈ ರಾಜಕೀಯ ಹೋರಾಟಗಳು ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾದರೆ, ಅದರ ಅಂತಿಮ ಪರಿಣಾಮ ಬೀಳುವುದು ರೈತನ ಬದುಕಿನ ಮೇಲೆಯೇ. ಪ್ರತಿಪಕ್ಷವಾಗಿರುವ ಬಿಜೆಪಿ ಸರ್ಕಾರವನ್ನು ಪ್ರಶ್ನಿಸುವುದರ ಜತೆಗೆ, ಸಂಕಷ್ಟದಲ್ಲಿರುವ ರೈತರ ನಿರ್ದಿಷ್ಟ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪರಿಹಾರಕ್ಕಾಗಿ ಒತ್ತಡ ಹೇರಬೇಕಿದೆ. ಆಡಳಿತದಲ್ಲಿರುವ ಕಾಂಗ್ರೆಸ್ ಕೂಡ ಬರ ಪರಿಸ್ಥಿತಿಯ ವೀಕ್ಷಣೆಯನ್ನು ಘೋಷಣೆಗಳು ಮತ್ತು ಸಭೆಗಳಿಗೆ ಸೀಮಿತಗೊಳಿಸದೆ, ಅಗತ್ಯವಿರುವ ಕಡೆ ನೀರು, ಬೆಳೆ ಪರಿಹಾರ ಹಾಗೂ ಬರಪೀಡಿತ ಪ್ರದೇಶಗಳ ಘೋಷಣೆಯಂತಹ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕಿದೆ. ಬರದ ಪರಿಣಾಮವಾಗಿ ಬೆಳೆ ಕೈತಪ್ಪಿದರೆ ರೈತನಿಗೆ ಈ ಸಾಲಿನ ನಷ್ಟ ಮಾತ್ರವಲ್ಲ, ಮುಂದಿನ ಹಂಗಾಮಿನ ಕೃಷಿಯೂ ದುಸ್ತರವಾಗುತ್ತದೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲಾಗದೆ ಮತ್ತೆ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾದರೆ ಬೀಳುವ ಹೊಡೆತ ಅದೊಂದು ಬೆಳೆಯ ಅವಧಿಗೆ ಸೀಮಿತವಾಗುವುದಿಲ್ಲ. ಮುಂದಿನ ಎರಡು ಮೂರು ವರ್ಷಗಳವರೆಗೆ ಬೀಳುತ್ತದೆ. ಹೀಗಾಗಿ ಸದ್ಯದ ರಾಜಕೀಯ ಜಿದ್ದಾಜಿದ್ದಿಯ ನಡುವೆ ರೈತರ ತಕ್ಷಣದ ಬೇಡಿಕೆಗಳು, ನೀರಿನ ಸಮರ್ಪಕ ನಿರ್ವಹಣೆ, ಬೆಳೆ ನಷ್ಟದ ಸಮೀಕ್ಷೆ, ಸೂಕ್ತ ಪರಿಹಾರ, ಬರಪೀಡಿತ ಪ್ರದೇಶಗಳ ಗುರುತಿಸುವಿಕೆ ಮತ್ತು ಮುಂದಿನ ಕೃಷಿಗೆ ನೆರವು ಮುಖ್ಯ ಆದ್ಯತೆಯಾಗಬೇಕಿದೆ.





