ಬಸವ ಧರ್ಮ ಪೀಠದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತಿವೆ ಎಂದು ಜಿಲ್ಲೆಯ ಬಸವ ಭಕ್ತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಮಾತೆ ಡಾ. ಗಂಗಾದೇವಿ ಹಾಗೂ ಚನ್ನಬಸವಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ವಿವಾದವನ್ನು ಸೌಹಾರ್ದತೆಯಿಂದ ಬಗೆಹರಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಹಿರಿಯ ಮುಖಂಡ ಬಸವಕುಮಾರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಗರದ ಅನಿಕೇತನ ಮಕ್ಕಳ ಮಹಾಮನೆಯಲ್ಲಿ ನಡೆದ ಜಿಲ್ಲೆಯ ಬಸವ ಭಕ್ತರ ಸಭೆಯಲ್ಲಿ 40 ಬಸವ ಭಕ್ತರ ಸಮಿತಿ ರಚಿಸಿ, ಸ್ವಾಮೀಜಿಗಳ ಭೇಟಿಗೆ ನಿಯೋಗ ಒಯ್ಯಲು ತೀರ್ಮಾನಿಸಲಾಗಿದೆ.
“ಬಸವ ಧರ್ಮ ಪೀಠ ಬಸವಾಭಿಮಾನಿಗಳ ಹೆಮ್ಮೆ ಹಾಗೂ ಅಭಿಮಾನದ ಸಂಸ್ಥೆಯಾಗಿದೆ. ಬಸವ ತತ್ವವನ್ನು ಜನ ಮನಕ್ಕೆ ಮುಟ್ಟಿಸುವಲ್ಲಿ ಸಂಸ್ಥೆ ಪಾತ್ರ ಬಹಳ ಮಹತ್ವದ್ದಾಗಿದೆ. ಆದರೆ, ಸಂಸ್ಥೆಯಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆಯುತ್ತಿರುವ ಅಹಿತಕರ ಬೆಳವಣಿಗೆಗಳು ಬಸವ ಭಕ್ತರಲ್ಲಿ ನೋವು ಉಂಟು ಮಾಡಿವೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು” ಎಂದು ಬಸವಕುಮಾರ ಪಾಟೀಲ ಹೇಳಿದರು.
ಪೀಠದಲ್ಲಿ ಎರಡು ಗುಂಪುಗಳಾಗಿ ಜಗಳ, ದ್ವೇಷ ಬೆಳೆದು, ವಿವಾದ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದ ಮೆಟ್ಟಿಲು ಏರಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದರು. ಬೀದಿ ಜಗಳ ಹಾಗೂ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವುದರಿಂದ ಬಸವ ತತ್ವ ಪ್ರಚಾರ ಹಾಗೂ ಸಂಘಟನೆ ಕಾರ್ಯಕ್ಕೆ ಹಿನ್ನೆಡೆಯಾಗಿರುವುದನ್ನು ಬಸವ ಅನುಯಾಯಿಗಳು ವಿವರಿಸಿದರು.
ಸಮಾಜದ ಹಿತದೃಷ್ಟಿಯಿಂದ ಸ್ವಾಮೀಜಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ದೋಷಾರೋಪ ನಿಲ್ಲಿಸಿ ಜಗಳ ಬಗೆಹರಿಸಿಕೊಳ್ಳಬೇಕು. ಭಕ್ತರಲ್ಲಿನ ಗೊಂದಲ, ಅಪನಂಬಿಕೆ ಹಾಗೂ ಮನಸ್ತಾಪ ದೂರ ಮಾಡಬೇಕು. ಪೀಠದಲ್ಲಿ ಮತ್ತೆ ಶಾಂತಿಯುತ ವಾತಾವರಣ ನೆಲೆಗೊಳ್ಳುವಂತೆ ಮಾಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹೊಸ ಓದು | ಸಮಾಜದ ಋಣ ನೆನಪಿಸುವ ‘ಮಹಾಸಂಗ್ರಾಮಿ’
ಸಭೆಯಲ್ಲಿ ಪ್ರಮುಖರಾದ ಚಂದ್ರಪ್ಪ ಬಿರಾದಾರ, ಶಿವಶಂಕರ ಟೋಕರೆ, ಸಿದ್ದಯ್ಯ ಕಾವಡಿ, ನಾಗಯ್ಯ ಸ್ವಾಮಿ, ಶಿವಶರಣಪ್ಪ ವಲ್ಲೇಪುರೆ, ರಾಮಶೆಟ್ಟಿ ಪನ್ನಾಳೆ, ಡಾ. ವೈಜಿನಾಥ ಬುಟ್ಟೆ, ಶಿವಶಂಕರ ರಾಂಪುರೆ, ಬಸವರಾಜ ರುದ್ರವಾಡಿ, ಮಲ್ಲಿಕಾರ್ಜುನ ಸಂಗಮಕರ್, ಜಗನ್ನಾಥ ಪತಂಗೆ, ಬಸವರಾಜ ಪಾಟೀಲ ಶಿವಪುರ, ಅನಿಲಕುಮಾರ ಪನ್ನಾಳೆ ಮನ್ನಳ್ಳಿ, ಸೋಮನಾಥಪ್ಪ ಅಷ್ಟೂರೆ, ಶಂಭುಲಿಂಗ ಕಾಮಣ್ಣ, ಜಗನ್ನಾಥ ಪತಂಗೆ, ಬಸವರಾಜ ಪಾಟೀಲ ಶಿವಪುರ, ರವಿ ಶಂಭು ಕೊಳಾರ ಮತ್ತಿತರರು ಇದ್ದರು.