ಹೆಣ್ಣುಮಕ್ಕಳನ್ನು ಆಮಿಷದ ಹೆಸರಿನಲ್ಲಿ ಪುಸಲಾಯಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ, ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡುತ್ತಿದ್ದ ಜಾಲವನ್ನು ಯುವಕನೊಬ್ಬ ಬಯಲಿಗೆಳೆದಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಘಟನೆ ನಡೆದಿದೆ.
ಮೃತನನ್ನು ಶಿವಮೊಗ್ಗ ಜಿಲ್ಲೆಯ ಬೆನ್ನೂರು ಚಿಕ್ಕತೌಡತ್ತಿ ಗ್ರಾಮದ ಯುವಕ ಸಂತೋಷ್ ಗಣಪತಿ ನಾಯ್ಡು ಎಂದು ಗುರುತಿಸಲಾಗಿದೆ. ಆತ ಆತ್ಮಹತ್ಯೆಗೂ ಮುನ್ನ ಯುವತಿಯನ್ನು ದುರ್ಬಳಕೆ ಮಾಡುತ್ತಿದ್ದ ಜಾಲದ ಬಗ್ಗೆ ಆಡಿಯೋ ಮತ್ತು ಪೋಟೋಗಳುಳ್ಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಸಿದ್ಧಾಪುರ ಕಾಂಗ್ರೆಸ್ ನಾಯಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾನೆ.
“ಇತ್ತೀಚೆಗೆ, ಹೆಣ್ಣುಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ್ದೆ. ಆ ಕಾರಣಕ್ಕೆ, ಸಿದ್ಧಾಪುರ ತಾಲೂಕಿನ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇನ್ನೂ ನಾಲ್ವರು ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಜೀವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಸಂತೋಷ್ ಹೇಳಿಕೊಂಡಿದ್ದಾನೆ.
“ತನ್ನ ಪ್ರೇಯಸಿಯನ್ನು ಆ ಜಾಲದಿಂದ ರಕ್ಷಿಸಲು ಫೇಸ್‌ಬುಕ್‌ನಲ್ಲಿ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದೆ. ಅದರ ಮೂಲಕ ಜಾಲವನ್ನು ಪತ್ತೆ ಮಾಡಿದ್ದೆ. ಆದರೆ, ಆ ಜಾಲಕ್ಕೆ ನನ್ನ ಪ್ರೇಯಸಿಯೂ ಬೆಂಬಲವಾಗಿ ನಿಂತಿದ್ದಾಳೆ. ಸಿದ್ಧಾಪುರದ ಕಾಂಗ್ರೆಸ್ ನಾಯಕರೂ ಆರೋಪಿಗಳ ಪರವಾಗಿದ್ದಾರೆ. ನನಗೆ ಇನ್ನೇನು ಬೇಡವಾಗಿದೆ” ಎಂದು ಸಂತೋಷ್ ತನ್ನ ವಿಡಿಯೋದಲ್ಲಿ ಹೇಳಿದ್ದಾನೆ.
ಮೃತ ಸಂತೋಷ್ ತಂದೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.