ಅಪ್ರಪ್ತಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನದಲ್ಲಿರುವ ಮುರುಘಾ ಮಠದ ಆರೋಪಿ ಮುರುಘಾ ಶಿವಮೂರ್ತಿ ಮಠದ ಪೀಠ ತ್ಯಾಗ ಮಾಡಬೇಕೆಂದು ಮಾಜಿ ಸಚಿವ ಎಚ್ ಏಕಾಂತಯ್ಯ ಒತ್ತಾಯಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸನ್ಯಾಸಿಗೂ – ಸಂಸಾರಿಗೂ ವ್ಯತ್ಯಾಸವಿದೆ. ಸನ್ಯಾಸಿಗಳು ವ್ಯಾಮೋಹ ಇಲ್ಲದ ಜೀವನ ನಡೆಸುತ್ತಿದ್ದಾರೆ” ಎಂದು ಹೇಳಿದರು.
“ಶಿವಮೂರ್ತಿ ಅವರು ಟ್ರಸ್ಟ್ ಅಧ್ಯಕ್ಷನಾದ ಮೇಲೆ ಸಬ್ ರಿಜಿಸ್ಟ್ರಾರ್ ಕಚೇರಿಯ ಮಾರ್ಗಸೂಚಿಗಿಂತ ಕಡಿಮೆ ಬೆಲೆಗೆ ಮಠದ ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಬೆಂಗಳೂರು ಬಳಿಯ ಸೂಲಿಕೆರೆ ಗ್ರಾಮದಲ್ಲಿ 7.18 ಎಕರೆ ಜಾಗವನ್ನು 79 ಲಕ್ಷ ರೂ.ಗೆ 2008ರಲ್ಲಿ ಮಾರಾಟ ಮಾಡಿದ್ದಾರೆ. ಅಲ್ಲಿನ ನೋಂದಾಣಾಧಿಕಾರಿ ಕಚೇರಿಯ ಮಾರ್ಗಸೂಚಿ ಪ್ರಕಾರ, ಆ ಆಸ್ತಿಯ ಬೆಲೆ 3.57 ಕೋಟಿ ರೂ. ಇದೆ. ಅಂತೆಯೇ, ಹಾವೇರಿಯಲ್ಲಿ 21.12 ಎಕರೆ ಜಮೀನನ್ನು 6 ಜನರಿಗೆ ಕಡಿಮೆ ಬೆಲೆ ಮಾರಾಟ ಮಾಡಿದ್ದಾರೆ. ಅಲ್ಲದೆ, ಚಿತ್ರದುರ್ಗದ ವಿವಿಧ ಆಸ್ತಿಯನ್ನು ಕೆಲವು ಸ್ವಾಮೀಜಿಗಳಿಗೆ ಮಾರಿದ್ದಾರೆ” ಎಂದು ದೂರಿದ್ದಾರೆ.
“ಮೆಡಿಕಲ್ ಕಾಲೇಜು, ಆಸ್ಪತ್ರೆ, ಮೂಲ ಸೌಕರ್ಯಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಮಠದ ಆಸ್ತಿ ಹಾಳಾಗಲು ನಾವು ಬಿಡುವುದಿಲ್ಲ. ಹೋರಾಟ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.