ಉಡುಪಿ ಜಿಲ್ಲೆಯ ಕ್ರೈಸ್ತ ಬಾಂಧವರು ಮಂಗಳವಾರ ಮಾತೆ ಮೇರಿ ಜನ್ಮದಿನ ಹಾಗೂ ತೆನೆ ಹಬ್ಬವನ್ನು ಭಕ್ತಿ, ಸಂಭ್ರಮ ಮತ್ತು ಸಾಂಪ್ರದಾಯಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಆಚರಿಸಿದರು.
ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ ಹಾಗೂ ಪವಿತ್ರ ಬಲಿಪೂಜೆ ನೆರವೇರಿತು. ಮಾತೆ ಮೇರಿಯ ಬಾಲರೂಪಿ ಪ್ರತಿಮೆಗೆ ಮಕ್ಕಳು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಭಕ್ತಿಭಾವ ಮೆರೆದರು. ಮನೆಮನೆಗಳಲ್ಲಿ ಹೊಸ ಅಕ್ಕಿಯಿಂದ ತಯಾರಿಸಿದ ಹಾಲು ಪಾಯಸ ಸೇರಿದಂತೆ ವಿವಿಧ ಸಸ್ಯಾಹಾರಿ ಖಾದ್ಯಗಳನ್ನು ಸವಿದು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಳೆದ ಒಂಬತ್ತು ದಿನಗಳಿಂದ ಮಾತೆ ಮೇರಿಯ ಬಾಲರೂಪಿ ಪ್ರತಿಮೆಗೆ ಮಕ್ಕಳು ಸಲ್ಲಿಸುತ್ತಿದ್ದ ಪುಷ್ಪಾರ್ಚನೆಯ ವೈಭವ ಮಂಗಳವಾರ ಉತ್ತುಂಗಕ್ಕೇರಿತು. ಕರಾವಳಿಯ ವಿವಿಧ ಚರ್ಚ್‌ಗಳ ಗ್ರೊಟ್ಟೋಗಳ ಮುಂಭಾಗದಲ್ಲಿ ಇರಿಸಲಾಗಿದ್ದ ಮಾತೆ ಮೇರಿಯ ಪ್ರತಿಮೆಗೆ ನೂರಾರು ಮಕ್ಕಳು ಹಾಗೂ ಹಿರಿಯರು ಬಣ್ಣಬಣ್ಣದ ಹೂವು, ಹೂವಿನ ಎಸಳುಗಳನ್ನು ಅರ್ಪಿಸಿ ಭಕ್ತಿ ಹಾಗೂ ಸಂತಸ ವ್ಯಕ್ತಪಡಿಸಿದರು. ಮಾತೆಯ ಮೇಲಿನ ಗೌರವ, ಭಕ್ತಿ ಹಾಗೂ ಹೆಣ್ಣುಮಕ್ಕಳ ರಕ್ಷಣೆಯ ಕಾಳಜಿ ಈ ಆಚರಣೆಯಲ್ಲಿ ಪ್ರತಿಬಿಂಬಿಸಿತು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರ ಅನುಪಸ್ಥಿತಿಯಲ್ಲಿ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ದೇವಾಲಯದಲ್ಲಿ ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಹೊಸ ತೆನೆಯನ್ನು ಆಶೀರ್ವದಿಸಿ, ಹಬ್ಬದ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಬಳಿಕ ಹಬ್ಬದ ಸಂದೇಶ ನೀಡಿದರು.
ಮೊಂತಿ ಹಬ್ಬವು ಧಾರ್ಮಿಕ ಮಹತ್ವದ ಆಚರಣೆಯಾಗಿರುವುದರ ಜೊತೆಗೆ ಕೃತಜ್ಞತೆ, ಕುಟುಂಬ ಪ್ರೀತಿ, ಹಂಚಿಕೆ ಹಾಗೂ ಪರಸ್ಪರ ಕಾಳಜಿಯಂತಹ ಸಾರ್ವತ್ರಿಕ ಮೌಲ್ಯಗಳನ್ನು ಸಾರುವ ಶ್ರೀಮಂತ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದು ಅವರು ಹೇಳಿದರು.
ಕುಟುಂಬದ ಸದಸ್ಯರು ಪರಿಪೂರ್ಣರಾಗಿರುವುದರಿಂದ ಕುಟುಂಬ ಬಲಿಷ್ಠವಾಗುವುದಿಲ್ಲ. ಪರಸ್ಪರ ಅರ್ಥಮಾಡಿಕೊಳ್ಳುವುದು, ತಪ್ಪುಗಳನ್ನು ಕ್ಷಮಿಸುವುದು, ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಹಾಗೂ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವ ಮನೋಭಾವವೇ ಕುಟುಂಬವನ್ನು ಗಟ್ಟಿಗೊಳಿಸುತ್ತದೆ. ಕ್ಷಮೆ ಸಂಬಂಧಗಳನ್ನು ಗುಣಪಡಿಸಿದರೆ, ಮೆಚ್ಚುಗೆ ಮತ್ತು ಪ್ರೋತ್ಸಾಹ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.
ಮೊಂತಿ ಹಬ್ಬವು ಭೂಮಿಯೊಂದಿಗಿನ ನಮ್ಮ ಸಂಬಂಧವನ್ನೂ ನೆನಪಿಸುತ್ತದೆ. ಹೊಸ ಬೆಳೆ, ಫಲ-ಪುಷ್ಪಗಳು ಪ್ರಕೃತಿಯ ಔದಾರ್ಯ ಹಾಗೂ ಭೂಮಿಯನ್ನು ದುಡಿದು ಬೆಳೆಸುವ ರೈತರ ಪರಿಶ್ರಮದ ಸಂಕೇತವಾಗಿವೆ. ನಾವು ಪಡೆಯುವ ಆಹಾರಕ್ಕಾಗಿ ಕೃತಜ್ಞರಾಗಿರಬೇಕು, ರೈತರ ಪರಿಶ್ರಮವನ್ನು ಗೌರವಿಸಬೇಕು ಹಾಗೂ ಪರಿಸರವನ್ನು ಜವಾಬ್ದಾರಿಯಿಂದ ಕಾಪಾಡಬೇಕು ಎಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ ಎಂದು ತಿಳಿಸಿದರು.
ಪವಿತ್ರ ಕನ್ಯಾಮರಿಯಮ್ಮನ ಜನ್ಮದಿನವು ಹಬ್ಬಕ್ಕೆ ಧಾರ್ಮಿಕ ಅರ್ಥವನ್ನು ನೀಡಿದರೆ, ಮೊಂತಿ ಹಬ್ಬ ಸಾರುವ ಕೃತಜ್ಞತೆ, ಹಂಚಿಕೆ, ಹಿರಿಯರಿಗೆ ಗೌರವ, ಕುಟುಂಬ ಪ್ರೀತಿ, ಕ್ಷಮೆ, ಪರಸ್ಪರ ಕಾಳಜಿ ಮತ್ತು ಪ್ರಕೃತಿ ಗೌರವದಂತಹ ಮೌಲ್ಯಗಳು ಧರ್ಮದ ಗಡಿಗಳನ್ನು ಮೀರಿ ಎಲ್ಲರನ್ನೂ ಸ್ಪರ್ಶಿಸುವ ಸಾರ್ವತ್ರಿಕ ಮೌಲ್ಯಗಳಾಗಿವೆ ಎಂದರು.

ಚರ್ಚ್‌ಗಳಲ್ಲಿ ವಿಶೇಷ ಆಚರಣೆ
ಉಡುಪಿ ಶೋಕಮಾತಾ ದೇವಾಲಯದಲ್ಲಿ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಅವರ ನೇತೃತ್ವದಲ್ಲಿ ಹಬ್ಬದ ವಿಶೇಷ ಬಲಿಪೂಜೆ ನೆರವೇರಿತು. ವಂ. ಪ್ರವೀಣ್ ಲಿಯೋ ಹಾಗೂ ವಂ. ವಿಜಯ್ ಡಿಸೋಜಾ ಉಪಸ್ಥಿತರಿದ್ದರು.
ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಹಾಗೂ ಚರ್ಚಿನ ರೆಕ್ಟರ್ ಮೊನ್ಸಿಂಜ್ಞೋರ್ ಫ್ರಾನ್ಸಿಸ್ ಲೂವಿಸ್ ಅವರು ಹೊಸ ತೆನೆಯನ್ನು ಆಶೀರ್ವದಿಸಿ ಪವಿತ್ರ ಬಲಿಪೂಜೆ ಅರ್ಪಿಸಿದರು.
ಮಾತೆ ಮೇರಿಯ ಜನ್ಮದಿನದಂದೇ ಕರಾವಳಿಯಲ್ಲಿ ವಿಶೇಷವಾಗಿ ಆಚರಿಸಲಾಗುವ ತೆನೆ ಹಬ್ಬವು ಮನೆಮನೆಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ಮುಂಜಾನೆಯೇ ಭತ್ತದ ತೆನೆ ಹಾಗೂ ಕಬ್ಬನ್ನು ಗುರಿಕಾರರು ಮೆರವಣಿಗೆಯಲ್ಲಿ ಚರ್ಚ್‌ಗೆ ಕೊಂಡೊಯ್ದರು. ಅಲ್ಲಿ ಧರ್ಮಗುರುಗಳು ತೆನೆ ಪೂಜೆ ನೆರವೇರಿಸಿ ಬಳಿಕ ಭಕ್ತರಿಗೆ ತೆನೆ ಹಂಚಿದರು.
ಭಕ್ತರು ಭತ್ತದ ತೆನೆಯನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದು ದೇವರ ಪೀಠದ ಮೇಲಿರಿಸಿ ಪ್ರಾರ್ಥನೆ ಸಲ್ಲಿಸಿದರು. ಹೊಸ ಭತ್ತದ ಕಾಳುಗಳಿಂದ ಅಕ್ಕಿ ತಯಾರಿಸಿ, ಹಾಲು ಹಾಗೂ ತೆಂಗಿನ ಹಾಲು ಬಳಸಿ ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಹೊಸ ಅಕ್ಕಿಯ ಊಟ ಸವಿದರು. ಹಬ್ಬದ ವಿಶೇಷವಾಗಿ ಸಂಪೂರ್ಣ ಸಸ್ಯಾಹಾರಿ ಊಟ ಮನೆಮನೆಗಳಲ್ಲಿ ತಯಾರಿಸಲಾಯಿತು.
ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜಾ, ಕುಂದಾಪುರ ಹೋಲಿ ರೋಜರಿ ಚರ್ಚ್‌ನಲ್ಲಿ ವಂ. ಪಾವ್ಲ್ ರೇಗೊ, ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಂ. ಚಾರ್ಲ್ಸ್ ಮಿನೇಜಸ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿಯೂ ತೆನೆ ಹಬ್ಬ ಹಾಗೂ ಮಾತೆ ಮೇರಿ ಜನ್ಮದಿನವನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.







