ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಳೆದ 25 ವರ್ಷಗಳಿಂದ ವಿಶಿಷ್ಟ ಗುರುತನ್ನು ಮೂಡಿಸಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಮಹೋತ್ಸವ ವರ್ಷದ ಕಾರ್ಯಕ್ರಮಗಳಿಗೆ ಮೇ 31ರಂದು ಚಾಲನೆ ದೊರೆಯಲಿದೆ ಎಂದು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 31ರಂದು ಸಂಜೆ 5 ಗಂಟೆಗೆ ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರಜತ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪಡುಬಿದ್ರಿಯ ಯಸ್ಸೆನ್ ಸ್ಪೆಷಲ್ ಎಕನಾಮಿಕ್ ಝೋನ್ನ ಮುಖ್ಯಸ್ಥ ಹಾಗೂ ಹಿರಿಯ ಮಹಾ ಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ರಜತ ಸಂಭ್ರಮದ ಲೋಗೊವನ್ನು ಅನಾವರಣಗೊಳಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 5 ಗಂಟೆಗೆ ‘ಸುಮಲಹರಿ’ ರಂಗಗೀತ ಗಾಯನ ನಡೆಯಲಿದ್ದು, ಸುಮನಸಾ ಇದುವರೆಗೆ ಪ್ರದರ್ಶಿಸಿರುವ ಆಯ್ದ ನಾಟಕಗಳ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 7 ಗಂಟೆಗೆ ಮಕ್ಕಳ ರಂಗಶಿಬಿರ ‘ಅಟ್ಟಮುಟ್ಟ’ದಲ್ಲಿ ಸಿದ್ಧಗೊಂಡಿರುವ ‘ರಿಟಯರ್ಡ್ ಬೆಕ್ಕು’ ಹಾಗೂ ‘ಸೂಪರ್ ಹೀರೋಸ್ ಆಫ್ ಸುಮನಸಾ’ ನಾಟಕಗಳ ಪ್ರದರ್ಶನ ನಡೆಯಲಿದೆ. ಈ ನಾಟಕಗಳನ್ನು ಚರಿತ್ ಸುವರ್ಣ ರಚಿಸಿ ನಿರ್ದೇಶಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು ಹಾಗೂ ಉಪಾಧ್ಯಕ್ಷ ವಿನಯ್ ಕಲ್ಮಾಡಿ ಉಪಸ್ಥಿತರಿದ್ದರು.





