ಸೌಜನ್ಯಾ ಹೋರಾಟ ಸಮಿತಿಯಿಂದ ‘ಉಜಿರೆ ಚಲೋ’ ಕಾರ್ಯಕ್ರಮವನ್ನು ಆ.24ರಂದು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸೌಜನ್ಯಪರ ಹೋರಾಟ ಸಮಿತಿಯ ಕೆ.ದಿನೇಶ್ ಗಾಣಿಗ ಹೇಳಿದರು.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ನಡೆದ ಶಿಕ್ಷಕಿ ವೇದವಲ್ಲಿ, ವಿದ್ಯಾರ್ಥಿನಿ ಪದ್ಮಲತಾ ಆನೆ ಮಾವುತ ಹಾಗೂ ಆತನ ಪತ್ನಿ ಮತ್ತು ಸೌಜನ್ಯಾ ಕೊಲೆ ಪ್ರಕರಣಗಳ ಕುರಿತು ಎಸ್ಐಟಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಈ ಉಜಿರೇ ಜಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಸಂತೋಷ್ ರಾವ್ ನಿರಪರಾಧಿ ಎಂದು ಹೇಳಿರುವ ನ್ಯಾಯಾಲಯದ ಆದೇಶದಲ್ಲಿ, ತನಿಖೆಯ ಮೊದಲ ಹಂತದಲ್ಲಿ ಅಧಿಕಾರಿಗಳಿಂದ ತಪ್ಪು ಮಾಡಿದ್ದಾರೆ. ಈ ಬಗ್ಗೆ ಅಕ್ವಿಟಲ್ ಸಮಿತಿ ರಚಿಸಿ ತನಿಖೆ ಮಾಡಿ ಎಂದು ಆದೇಶಿಸಲಾಗಿದೆ. ಆದರೆ ಆ ತನಿಖೆ ಆಗಿಲ್ಲ. ಈ ಬಗ್ಗೆ ನಾವು ಈಗಾಗಲೇ ಎಸ್ಐಟಿ ಮುಖ್ಯಸ್ಥರನ್ನು ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿದ್ದೇವೆ ಎಂದರು.
1973ರಲ್ಲಿ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾ ಅತ್ಯಾಚಾರ ಹಾಗೂ ಕೊಲೆಯಾಗಿತ್ತು. 1986ರಲ್ಲಿ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುವ ಶಾಲೆಯ ಶಿಕ್ಷಕಿ ವೇದವಲ್ಲಿ ಅವರನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿತ್ತು. ಇವೆರಡೂ ಪ್ರಕರಣಗಳಲ್ಲಿ ಆರೋಪಿ ಪತ್ತೆಯಾಗಿಲ್ಲ. 2012ರಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಆನೆ ಮಾವುತ ನಾರಾಯಣ ಮತ್ತು ಯಮುನಾರ ಕೊಲೆ ನಡೆದಿತ್ತು. ಈ ಪ್ರಕರಣದ ಆರೋಪಿಯೂ ಸಿಕ್ಕಿಲ್ಲ. ಇದಲ್ಲದೆ ಉಜಿರೆಯಲ್ಲಿ 2002ರಿಂದ 2012ರವರೆಗೆ 452 ಅಸಹಜ ಸಾವು ಪ್ರಕರಣಗಳು ನಡೆದಿವೆ. ಇದರಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಹೇಳಿರುವ ಮೃತದೇಹಗಳಿಗೂ ಪೊಲೀಸ್ ಇಲಾಖೆ ನೀಡಿರುವ ಯುಡಿಆರ್ ಗೂ ವ್ಯತ್ಯಾಸ ಕಂಡುಬಂದಿದೆ. ಹಾಗಾಗಿ ಈ ಬಗ್ಗೆ ಎಸ್ಐಟಿ ಮೂಲಕ ತನಿಖೆ ಆಗಬೇಕಾಗಿದೆ ಎಂದು ಅವರು ಹೇಳಿದರು.
ಸೌಜನ್ಯಾ ಹೋರಾಟಗಾರರು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿಲ್ಲ. ಹಾಗಿದ್ದರೂ ಹೋರಾಟಗಾರರ ಮೇಲೆ ದೂರು ನೀಡಲಾಗುತ್ತಿದೆ. ಹಿಂದೂ ಧರ್ಮ ಹಾಳಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ತಪ್ಪು ಆದಾಗ ಹೋರಾಟ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ. ನ್ಯಾಯಪರ ಹೋರಾಟಕ್ಕೆ ಸಂಬಂಧಿಸಿ ನಮ್ಮ ವಿರುದ್ಧ ಮುಸ್ಲಿಮರ ಹೋರಾಟ, ಕಮ್ಯುನಿಸ್ಟರು ಇದ್ದಾರೆ ಎಂದು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ನಾವು ಇಂತಹವರೇ ಅಪರಾಧಿಗಳು ಎಂದು ಹೇಳಿಲ್ಲ. ಅಪರಾಧಿಗಳನ್ನು ಪತ್ತೆ ಹಚ್ಚಿ ಎಂದು ಕೇಳುತ್ತಿರುವುದು ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆದಿತ್ಯ, ಯೋಗೇಂದ್ರ ಪುತ್ರನ್, ಸಚಿನ್ ಶ್ರೀಯಾನ್ ಉಪಸ್ಥಿತರಿದ್ದರು.