ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮುಗದೂರು ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಮೇಲೆ ಇಸ್ಪೇಟ್ ಆಡಿಸುವ ಮಾಲೀಕರಿಂದ ಅನಾಥಾಶ್ರಮದ ಸಮೀಪ ಇಸ್ಪಿಟ್ ಆಟವನ್ನು ವಿರೋಧಿಸಿದ್ದಕ್ಕೆ ದೈಹಿಕ ಹಲ್ಲೆ ಮತ್ತು ಕೊಲೆಯತ್ನ ಮಾಡಿರುವ ಘಟನೆ ಕಳೆದ 40ದಿನಗಳ ಹಿಂದೆ ನಡೆದಿದ್ದು, ಇಸ್ಪೀಟ ಆಟ ನಡೆಸುವ ಮತ್ತು ಹಲ್ಲೆಗೈದವರು ಬಿಜೆಪಿ ಮುಖಂಡರೆಂದು ಹೇಳಲಾಗಿದೆ. ಹಲ್ಲೆಗೊಳಗಾದ ನಾಗರಾಜ್ ನಾಯ್ಕ ಈ ಕೊಲೆಯತ್ನ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಈ ಕುರಿತು ಈದಿನ.ಕಾಮ್ ಜೊತೆಗೆ ನಾಗರಾಜ್ ನಾಯ್ಕ ಮಾತನಾಡಿ, ಹಲವು ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿದ್ದು, ಮಾಸ ಪತ್ರಿಕೆಯ ಸಂಪಾದಕರಾಗಿಯು ಕಾರ್ಯೊನ್ಮುಖ ಆಗಿದ್ದೇನೆ. ಮತ್ತು ಹಲವು ಸಂಘಟನೆಗಳಲ್ಲಿ ಮಯಖ್ಯ ಪಾತ್ರವಹಿಸಿದ್ದೇನೆ. ಹೀಗಿರುವ ನನ್ನ ಮೇಲೆ ಕಳೆದ ಅಕ್ಟೋಬರ್ 9ರಂದು ಸಿದ್ದಾಪುರ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಇಸ್ಪೀಟ್ ಎಂಬ ಅಕ್ರಮ ಚಟುವಟಿಕೆ ನಡೆಸುವ ದುಷ್ಕರ್ಮಿಗಳ ತಂಡ ನನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದರು. ಮತ್ತು ಒಂಭತ್ತು ತಿಂಗಳ ತುಂಬು ಗರ್ಭಿಣಿಯಾದ ನನ್ನ ಪತ್ನಿಯ ಮೇಲೆಯೂ ಹಲ್ಲೆಗೈದು, ಮಾನಭಂಗಕ್ಕೆ ಯತ್ನಿಸಿದ್ದಾರೆ. ನನ್ನ ಎರಡು ವರ್ಷದ ಮಗನ ಮೇಲೆ ಹಾಗೂ ಆಶ್ರಮ ವಾಸಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಪ್ರಯತ್ನ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ತನ್ಮ ಅಳಲನ್ನು ತೋಡಿಕೊಂಡರು.
ನಮ್ಮ ಮೇಲಿನ ಅಪಪ್ರಚಾರ, ಹಲ್ಲೆ, ಕೊಲೆಯತ್ನ, ದೌರ್ಜನ್ಯ ಮತ್ತು ಬೆದರಿಕೆಗಳಿಂದ ಭಯ ಮತ್ತು ಅವಮಾನ ಉಂಟಾಗಿದೆ. ಇದರಿಂದಾಗಿ ನಮಗೆ ಆಶ್ರಮ ನಡೆಸಲು ಹಾಗೂ ಬದುಕಲು ಸಾಧ್ಯವಾಗುತ್ತಿಲ್ಲ. ಪೋಲಿಸರಿಗೆ ದೂರು ಸಲ್ಲಿಸಿ 40 ದಿನ ಕಳೆಯಿತು. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಪ್ರಭಾವಿ ವ್ಯಕ್ತಿಗಳು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಆದ್ದರಿಂದ ಪೋಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ.
ಘಟನೆ ನಡೆದ ಸ್ಥಳ ಸರಕಾರಿ ಆಸ್ಪತ್ರೆ ಯಾಗಿದ್ದರು ಕೂಡ ತಾಂತ್ರಿಕ ದೋಷದಿಂದ ಸಿಸಿ ಕ್ಯಾಮರಾ ವಿಡಿಯೋ ರೆಕಾರ್ಡ್ ಆಗಿಲ್ಲವೆಂದು ಹೇಳುತ್ತಿದ್ದು, ಆರೋಪಿಗಳಿಗೆ ಸಹಕರಿಸುತ್ತಿರುವ ಸಂಶಯವಿದೆ. ಹೀಗಾಗಿ ನಮ್ಮ ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸಿ ನ್ಯಾಯ ಕೊಡಿಸಬೇಕು. ಹಲ್ಲೆ ಆರೋಪಿಗಳ ಬಂಧನ ಹಾಗೂ ಸಿ.ಸಿ. ಕ್ಯಾಮರಾ ಪುಟೇಜ್ ನೀಡದ ಆಸ್ಪತ್ರೆ ಅಧಿಕಾರಿಗಳ ಮೇಲೆ ಒಂದು ವಾರದಲ್ಲಿ ಕ್ರಮಕೈಗೊಳ್ಳಬೇಕು. ಈ ಕ್ರಮಕ್ಕೆ ಒಂದು ವಾರದ ಗಡುವು ನೀಡಲಾಗಿದ್ದು, ನ್ಯಾಯ ಸಿಗದಿದ್ದರೆ, ಹಲ್ಲೆ ನಡೆದ 50ನೇ ದಿನಕ್ಕೆ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ವರದಿ ಓದಿದ್ದೀರಾ? ಧಾರವಾಡ | ಪಾರ್ಕಿಂಗ್ ವಿಚಾರಕ್ಕೆ ಪೋಲಿಸ್ ಮೇಲೆ ಹಲ್ಲೆ: ಮೂವರ ಬಂಧನ
ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಮಮತಾ ನಾಯ್ಕ, ಹಾಗೂ ಘಟನೆ ನಡೆದ ಸಂದರ್ಭದಲ್ಲಿ ನಾಗರಾಜ ನಾಯ್ಕ’ರ ಜೊತೆಗಿದ್ದ ಆಶ್ರಮವಾಸಿಗಳು ಉಪಸ್ಥಿತರಿದ್ದರು.