ʼಚಾಳಿಸ್ ವರ್ಷ ಆಯ್ತು, ಇಲ್ಲೇ ಜಿಂದಗಿ ಮಾಡ್ತಾ ಇದ್ದೀವಿ, ಸಣ್ಣ ಸಣ್ಣ ಮಕ್ಕಳಿಗಿ ತಗೊಂಡಿ ಇವೇ ಜೋಪಡಿದಾಗ ಸಂಸಾರ ನಡಸ್ತಾ ಇದ್ದೀವಿ, ನಮ್ಗ್ ಭಾಳ್ ವನವಾಸ್ ಅದಾ ನೋಡ್ರಿ, ನಮ್ಗ್ ಗೋಳು ಯಾರೂ ಕೇಳಲ್ಲ, ಯಾರಿಗೂ ನಮ್ ಕಷ್ಟ ಅರ್ಥ ಆಗಲ್ಲ, ಎಲ್ಲರಿಗೂ ಓಟ್ ಹಾಕ್ತೇವ್, ಹತ್ತು ವರ್ಷದಿಂದ ನಿಮ್ಗೆ ಮನೆ ಕೊಡ್ತೀವಿ, ಜಾಗ ಕೊಡ್ತೀವಿ ಅಂತ ಹೇಳ್ತಾರೆ. ಖರೇ ಇಲ್ಲಿತನಕ ಜಾಗ ಇಲ್ಲ, ಮನೆ ಇಲ್ಲ. ಈ ಜೋಪಡಿದಾಗ ಕರೆಂಟ್ ದಿಕ್ಕಿಲ್ಲ, ಕುಡಿಲಾಕ್ ಛಂದಂದ್ ನೀರ್ ಇಲ್ಲ, ಮಳೆ ಬಂದ್ರೆ ಸಾಕು, ಗುಡಿಸಿ ತುಂಬಾ ನೀರು, ಸುತ್ತಲೂ ಕೆಸರೇ ಕೆಸರು, ಇಂತಹ ಸಂಕಟದಾಗ ಬೇರೆಯವರ ಜಾಗದಾಗ ಇನ್ನೆಷ್ಟು ದಿನ ಬದುಕಬೇಕ್ರೀ ಹೇಳ್ರೀʼ ಎಂದು ಅಲೆಮಾರಿ ಜನಾಂಗದ ಮಹಿಳೆ ಸುಶೀಲಾ ಸಮುದಾಯದ ಸಂಕಟವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.
ಬೀದರ್ ನಗರದ ನೌಬಾದ್‌ನ ಚೌಳಿ ಕಮಾನ್ ಒಳಗೆ ಖಾಸಗಿ ಜಮೀನಿನಲ್ಲಿ ಟೆಂಟ್ ನಿರ್ಮಿಸಿಕೊಂಡು ಹರಕಲು, ಮುರುಕಲು ಜೋಪಡಿಯಲ್ಲಿ ವಾಸಿಸುತ್ತಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗಕ್ಕೆ ಜಿಲ್ಲಾಡಳಿತ ಭರವಸೆ ನೀಡಿ ಹಲವು ವರ್ಷಗಳೇ ಕಳೆದರೂ ಸೂರು ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಅಲೆಮಾರಿ ಜನಾಂಗದ ಘಿಸಾಡಿ, ಜೋಷಿ, ಗೋಂದಳಿ, ಮಂಗರವಾಡಿ, ಬುಡಬುಡಕಿ ಸೇರಿದಂತೆ ಇತರೆ ಸಮುದಾಯಕ್ಕೆ ಸೇರಿದ ಸುಮಾರು 70ಕ್ಕೂ ಅಧಿಕ ಕುಟುಂಬಗಳು ಇಲ್ಲಿ ವಾಸಿಸುತ್ತವೆ. ಕಳೆದ 30 ವರ್ಷಗಳಿಂದ ಖಾಸಗಿಯವರ ಜಾಗದಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬೀದಿಯಲ್ಲಿ ಚಿಂದಿ ಆಯುವುದು, ಭಿಕ್ಷಾಟನೆ, ಆಟಿಕೆ ಸಾಮಾನು ಮಾರಾಟ ಸೇರಿದಂತೆ ಇತರೆ ಕೂಲಿ ನಾಲಿ ಮಾಡಿ ಬದುಕು ದೂಡುತ್ತಿದ್ದಾರೆ.
ಬೇರೆಡೆಯಿಂದ ವಲಸೆ ಬಂದ ಇವರಿಗೆ ಯಾವುದೇ ದಾಖಲೆ ಇರಲಿಲ್ಲ. ಕೆಲ ವರ್ಷಗಳ ಹಿಂದೆ ಸಾಮಾಜಿಕ ಕಾರ್ಯಕರ್ತರ ಸಹಕಾರದಿಂದ ಎಲ್ಲ ಅಲೆಮಾರಿಗಳಿಗೆ ದಾಖಲೆಗಳು ದಕ್ಕಿವೆ. ಆದರೆ ಸ್ವಂತ ಸೂರಿಲ್ಲ, ವಿದ್ಯುತ್, ರಸ್ತೆ, ಚರಂಡಿ ಅಂತೂ ಮೊದಲೇ ಇಲ್ಲ. ಮೂಲ ಸೌಕರ್ಯದಿಂದ ವಂಚಿತರಾಗಿ ಬದುಕುತ್ತಿರುವ ಈ ಸಮುದಾಯಕ್ಕೆ ಜಿಲ್ಲಾಡಳಿತ ಶಾಶ್ವತ ಸೂರು ನೀಡುವ ಭರವಸೆ ಕೊಡುತ್ತಲೇ ಬಂದಿದೆ.

ʼಇಲ್ಲಿ ವಾಸಿಸುವ ಅಲೆಮಾರಿ ಸಮುದಾಯಕ್ಕೆ ಕುಡಿಯುವ ನೀರು ಬಿಟ್ಟರೆ ಉಳಿದ ಯಾವ ಸೌಕರ್ಯವೂ ಇಲ್ಲ. ಸ್ವಲ್ಪ ಮಳೆ ಬಂದ್ರೆ ಸಾಕು, ಜೋಪಡಿಗಳು ಜಲಾವೃತವಾಗುತ್ತವೆ. ಜೋಪಡಿ ಸುತ್ತಲೂ ಹಂದಿ, ನಾಯಿಗಳ ತಾಣವಾಗಿ ಹೊಲಸು ನಾರುತ್ತಿದೆ. ಇಂತಹ ಅವ್ಯವಸ್ಥೆಯಲ್ಲಿ ಪುಟ್ಟ ಮಕ್ಕಳು, ವೃದ್ಧರು, ಗರ್ಭಿಣಿಯರು ಹೇಗೆ ಜೀವನ ನಡೆಸಬೇಕು. ಇಡೀ ಬದುಕು ಬೀದಿಯಲ್ಲಿ ಕಳೆಯಬೇಕಾದಂತಹ ದಾರುಣ ಸ್ಥಿತಿ ನಮ್ಮದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ಣಿಗೆ ನಮ್ಮ ಸಂಕಷ್ಟ ಕಾಣುತ್ತಿಲ್ಲʼ ಎಂದು ಸಮುದಾಯದ ದುರ್ಗಪ್ಪ ಅಳಲು ತೋಡಿಕೊಂಡಿದ್ದಾರೆ.
ಯಾವುದೇ ನಿರ್ದಿಷ್ಟ ನೆಲೆ ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ಕಾರಣ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಅತಿ ಅಗತ್ಯ ಮೂಲಭೂತ ಸೌಕರ್ಯವಾದ ವಸತಿ ಸೌಲಭ್ಯವನ್ನು ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇಂಥ ನಿರ್ಗತಿಕ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ, ಒಂದು ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶವನ್ನು ನೀಡುವುದು ಸರ್ಕಾರದ ಘನವಾದ ಉದ್ದೇಶವಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅಲೆಮಾರಿಗಳ ಸೂರಿನ ಕನಸು ನನಸಾಗದೇ ಉಳಿದಿರುವುದು ವಿಪರ್ಯಾಸವೇ ಸರಿ.
ʼಅಲೆಮಾರಿ ಸಮುದಾಯದ ಸುಮಾರು 50ಕ್ಕೂ ಹೆಚ್ಚಿನ ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಅದರಲ್ಲಿ ಕೆಲವರು ಶಾಲೆ ಬಿಟ್ಟು ಚಿಂದಿ ಆಯುವ ಕೆಲಸಕ್ಕೆ ಸೇರಿದರೆ, ಹಲವು ಮಕ್ಕಳು ಶಾಲೆಗೆ ದಾಖಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಳೆ, ಬಿಸಿಲು, ಚಳಿ ಎನ್ನದೆ ಪುಟ್ಟ ಕಂದಮ್ಮಗಳನ್ನು ಒಡಲಲ್ಲಿ ಇಟ್ಟುಕೊಂಡು ದಯನೀಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದೇವೆ. 2017ರಿಂದ ಜಿಲ್ಲಾಡಳಿತ ನಮಗೆ ಜಾಗ ಕೊಡ್ತೀವಿ ಅಂತ ಹೇಳ್ತಾನೇ ಇದೆ. ಆದರೆ ಇಲ್ಲಿಯವರೆಗೆ ಜಾಗವೂ ಇಲ್ಲ, ಮನೆಯೂ ಇಲ್ಲ. ಅನೇಕ ಬಾರಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿ ಸೋತು ಹೋಗಿದ್ದೇವೆʼ ಎಂದು ಪೋಚಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ಠರಾವು ಪಾಸಾದರೂ ದಕ್ಕದ ಸೂರು :
ಬೀದರ ಪಟ್ಟಣದ ನೌಬಾದ್ ಹತ್ತಿರ ಚೌಳಿ ಕಮಾನ್ ಬಳಿ ವಾಸಿಸುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ರಹಿತ ಕುಟುಂಬಗಳಿಗೆ 2017ರಲ್ಲಿ ಬೀದರ್ ಹೊರವಲಯದ ಗೊರನಳ್ಳಿ ಗ್ರಾಮದ ಸರ್ವೇ ನಂ.27, 28 ರಲ್ಲಿ 2 ಎಕರೆ ಜಮೀನಿನಲ್ಲಿ 150 ಮನೆಗಳನ್ನು ನಿರ್ಮಿಸಲು ನಗರಸಭೆ ಸಾಮಾನ್ಯ ನಡವಳಿಯಲ್ಲಿ ನಿವೇಶನ ಮಂಜೂರು ಮಾಡಲು ಸರ್ವಾನುಮತದಿಂದ ಠರಾವು ಪಾಸು ಮಾಡಿ ಆದೇಶಿಸಲಾಗಿತ್ತು.
ಬಳಿಕ ಅಂದಿನ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ನೇತ್ರತ್ವದಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ಸೌಲಭ್ಯ ಆಯ್ಕೆ ಸಮಿತಿಯ ನಡವಳಿಯಲ್ಲಿ 65 ಜನ ಅರ್ಹ ಫಲಾನುಭವಿಗಳಿಗೆ ಆಯ್ಕೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ವಸತಿ ಸೌಲಭ್ಯ ಮಂಜೂರಾತಿಗಾಗಿ ಪ್ರಸ್ತಾವನೆಯೂ ಸಲ್ಲಿಸಲಾಗಿತ್ತು. ಆದರೆ ಸದರಿ ಜಮೀನನ್ನು ಮಂಜೂರಾತಿ ಆದೇಶ , ಚೆಕ್ ಬಂದಿ, ಖಾತಾ ಬದಲಾವಣೆ ಸೇರಿದಂತೆ ಸಂಬಂಧಪಟ್ಟ ವಿವರಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೀಡುವಂತೆ ಕೋರಿದರೂ ನಗರಸಭೆ ಯಾವುದೇ ಮಾಹಿತಿ ನೀಡದೆ, ಸದರಿ ಜಮೀನು ಬೇರೆ ಯೋಜನೆಗೆ ನೀಡಲಾಗಿದೆ ಎಂದು ಉತ್ತರ ನೀಡಿತು.
ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಜನಾಂಗ :
ʼನಮ್ಮ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರ ಗುರುತಿನ ಚೀಟಿ ಸೇರಿದಂತೆ ಎಲ್ಲ ದಾಖಲೆಗಳಿದ್ದರೂ ಜನಪ್ರತಿನಿಧಿಗಳಿಗೆ ನಮ್ಮ ಜ್ಞಾಪಕ ಕೇವಲ ಚುನಾವಣೆಯಲ್ಲಿ ಮಾತ್ರ. ತುಳಿತಕ್ಕೊಳಗಾದ ಜನಾಂಗವೆಂದು ನಮ್ಮ ಕಡೆ ಕಣ್ಣೆತ್ತಿ ಸಹ ನೋಡುವುದಿಲ್ಲ. ಹಿಂದಿನ ಜಿಲ್ಲಾಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲʼ ಎಂದು ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಜಾಗದ ಮಾಲೀಕರು ಗುಡಿಸಲು ಖಾಲಿ ಮಾಡುವಂತೆ ಪದೇ ಪದೇ ಹೇಳುತ್ತಿದ್ದಾರೆ. ಏಕಾಏಕಿ ಖಾಲಿ ಮಾಡಿಸಿದರೆ ನಾವು ಎಲ್ಲಿ ಹೋಗಬೇಕು. ಮಾನವೀಯತೆ ದೃಷ್ಟಿಯಿಂದ ನಮಗೆ ಕನಿಷ್ಠ ನಿವೇಶನ ಕೊಟ್ಟರೆ ಸಾಕು, ನಾವು ಅಲ್ಲೇ ಹೋಗಿ ಗುಡಿಸಲು ಹಾಕಿಕೊಂಡು ವಾಸಿಸುತ್ತೇವೆ ಎಂಬುದು ಅಲೆಮಾರಿ ಜನರ ಆಗ್ರಹ.

ನಿವೇಶನ ಹಕ್ಕಿಗಾಗಿ ಉಪವಾಸ ಸತ್ಯಾಗ್ರಹ :
ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ ಬೀದಿ ಬದಿಯಲ್ಲಿ ಬದುಕು ಸಾಗಿಸುತ್ತಿರುವ ಅಲೆಮಾರಿ ಸಮುದಾಯಕ್ಕೆ ನಿವೇಶನ ಸೇರಿದಂತೆ ಮೂಲ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದನ್ನು ಖಂಡಿಸಿ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಅವರು ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು 2023ರ ಜ.23 ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಮೂರನೇ ದಿನಕ್ಕೆ ಕಾಲಿಟ್ಟ ವೇಳೆ ಸತ್ಯಾಗ್ರಹ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸಿಂಧು ಎಚ್.ಎಸ್. ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಜಿಲ್ಲಾ ಅಧಿಕಾರಿ ಸದಾಶಿವ ಬಡಿಗೇರ ಅವರು ಭೇಟಿ ನೀಡಿ ಅಲೆಮಾರಿ ಜನಾಂಗದವರೊಂದಿಗೆ ಸಮಸ್ಯೆಗಳನ್ನು ಸುದೀರ್ಘವಾಗಿ ಚರ್ಚಿಸಿದ್ದರು.
ʼಜಿಲ್ಲಾಡಳಿತಕ್ಕೆ ಅಲೆಮಾರಿ ಜನಾಂಗದವರಿಗೆ ನ್ಯಾಯ ಒದಗಿಸಿಕೊಡುವ ಜವಾಬ್ದಾರಿ ಇದೆ, ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನೇತ್ರತ್ವದಲ್ಲಿ ಅಲೆಮಾರಿಗಳ ಸಮೀಕ್ಷೆ ನಡೆಸಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು. ತಾವು ಉಪವಾಸ ಸತ್ಯಾಗ್ರಹ ಕೈಬಿಡಬೇಕುʼ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ನೀಡಿದ್ದ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು.
ʼಅಲೆಮಾರಿಗಳಿಗೆ ನಿವೇಶನ ಕೊಡುವ ಬಗ್ಗೆ ಜಿಲ್ಲಾಡಳಿತ ಭರವಸೆ ಕೊಟ್ಟು ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಿಗೆ ಈ ಕುರಿತು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲʼ ಎಂದು ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ ರೊಟ್ಟೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼನಗರದ ವಿವಿಧೆಡೆ ಸುಮಾರು 600ಕ್ಕೂ ಅಧಿಕ ವಸತಿ ವಂಚಿತ ಅಲೆಮಾರಿಗಳಿಗೆ 6 ಎಕರೆ ಜಮೀನು ಮಂಜೂರು ಮಾಡಬೇಕು. ಇಲ್ಲದಿದ್ದರೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಮನೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದುʼ ಎಂದು ಒತ್ತಾಯಿಸಿದ್ದಾರೆ.
ಬೀದರ್ ಕ್ಷೇತ್ರದ ಶಾಸಕರು, ಪೌರಾಡಳಿತ ಸಚಿವರೂ ಆದ ರಹೀಂ ಖಾನ್ ಅವರು ಈದಿನ.ಕಾಮ್ ನೊಂದಿಗೆ ಮಾತನಾಡಿ, ʼಅಲೆಮಾರಿಗಳಿಗೆ ನಿವೇಶನ ಮಂಜೂರು ಮಾಡಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ನಿವೇಶನ ಒದಗಿಸುವಂತೆ ತಿಳಿಸಲಾಗುವುದುʼ ಎಂದು ಪ್ರತಿಕ್ರಿಯಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಈದಿನ.ಕಾಮ್ ದೊಂದಿಗೆ ಮಾತನಾಡಿ, ʼನಗರ ಪ್ರದೇಶದಲ್ಲಿ ಖಾಲಿ ಸರ್ಕಾರಿ ಜಮೀನು ಸಿಗುವುದು ಕಠಿಣ. ನಗರದ ಹೊರವಲಯದಲ್ಲಿ ಜಾಗ ಕೊಡಬೇಕೆಂದರೆ ಅವರು ಒಪ್ಪುತ್ತಿಲ್ಲ. ಅವರು ಒಪ್ಪಿದರೆ ಬೀದರ್ ಹೊರವಲಯದಲ್ಲಿ ಖಾಲಿ ಇರುವ ಸರ್ಕಾರಿ ಜಮೀನು ಗುರುತಿಸಿ ಶೀಘ್ರದಲ್ಲಿ ಕೊಡಲಾಗುವುದುʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಈದಿನ ವರದಿ ಫಲಶೃತಿ : ತೊಗರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಸಿಂಧು ಎಚ್.ಎಸ್. ಅವರು ಈದಿನ.ಕಾಮ್ ಜೊತೆ ಮಾತನಾಡಿ, ʼಅಲೆಮಾರಿಗಳಿಗೆ ನಿವೇಶನ ಒದಗಿಸುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾವು ಕೊಡುವ ಜಾಗಕ್ಕೆ ಅಲೆಮಾರಿ ಜನಾಂಗದವರು ಒಪ್ಪಿದರೆ ಜಿಲ್ಲಾಡಳಿತದಿಂದ ನಿವೇಶನ ಕೊಡಿಸಲಾಗುವುದುʼ ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.