ಬೀದರ್‌ | ಕೇಂದ್ರ ಬಜೆಟ್‌ 2025 : ಯಾರು ಏನಂದ್ರು?

Date:

Advertisements

ಕೇಂದ್ರ ಸರ್ಕಾರ ಇಂದು ಮಂಡಿಸಿದ ಬಜೆಟ್ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ ಎಂದು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

ʼಬಜೆಟ್‌ನಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾಯ್ದೆ ಕುರಿತು ಯಾವುದೇ ಘೋಷಣೆ ಮಾಡದಿರುವುದು ಅನ್ನದಾತರ ಮೇಲೆ ದೊಡ್ಡ ಅನ್ಯಾಯವಾಗಿದೆ. ರೈತರು ಬೆಳೆದ ಬೆಳೆಗೆ ಖಚಿತ ಬೆಲೆ ನಿರ್ಧಾರವಾಗಬೇಕೆಂಬ ಬಹುದಿನದ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಪ್ರಕೃತಿ ವಿಕೋಪದ ಹೊಡೆತದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಕುರಿತು ಯಾವುದೇ ಘೋಷಣೆ ಇಲ್ಲ ಎಂಬುದು ವಿಷಾದನೀಯʼ ಎಂದಿದ್ದಾರೆ.

WhatsApp Image 2025 02 01 at 10.00.15 PM
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ

ʼಇದೇ ಎನ್‌ಡಿಎ ಆಡಳಿತದ 11 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟು ಉಲ್ಬಣಿಸಿದೆ, ಈ ಬಜೆಟ್‌ನಲ್ಲಿ ಯುವಕರ ಕೈಗೆ ಉದ್ಯೋಗ ನೀಡುವ ಯಾವುದೇ ಗಂಭೀರ ಯೋಜನೆ ರೂಪಿಸದಿರುವುದು ಖಂಡನಾರ್ಹ. ಬೇರೆ ಕಡೆ ಗಂಭೀರ ಯೋಜನೆಗಳನ್ನು ಘೋಷಿಸಿ, ಕರ್ನಾಟಕದ ಭಾಗ್ಯ ತಿರಸ್ಕರಿಸಿರುವುದು ಅಕ್ಷಮ್ಯ. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ, ಬಿಜೆಪಿ ನೇತೃತ್ವದ ಸರ್ಕಾರ ಎನ್‌ಡಿಎಯೇತರ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯಗಳ ನಡುವೆ ರಾಜಕೀಯ ವ್ಯತ್ಯಾಸಗಳನ್ನು ಮೆಟ್ಟಿಲು ಮಾಡಿಕೊಳ್ಳುವ ನೀತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆʼ ಎಂದು ಹೇಳಿದ್ದಾರೆ.

Advertisements

ಕಲ್ಯಾಣ ಕರ್ನಾಟಕದ ನಿರೀಕ್ಷೆಗಳನ್ನೂ ಹುಸಿಯಾಗಿಸಿದ ಕೇಂದ್ರ:

ʼಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ಅಸಡ್ಡೆ ತೋರಿಸಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ 7 ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ₹5000 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿಲ್ಲ ಎಂಬುದು ದೌರ್ಭಾಗ್ಯಕರʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೂಗಿಗೆ ತುಪ್ಪ ಸವರುವ ಯತ್ನ : ವಿಜಯ ಸಿಂಗ್‌

ಕೇಂದ್ರದ ಬಿಜೆಪಿ ಸರ್ಕಾರವು 2025-26ನೇ ಸಾಲಿನ ಬಜೆಟ್‍ನಲ್ಲಿ ಕೆಲ ರಿಯಾಯಿತಿಗಳನ್ನು ಪ್ರಕಟಿಸಿ ಜನರ ಮೂಗಿಗೆ ತುಪ್ಪ ಸವರುವ ಯತ್ನ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಟೀಕಿಸಿದ್ದಾರೆ.

ʼಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‍ನಲ್ಲಿ ಜನಸಾಮಾನ್ಯರ ಬದುಕು ಬದಲಾಯಿಸುವಂಥ ಯಾವುದೇ ಯೋಜನೆ ಇಲ್ಲʼ ಎಂದು ಹೇಳಿದ್ದಾರೆ.‌

WhatsApp Image 2025 02 01 at 10.00.22 PM
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್

ʼನಿರುದ್ಯೋಗ ಸಮಸ್ಯೆ ಯುವ ಜನರನ್ನು ಬಹುವಾಗಿ ಕಾಡುತ್ತಿದೆ. ಆದರೆ, ಆ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ತೆರಿಗೆ ಕಡಿತ ಮಾಡಿದ್ದಕ್ಕೆ ಬಿಜೆಪಿಯವರು ಚಪ್ಪಾಳೆ ತಟ್ಟಿದ್ದಾರೆ. ಆದರೆ, ಸಂಬಳ ಇದ್ದವರಿಗಷ್ಟೇ ಅದರ ಲಾಭ ಸಿಗಲಿದೆ. ಉದ್ಯೋಗವೇ ಇಲ್ಲದವರಿಗೆ ಸಂಬಳ ಎಲ್ಲಿಂದ ಬರುತ್ತದೆ. ತೆರಿಗೆ ವಿನಾಯಿತಿ ಹೇಗೆ ಸಿಗುತ್ತದೆʼ ಎಂದು ಪ್ರಶ್ನಿಸಿದ್ದಾರೆ.

ʼಕೇಂದ್ರ ಬಜೆಟ್‍ನಲ್ಲಿ ಯುವಕರು, ಮಹಿಳೆಯರು, ಬಡವರು, ರೈತರ ಬಾಳು ಹಸನಾಗಿಸುವ ಮಹತ್ವದ ಯೋಜನೆಗಳಿಲ್ಲ. ಬಜೆಟ್ ನಿರಾಶಾದಾಯಕವಾಗಿದೆʼ ಎಂದು ಪ್ರತಿಕ್ರಿಯಿಸಿದ್ದಾರೆ.

ಸರ್ವವ್ಯಾಪಿ, ಸರ್ವಸ್ಪರ್ಶಿ ಬಂಪರ್ ಬಜೆಟ್ : ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಆಡಳಿತದ ಮೊದಲ ಬಜೆಟ್ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿಯಾಗಿದೆ. ಇದು ಭಾರತದ “ಅರ್ಥ ಕ್ರಾಂತಿ”ಗೆ ಹೊಸ ಮುನ್ನುಡಿ ಬರೆಯುವ ಜೊತೆಗೆ ವಿಕಸಿತ, ಆತ್ಮನಿರ್ಭರ ಭಾರತಕ್ಕೆ ಭದ್ರ ಬುನಾದಿ ಹಾಕುವ ಬಜೆಟ್ ಆಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.

ʼಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಮಂಡಿಸಿದ ಬಜೆಟ್ ಹಲವು ದಾಖಲೆ ನಿರ್ಮಿಸಿದೆ. ಆದಾಯ ತೆರಿಗೆ ಮಿತಿಯನ್ನು ₹12 ಲಕ್ಷಕ್ಕೆ ಹೆಚ್ಚಳ ಮಾಡಿರುವುದು ಕ್ರಾಂತಿಕಾರಿ ನಿರ್ಧಾರವಾಗಿದೆ. ದೇಶದ ಕೋಟ್ಯಂತರ ಮಧ್ಯಮ ವರ್ಗದವರಿಗೆ ಇದು ಬಹು ದೊಡ್ಡ ಕೊಡುಗೆಯಾಗಿದೆ. ಎಲ್ಲ ತರಹದ ಆದಾಯ ತೆರಿಗೆಯ ಸ್ಲ್ಯಾಬ್ ನಲ್ಲಾದ ಬದಲಾವಣೆ ಕಾರಣಕ್ಕಾಗಿ ಮಧ್ಯಮ ವರ್ಗದ ಜನರಿಗೆ ಸರಾಸರಿ ವಾರ್ಷಿಕ ₹1 ಲಕ್ಷ ರೂ.ಗಳಷ್ಟು ಉಳಿತಾಯ (ಲಾಭ) ಆಗಲಿದೆ‌.‌ ಇದು ಬರುವ ದಿನಗಳಲ್ಲಿ ದೇಶದ ಜಿಡಿಪಿ ಗಣನೀಯ ವೃದ್ಧಿಸಲು ಕಾರಣವಾಗಲಿದೆʼ ಎಂದು ಪ್ರಕಟಣೆಯಲ್ಲಿ ವಿಶ್ಲೇಷಿಸಿದ್ದಾರೆ.

WhatsApp Image 2025 02 01 at 10.00.36 PM
ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ

ʼರೈತರು, ಬಡವರು, ಹಿಂದುಳಿದವರು, ಮಹಿಳೆಯರು, ಯುವಕರು, ಉದ್ಯಮಿದಾರರು, ವಿದ್ಯಾರ್ಥಿಗಳು ಹೀಗೆ ಎಲ್ಲ ರಂಗ, ಎಲ್ಲ ವರ್ಗದವರ ಹಿತ ಇಲ್ಲಿದೆ‌. ಇದೊಂದು ‘ಜೋರ್ದಾರ್’ ಹಾಗೂ ‘ಶಾನ್ದಾರ್’ ಬಜೆಟ್ ಎನಿಸಿದೆ. ಯಾವುದೇ ಕ್ಷೇತ್ರಕ್ಕೆ ಕಡೆಗಣಿಸಿಲ್ಲ. ಸಮಗ್ರ ಅಭಿವೃದ್ಧಿಗಾಗಿ ಮೇಕ್ ಇನ್ ಇಂಡಿಯಾ ತಳಹದಿಯ ಮೇಲೆ ಕೇಂದ್ರ ಸರ್ಕಾರ ಹೊಂದಿರುವ ದೂರದೃಷ್ಟಿತ್ವವೇ ಇಲ್ಲಿ ಅನಾವರಣವಾಗಿದೆ. ಯಾವುದೇ ಮಗ್ಗಲಿನಿಂದ ನೋಡಿದರೂ ಇದು ಭವ್ಯ, ಬಲಿಷ್ಠ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್ ಎಂಬುದು ಸ್ಪಷ್ಟವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

‘ಕೃಷಿ ಅಭಿವೃದ್ಧಿ ಮತ್ತು ಉತ್ಪಾದಕತೆಗೆ ಉತ್ತೇಜನ, ಕಿರು ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ, ಉದ್ಯೋಗಾಧಾರಿತ ಅಭಿವೃದ್ಧಿ, ರಕ್ಷಣೆ ಮತ್ತು ಸಂಶೋಧನೆಗೆ ಒತ್ತು, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ₹3 ರಿಂದ ₹5ಲಕ್ಷಕ್ಕೇರಿಕೆ, ನೀರಾವರಿ ಸೌಲಭ್ಯ ವಿಸ್ತರಣೆ ಯೋಜನೆ, ಹೆಚ್ಚಿನ ಇಳುವರಿ ಬೀಜಗಳಿಗಾಗಿ ಪ್ರತ್ಯೇಕ ಮಿಷನ್, ಇಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಉಪಕರಣಗಳ ಬೆಲೆ ಇಳಿಕೆಯೊಂದಿಗೆ ಉತ್ಪನ್ನ ಹೆಚ್ಚಳಕ್ಕೆ ಕ್ರಮ, ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತೆಗೆ ಯೋಜನೆʼ ಅಭಿವೃದ್ಧಿಗೆ ಪೂರಕವಾಗಿವೆ’ ಎಂದರು.

ʼಎಲ್ಲ ಶಾಲೆಗಳಿಗೆ ಬ್ರಾಡ್ ಬ್ಯಾಂಡ್ ಸೌಕರ್ಯ, ಮೆಡಿಕಲ್ ಸೀಟು ಹೆಚ್ಚಳ, ಪ್ರತಿ ಜಿಲ್ಲೆಗೊಂದು ಕ್ಯಾನ್ಸರ್ ಕೇರ್ ಸೆಂಟರ್ ಹಾಗೂ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ, ಹೊಸ ಮಹಿಳಾ ಉದ್ಯಮಿದಾರರಿಗೆ ₹2 ಕೋಟಿವರೆಗೆ ಅವಧಿ ಸಾಲ, ಉಡಾನ್ ಯೋಜನೆಯಡಿ 4 ಕೋಟಿ ಜನರಿಗೆ ವಿಮಾನಯಾನದ ಲಾಭ ಹೀಗೆ ಅನೇಕ ಮಹತ್ವದ ಜನಪರ ಯೋಜನೆ ಘೋಷಣೆ ಮುಖಾಂತರ ದೇಶದ ಜನರ ಮನ ಗೆಲ್ಲುವ ಜೊತೆಗೆ ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸುವ ಕಾರ್ಯ ಮಾಡಲಾಗಿದೆʼ ಎಂದು ಬಣ್ಣಿಸಿದ್ದಾರೆ.

ಕರ್ನಾಟಕಕ್ಕೆ ನಿರ್ಲಕ್ಷ್ಯ : ಸಂಸದ ಸಾಗರ್‌ ಖಂಡ್ರೆ

₹12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿದ ಕ್ರಮ ಮಧ್ಯಮವರ್ಗಕ್ಕೆ ಕೆಲವು ಮಟ್ಟಿಗೆ ಸಮಾಧಾನ ನೀಡುವ ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ ಈ ಬಜೆಟ್ ಮತ್ತೊಮ್ಮೆ ಕರ್ನಾಟಕದ ಮೇಲಿನ ಕೇಂದ್ರ ಸರ್ಕಾರದ ನಿರಂತರ ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತದೆ ಎಂದು ಸಂಸದ ಸಾಗರ್‌ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ.

WhatsApp Image 2025 02 01 at 10.00.28 PM
ಸಂಸದ ಸಾಗರ್‌ ಖಂಡ್ರೆ

ʼದೇಶದ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದರೂ, ಕರ್ನಾಟಕ ತನ್ನ ಹಕ್ಕಿನ ಅನುದಾನದಿಂದ ವಂಚಿತವಾಗಿದೆ. ಬರಪೀಡಿತ ರೈತರಿಗೆ ಯಾವುದೇ ಪರಿಹಾರವಿಲ್ಲ, ಯುವಕರಿಗೆ ಉದ್ಯೋಗ ಸೃಷ್ಟಿಸಲು ಯಾವುದೇ ಸ್ಪಷ್ಟ ಯೋಜನೆಗಳಿಲ್ಲ, ಮತ್ತು ಕಲ್ಯಾಣ ಕರ್ನಾಟಕ ಸೇರಿದಂತೆ ಹಿನ್ನಡೆ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗಿಲ್ಲ. ಹಳೆಯ ರೈಲು, ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳು ಮತ್ತೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾದವು. ಕರ್ನಾಟಕದ ಅವಶ್ಯಕತೆಗಳನ್ನು ಕಡೆಗಣಿಸಿ, ಚುನಾವಣಾ ರಾಜ್ಯಗಳಿಗೆ ಆದ್ಯತೆ ನೀಡಲಾಗಿದೆʼ ಎಂದಿದ್ದಾರೆ.

ರೈತರು, ಜನಸಾಮಾನ್ಯರ ಬಜೆಟ್ : ಶಾಸಕ ಪ್ರಭು ಚವ್ಹಾಣ

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸತತ 8ನೇ ಐತಿಹಾಸಿಕ ಬಜೆಟ್ ಮಂಡಿಸಿದ್ದು, ಜನಸಾಮಾನ್ಯರು, ಬಡವರು ಮತ್ತು ರೈತರ ಏಳಿಗೆಗೆ ಒತ್ತು ನೀಡಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.

ʼಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತತ್ವದ ಸರ್ಕಾರವು ಭಾರತವನ್ನು ವಿಶ್ವದ ಮುಂಚೂಣಿ ರಾಷ್ಟ್ರವಾಗಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದು, ಶಿಕ್ಷಣ, ಕೃಷಿ, ಕೈಗಾರಿಕೆ, ವೈದ್ಯಕೀಯ, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗಿದೆʼ ಎಂದು ಪ್ರತಿಕ್ರಿಯಿಸಿದ್ದಾರೆ.

WhatsApp Image 2024 07 23 at 6.38.46 PM 1
ಔರಾದ್‌ ಶಾಸಕ ಪ್ರಭು ಚವ್ಹಾಣ

ʼಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ದೇಶದ 120 ಸ್ಥಳಗಳಿಗೆ ಉಡಾನ್ ವಿಮಾನಯಾನ ಸೌಲಭ್ಯ ಕಲ್ಪಿಸಿರುವುದು ಉತ್ತಮ ಬೆಳವಣಿಗೆ. ₹12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ನೀಡಿರುವುದು ಮಧ್ಯಮ ವರ್ಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿರುವುದು ಚಿಕಿತ್ಸೆಗಾಗಿ ಪರದಾಡಬೇಕಿದ್ದ ಕ್ಯಾನ್ಸರ್ ಪೀಡಿತರಿಗೆ ವರದಾನವಾಗಿ ಪರಿಣಮಿಸಲಿದೆʼ ಎಂದು ಹೇಳಿದರು.

ರೈತರಿಗಾಗಿ ಪ್ರಧಾನಮಂತ್ರಿ ‘ಧನ್ ಧಾನ್ಯ ಕೃಷಿ’ ಯೋಜನೆ ಘೋಷಿಸಿದ್ದು, ಅಸ್ಥಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಉಪಕ್ರಮಗಳ ಮೂಲಕ ರೈತರಿಗೆ ಸಹಾಯ ಮಾಡಲಿದ್ದು, 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯವಾಗಲಿದೆ. ಮುಂದಿನ ವರ್ಷದಿಂದ ವೈದ್ಯಕೀಯ ಕಾಲೇಜುಗಳಲ್ಲಿ 10 ಸಾವಿರ ಸೀಟುಗಳ ಹೆಚ್ಚಳ, ದೇಶದ 50 ಸಾವಿರ ಶಾಲೆಗಳಲ್ಲಿ ಅಟಲ್ ಟಿಂಕರಿಮಗ್ ಲ್ಯಾಬ್‌ಗಳ ಸ್ಥಾಪನೆ, ಗ್ರಾಮೀಣ ಪ್ರದೇಶದಲ್ಲಿನ ಎಲ್ಲ ಸರ್ಕಾರಿ ಮಾಧ್ಯಮಿಕ ಶಾಲೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ವಿಸ್ತರಿಸಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುಖ್ಯಮಂತ್ರಿ ಸಲಹೆಗಾರ ಹುದ್ದೆಗೆ ಶಾಸಕ ಬಿ.ಆರ್ ಪಾಟೀಲ್ ರಾಜೀನಾಮೆ

bhagavanth khuba bidar mp
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ

ʼಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದಾಯ ತೆರಿಗೆ ಮಿತಿಯಲ್ಲಿನ ವಿನಾಯಿತಿಯನ್ನು ₹12 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಭಾರತದ ಬಡ ಹಾಗೂ ಮಧ್ಯಮ ವರ್ಗದ ಜೊತೆ ಬಲವಾಗಿ ನಿಂತಿದೆ. ಈ ಹೊಸ ತೆರಿಗೆ ಪದ್ಧತಿಯು ಭಾರತದ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆʼ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

Download Eedina App Android / iOS

X