ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜುಗಳಲ್ಲಿ ಪ್ರಸ್ತುತ ವರ್ಷದ ಪ್ರವೇಶಾತಿ ಸಂಖ್ಯೆಯು ಕುಸಿದಿದೆ. ಈ ಪರಿಸ್ಥಿತಿಗೆ ಕಳೆದ ಸರ್ಕಾರ 2020ರಲ್ಲಿ ತಂದ ಹೊಸ ಶಿಕ್ಷಣ ನೀತಿ(ಎನ್‌ಇಪಿ) ಹೇರಿಕೆಯಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿದಿದ್ದಾರೆ ಎಂದು ಎಐಡಿಎಸ್‌ಒ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ, ಗುಲ್ಬರ್ಗಾ ವಿಶ್ವವಿದ್ಯಾಲಯಗಳನ್ನು ಉಳಿಸಿ ಎಂದು ಕಲಬುರಗಿ ವಿವಿ ವಿದ್ಯಾರ್ಥಿಗಳು ಕಲಬುರಗಿ ಶಿಕ್ಷಣ ಸಂಸ್ಥೆಯ ಜಂಟಿ ನೀರ್ದೆಶಕರು, ಕಲಬುರಗಿ ಈಶನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ಗುಲ್ಬರ್ಗಾ ಕೂಡ ಈ ಸಮಸ್ಯೆಗಳಿಂದ ಹೊರತಾಗಿಲ್ಲ. ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕ ಏರಿಕೆ ಸರ್ಕಾರಿ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡುತ್ತಿರುವುದು ಎನ್‌ಇಪಿಯ ಒಂದು ಭಾಗವಾಗಿದೆ. ಇದರಿಂ ದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದಲೇ ದೂರ ಉಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ” ಎಂದರು.
“ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ವಿದ್ಯಾರ್ಥಿವೇತನ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸೂಕ್ತ ಬಸ್ ಸೌಲಭ್ಯವಿಲ್ಲದಿರುವುದು, ಸಮರ್ಪಕವಾಗಿ ತರಗತಿಗಳನ್ನ ನಡೆಸಲು ಶಿಕ್ಷಕರ ಕೊರತೆ ಇವೆಲ್ಲವೂ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ತಿಲಾಂಜಲಿ ಹಾಡುತ್ತಿವೆ. ಇಂಥ ಪರಿಸ್ಥಿತಿಯಿಂದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ರಕ್ಷಿಸಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಹಸನಾಗಿಸುವ ತುರ್ತು ಅವಶ್ಯಕತೆ ಎದುರಾಗಿದೆ” ಎಂದು ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ತುಳಜರಾಮ ಎನ್ ಕೆ ಮಾತನಾಡಿ, “ಅಸಮಪರ್ಕ ಆಡಳಿತದಿಂದಾಗಿ ಶೈಕ್ಷಣಿಕ ವರ್ಷ ಹಾಳಗಿದ್ದು, ಸರಿಯಾದ ಸಮಯಕ್ಕೆ ತರಗತಿ, ಪರೀಕ್ಷೆ ನಡೆಸದಿರುವುದು, ತಾಂತ್ರಿಕ ಸಮಸ್ಯೆಗಳಿಂದಾಗಿ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುತ್ತಿದೆ. ಇನ್ನೊಂದಡೆ ಅಂಕ ಪಟ್ಟಿ ವಿತರಣೆ ಮಾಡುತ್ತಿಲ್ಲ. ವಿಶ್ವವಿದ್ಯಾಲಯಕ್ಕೆ ಕೇಳಲು ಹೋದ ವಿದ್ಯಾರ್ಥಿಗಳಿಗೆ ಅಲ್ಲಿನ ಸಿಬ್ಬಂದಿಗಳು ಹಣ ಕೇಳುತ್ತಿರುವುದಾಗಿ ಕೇಳಿಬಂದಿದೆ” ಎಂದು ಆರೋಪಿಸಿದರು.
“ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಿ , ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರವೇಶಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಬೇಕು. ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿಪಡಿಸಿ, ಶುಲ್ಕ ವಿನಾಯಿತಿಯನ್ನು ಪ್ರವೇಶಾತಿ ಸಂದರ್ಭದಲ್ಲಿಯೇ ಒದಗಿಸಿ ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಆಗ್ರಹ
“ಎನ್‌ಇಪಿ 2020ರ ಪ್ರಜಾತಾಂತಿಕ ಹೇರಿಕೆಯನ್ನು ಹಿಂಪಡೆಯಬೇಕು. ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು. ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಬೇಕು” ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಣಮಂತ ಎಸ್ ಎಚ್, ಜಿಲ್ಲಾ ಉಪಾಧ್ಯಕ್ಷ ಸ್ನೇಹ ಕಟ್ಟಿಮನಿ, ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ, ಜಿಲ್ಲಾ ಸಮಿತಿ ಸದಸ್ಯ ಪ್ರೀತಿ ದೊಡ್ಡಮನಿ, ಗೋವಿಂದ ಯಳವರ, ನಾಗರಜ್ ರಾವೂರ, ಸಿದ್ದಾರ್ಥ, ಯುವರಾಜ್ ರಾಠೋಡ್, ಇಂದುಮತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು .