ಉತ್ತರ ಕನ್ನಡದ ಶಿರಸಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಹಾವೇರಿ ಮೂಲದ ಆಟೋ ಚಾಲಕನನ್ನು ಶಿರಸಿ ನಗರ ಠಾಣಾ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಹಾವೇರಿಯ ಅಂಬೇಡ್ಕರ್ ಸರ್ಕಲ್ ನಿವಾಸಿ ಅಬ್ದುಲ್ ರಜಾಕ್ ಅಬ್ದುಲ್ ಮುನಾಫ್ ಬಾಗಲಕೋಟೆ (30) ಬಂಧಿತ ಆರೋಪಿ.
ಭಾನುವಾರ ರಾತ್ರಿ 10:30 ರ ಸುಮಾರಿಗೆ ಶಿರಸಿಯ ಹೊಸ ಬಸ್ ನಿಲ್ದಾಣದ ಶೌಚಾಲಯದ ಮುಂಭಾಗದ ಕಟ್ಟೆಯ ಮೇಲೆ ಕುಳಿತು ಗಾಂಜಾ ಮಾರಾಟಕ್ಕೆ ಸಿದ್ಧತೆ ನಡೆಸುತ್ತಿದ್ದ. ಆಗ ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪನ್ನು ಕಂಡು ಓಡಿಹೋಗಲು ಪ್ರಯತ್ನಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 108 ಗ್ರಾಂ ತೂಕದ ಸುಮಾರು ₹6,000 ಮೌಲ್ಯದ ಗಾಂಜಾ ಹಾಗೂ ಪೊಟ್ಟಣಗಳನ್ನು ಕಟ್ಟಿಕೊಡಲು ಇಟ್ಟುಕೊಂಡಿದ್ದ 20 ಸಣ್ಣ ಪ್ಲಾಸ್ಟಿಕ್ ಚೀಲಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ನಾರಾಯಣ ರಾಥೋಡ್ ಅವರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆದ ಅಂಕೋಲಾ ಬಸ್ ನಿಲ್ದಾಣ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿಗಳಾದ ಜಿ. ಕೃಷ್ಣಮೂರ್ತಿ ಹಾಗೂ ಜಗದೀಶ್, ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಮತ್ತು ಸಿಪಿಐ ಶಶಿಕಾಂತ್ ವರ್ಮಾ ಅವರ ಮಾರ್ಗದರ್ಶನದಲ್ಲಿ, ನಗರ ಠಾಣೆಯ ಪಿಎಸ್‌ಐ ನಾಗಪ್ಪ ಬಿ. ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸದ್ದಾಂ ಹುಸೇನ್, ಚನ್ನಬಸಪ್ಪ ಕ್ಯಾರಕಟ್ಟಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ರಾಜಶೇಖರ, ಸುನೀಲ್ ಹಡಲಗೆ, ರಾಜು ಎಂ ಹಾಗೂ ಸುದರ್ಶನ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.