ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ನಗರ ಸಭಾ ಮೈದಾನದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 134 ನೇ ಜಯಂತಿಯಲ್ಲಿ ಮೈಸೂರು ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ ಮಾತನಾಡಿ ‘ ಅಲಿಖಿತ ಸಂವಿಧಾನವಾದಿಗಳಿಂದ ಲಿಖಿತ ಸಂವಿಧಾನ ದುರ್ಬಳಗೊಳಿಸಲು ಹುನ್ನಾರ ‘ ನಡೆದಿದೆ ನಾವೆಲ್ಲರೂ ಎಚ್ಚತ್ತುಕೊಂಡು ಒಂದಾಗಿ ಸಂವಿಧಾನ ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.
” ದೇಶದಲ್ಲಿ ಸಂವಿಧಾನ ದುರ್ಬಲಗೊಳಿಸಲು ಬಿಜೆಪಿ, ಆರ್ ಎಸ್ ಎಸ್ ಹೊಂಚು ಹಾಕುತ್ತಿದೆ. ಸಾಕಷ್ಟು ಭಾರಿ ಪ್ರಯತ್ನ ಕೂಡ ಮಾಡಿದೆ. ಸಾರ್ವಜನಿಕವಾಗಿ ಸಂವಿಧಾನ ಬದಲಾಯಿಸುತ್ತೇವೆ ಎಂದು ರಾಜಾರೋಷವಾಗಿ ಹೇಳಿರುವ ಮಾತುಗಳು ನಮ್ಮ ಮುಂದಿವೆ. ಹೀಗಿರುವಾಗ, ನಾವೆಲ್ಲರೂ ಒಟ್ಟಾಗಿ ಸಂವಿಧಾನ ರಕ್ಷಣೆ ಮಾಡಿಕೊಳ್ಳಬೇಕು ಇದು ನಮ್ಮೆಲ್ಲರ ಕರ್ತವ್ಯ ” ಎಂದರು.
” ದೇಶದ ಪ್ರಗತಿಯಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು. ಸರ್ವಶ್ರೇಷ್ಠ ಸಂವಿಧಾನ ನೀಡುವುದರ ಮೂಲಕ ದೇಶದಲ್ಲಿ ಸರ್ವರೂ ಸಮಾನರಾಗಿ ಗೌರವದಿಂದ, ಘನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ.ಎಲ್ಲರಿಗೂ ಸಮಾನವಾಗಿ ದೇಶದಲ್ಲಿನ ಮೂಲಭೂತ ಹಕ್ಕುಗಳನ್ನು ಹೊಂದಲು ಅವಕಾಶವಿದೆ. ಆದರೆ, ಕುಹುಕ ಬುದ್ದಿಯ ಮನುವಾದಿಗಳು ಸಂವಿಧಾನ ದುರ್ಬಳಗೊಳಿಸಿ ತಮ್ಮ ಹೇರಿಕೆಯನ್ನು ಸಾಧಿಸಬೇಕು. ದೇಶದಲ್ಲಿನ ಅಧಿಕಾರ ತಮ್ಮ ಹಿಡಿತದಲ್ಲಿಯೇ ಇರಬೇಕೆನ್ನುವ ಸ್ವಾರ್ಥದಿಂದ ಸಂವಿಧಾನ ಬದಲಾವಣೆ ಮಾಡುತ್ತೇವೆ ಅನ್ನುವ ಹಂತಕ್ಕೆ ಬಂದಿದ್ದಾರೆ. ಇಂತಹವರಿಗೆ ನಾವೆಲ್ಲಾ ಒಂದಾಗಿ ಪಾಠ ಕಲಿಸಬೇಕಿದೆ ” ಎಂದು ಹೇಳಿದರು.

ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಮಾತನಾಡಿ ” ನಾಡಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ಕಳೆದು ಹೋಗಿದ್ದೇವೆ. ಪ್ರತಿಮೆ ಸ್ಥಾಪನೆ ಮಾಡುವಲ್ಲಿ ಇರುವ ಆಸಕ್ತಿ ಆಶಯಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಇಲ್ಲ. ಮಹನೀಯರ ತತ್ವ, ಸಿದ್ದಾಂತಗಳನ್ನು ಪರಿಪಾಲನೆ ಮಾಡುತಿಲ್ಲ.ಇದನ್ನೆಲ್ಲ ನಾವುಗಳು ಬದಲಾಯಿಸಿಕೊಂಡು ಹೆಜ್ಜೆ ಇಡಬೇಕಿದೆ. ಸಂವಿಧಾನದ ಹುಲಿಗಳು ನಾವು ನಮ್ಮಲ್ಲಿ ಬಾಬಾ ಸಾಹೇಬರ ಹೋರಾಟದ ರಕ್ತವಿದೆ.
ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಬದುಕಿಗೆ ನಿಜವಾದ ಅರ್ಥವಿದೆ. ಅವರ ಹೋರಾಟಗಳು ನಮಗೆ ಮಾದರಿಯಾಗಬೇಕು. ಅವರು ನಡೆದ ಹಾದಿಯಲ್ಲಿ ನಾವು ನಡೆಯಬೇಕು. ದೇಶ ಏನಾದರೂ ಬದಲಾವಣೆ ಕಂಡಿದೆ ಅಂದರೆ ಅದಕ್ಕೆ ಕಾರಣ ಡಾ. ಬಿ. ಆರ್. ಅಂಬೇಡ್ಕರ್ ” ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಘೋಷಿತ ತುರ್ತು ಪರಿಸ್ಥಿತಿಗಿಂತ ಅಘೋಷಿತ ತುರ್ತು ಪರಿಸ್ಥಿತಿ ಅತ್ಯಂತ ಅಪಾಯಕಾರಿ : ಅರವಿಂದ ನಾರಾಯಣ
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್. ಪಿ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಗ್ಯಾರೆಂಟಿ ಯೋಜನೆ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಸ್ವಾಮಿ,ದಸಂಸ ಮುಖಂಡರಾದ ಹರಿಹರ ಆನಂದ ಸ್ವಾಮಿ, ಬಿಳಿಕೆರೆ ರಾಜು ಸೇರಿದಂತೆ ಹಲವು ಮುಖಂಡರು ಇದ್ದರು.