ಏ.20ರಂದು ಬೆಂಗಳೂರಲ್ಲಿ ಉಪ್ಪಾರ ವಧು ವರರ ಸಮಾವೇಶ
ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಏಪ್ರಿಲ್ 20ರಂದು ವಧು – ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಉಪ್ಪಾರ ಮಹಾಸಭಾದ ಉಪಾಧ್ಯಕ್ಷ ಮಂಚನಬೆಲೆ ವೆಂಕಟೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 20ರಂದು ಬೆಂಗಳೂರಿನ ರಿಯಲ್ಟೊ ಹೋಟೆಲ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಉಪ್ಪಾರ ವಧು – ವರರು ಮತ್ತು ಪಾಲಕರ ಸಮಾಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಉಪ್ಪಾರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶ್ರೀರಾಲ ಶ್ರೀರಾಮುಲು ಸಗರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಉಪ್ಪಾರ ಸಮುದಾಯದ ವಧು – ವರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಮುದಾಯದ ಬಾಂಧವರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಉಪ್ಪಾರ ಸಮಾಜಕ್ಕೆ ಸರಕಾರ ದ್ರೋಹ : ರಾಜ್ಯಾದ್ಯಂತ ಸುಮಾರು 24 ಲಕ್ಷ ಉಪ್ಪಾರ ಸಮಾಜದ ಜನರಿದ್ದು, ಸರಕಾರ ಜಾತಿ ಗಣತಿಯಲ್ಲಿ ಕಡಿಮೆ ಜನಸಂಖ್ಯೆಯನ್ನು ತೋರಿಸಿ ಇಡೀ ಸಮುದಾಯಕ್ಕೆ ಅನ್ಯಾಯ ಮಾಡಲು ಮುಂದಾಗಿರುವುದು ಖಂಡನೀಯ. ಕೂಡಲೇ ಸರಕಾರ ಮರು ಸಮೀಕ್ಷೆ ನಡೆಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಪ್ಪಾರ ಸಮಾಜ ಸಿದ್ದರಾಮಯ್ಯ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪೊಲೀಸರ ಬಂದೂಕಿನ ನ್ಯಾಯ ಸಮಾಜಕ್ಕೆ ಮಾರಕ
ಚಿಕ್ಕಬಳ್ಳಾಪುರ ನಗರದಲ್ಲಿ 30 ಸಾವಿರ ಮತ್ತು ತಾಲ್ಲೂಕಿನಲ್ಲಿ 8 ಸಾವಿರ ಉಪ್ಪಾರ ಸಮಾಜದ ಜನ ಸಂಖ್ಯೆ ಇದೆ. ಚಿಕ್ಕಬಳ್ಳಾಪುರದಲ್ಲಿ ಉಪಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಪ್ರತ್ಯೇಕ ನಿಗಮ ಮಾಡಿ ನಮಗೆ ಯಾವುದೇ ಅನುಕೂಲವಾಗದಂತೆ ಮಾಡಿದ್ದಾರೆ. ಇದೆಲ್ಲವನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸರಕಾರ ನಿಖರವಾದ ಸಮೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸೋಮಶೇಖರ್, ಬಾಗೇಪಲ್ಲಿ ಶಿವಪ್ಪ, ಮಂಚೆನಹಳ್ಳಿ ಸುರೇಶ್, ಗೌರಿಬಿದನೂರು ಆನಂದ್, ಶಾಂತಪ್ಪ ಹಾಗೂ ಇತರರು ಹಾಜರಿದ್ದರು.