ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಗುಡ್ಡ ಕುಸಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ನಡೆದಿದೆ. ಗುಡ್ಡ ಕುಸಿತದಿಂದಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾರಿ ಗುಡ್ಡ ಅಗೆಯಲಾಗಿತ್ತು. ಮಳೆಯ ಕಾರಣದಿಂದಾಗಿ, ಮಣ್ಣು ಸಡಿಲಗೊಂಡು ಗುಡ್ಡ ಕುಸಿದುಬಿದ್ದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇದು 5ನೇ ಬಾರಿ ಕುಸಿದಿರುವ ಘಟನೆಯಾಗಿದೆ.
ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ, ಗುರುವಾರ ಬೆಳಗ್ಗೆ ಗುಡ್ಡ ಕುಸಿದಿದೆ. ಪರಿಣಾಮವಾಗಿ, ಭಾರೀ ಪ್ರಮಾಣದ ಮಣ್ಣು ಚತುಷ್ಪಥ ರಸ್ತೆ ಮೇಲೆ ಬಿದ್ದಿರುವುದರಿಂದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರಿಂದಾಗಿ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.
ರಸ್ತೆಗೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಮಣ್ಣು ಕುಸಿಯುತ್ತಲೇ ಇದೆ. ಮಣ್ಣು ತೆರವು ಕಾರ್ಯ ಮಧ್ಯಾಹ್ನದವರೆಗೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದೆ.