ಉಳ್ಳಾಲದ ಕೋಟೆಪುರ ಸಮುದ್ರ ದಂಡೆಯಲ್ಲಿರುವ ಮೀನು ಸಂಸ್ಕರಣಾ ಘಟಕಗಳಲ್ಲಿ ಹಾನಿಕಾರಕ ಕಲ್ಲಿದ್ದಲನ್ನು ಇಂಧನವಾಗಿ ಬಳಸದಂತೆ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
“ಸಮುದ್ರ ದಂಡೆಯಲ್ಲಿರುವ ಯುನೈಟೆಡ್ ಮರೈನ್ ಮತ್ತು ಇಂಡೋ ಫಿಶ್ಮೀಲ್ ಕಂಪೆನಿಗಳು ಮೀನು ಸಂಸ್ಕರಿಸಲು ಜನರ ಆರೋಗ್ಯಕ್ಕೆ ಹಾನಿಕಾರಕವಾದ ಕಲ್ಲಿದ್ದಲನ್ನು ಇಂಧನವಾಗಿ ಬಳಸುತ್ತಿವೆ. ಇದು ಅಲ್ಲಿನ ಸ್ಥಳೀಯ ಜನರಲ್ಲಿ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶದ ತೊಂದರೆ, ಎದೆನೋವು, ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಗಂಭೀರ ರೋಗಗಳನ್ನು ಉಂಟು ಮಾಡುತ್ತಿದೆ. ಅಲ್ಲದೆ ಕಲ್ಲಿದ್ದಲಿನ ಬಳಕೆಯಿಂದ ಅಂತರ್ಜಲ ಕಲುಷಿತಗೊಂಡುಮತ್ತಷ್ಟು ಗಂಭೀರ ಪರಿಣಾಮಗಳನ್ನು ಸೃಷ್ಟಿಸುವ ಆತಂಕ ಹೆಚ್ಚಾಗಿದೆ. ಇದನ್ನು ಜಿಲ್ಲಾ ಆರೋಗ್ಯ ಇಲಾಖೆ ಕೂಡ ದೃಢಪಡಿಸಿದೆ. ಇಷ್ಟಾದರೂ ಸಂಸ್ಕರಣಾ ಘಟಕಗಳಲ್ಲಿ ನಿಯಮ ಮೀರಿ ಕಲ್ಲಿದ್ದಲು ಬಳಸಲಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಕಾನೂನುಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳಿಂದಾಗಿ ನದಿಯೇ ಮುಚ್ಚಿಹೋಗಿ ಕೋಟೆಪುರ ಮತ್ತು ಮುಳಿಹಿತ್ಲು ನಡುವೆ ದೋಣಿ ಸಂಪರ್ಕ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಉಳ್ಳಾಲ ಕೋಟೆಪುರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಘಟಕಗಳು ಮೀನು ಸಂಸ್ಕರಣೆ ಮಾಡುವ ಸಂದರ್ಭದಲ್ಲಿ ಕೆಟ್ಟ ವಾಸನೆ ಹೊರ ಸೂಸುತ್ತಿದ್ದು ಇದರಿಂದ ಸ್ಥಳೀಯ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೀನು ಸಂಸ್ಕರಣೆಯಿಂದ ಹೊರ ಬರುವ ಕೊಳೆತ ನೀರನ್ನು ಸಮುದ್ರಕ್ಕೆ ಬಿಡಲಾಗುತ್ತಿದೆ ಇದರಿಂದ ಜಲಚರ ಜೀವಿಗಳು ನಾಶವಾಗುತ್ತಿವೆ. ಘಟಕಗಳಿಂದ ನಿಯಮ ಮೀರಿದ ಶಬ್ಧಗಳು ಹೊರ ಬರುತ್ತಿದ್ದು, ಶಬ್ಧ ಮಾಲಿನ್ಯವೂ ಉಂಟಾಗುತ್ತಿದೆ. ಒಟ್ಟಾರೆಯಾಗಿ ಮೀನು ಸಂಸ್ಕರಣಾ ಘಟಕಗಳು ಪರಿಸರಕ್ಕೆ ಮಾರಕವಾಗಿದೆ” ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್ ಕಳವಳ ವ್ಯಕ್ತಪಡಿಸಿದರು.
“ಈ ಬಗ್ಗೆ ಡಿವೈಎಫ್ಐ ಕಳೆದೆರಡು ವರ್ಷಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಹೋರಾಟ ಮಾಡುತ್ತಿದೆ. ಆದರೂ ಯಾವುದೇ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ. ಜನರ ಪ್ರಾಣಕ್ಕೆ ಹಾನಿಯುಂಟು ಮಾಡುವ ಇಂತಹ ಘಟಕಗಳ ವಿರುದ್ದ ಶೀಘ್ರವೇ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾನಿಕಾರಕ ಕಲ್ಲಿದ್ದಲನ್ನು ಇಂಧನವಾಗಿ ಬಳಸುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ?: ಉಳ್ಳಾಲ | ಬಂದೂಕು ತೋರಿಸಿ ಹಾಡಹಗಲಲ್ಲೇ ಬ್ಯಾಂಕ್ ದರೋಡೆ
ಈ ವೇಳೆ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಡಿ-ಕೋಟೆಪುರ ಘಟಕ ಅಧ್ಯಕ್ಷ ವಾಕರ್ ಕೋಟೆಪುರ, ಕಾರ್ಯದರ್ಶಿ ನೌಫಲ್ ಕೋಟೆಪುರ, ಮುಖಂಡರಾದ ಮುಝಮ್ಮಿಲ್ ಕೋಟೆಪುರ ಉಪಸ್ಥಿತರಿದ್ದರು.
