ನಮ್ಮ ಪೂರ್ವಜರ ದೀರ್ಘಾಯುಷ್ಯ ಮತ್ತು ಆರೋಗ್ಯಯುತ ಜೀವನ ಶೈಲಿಗೆ ಪ್ರಮುಖ ಕಾರಣವಾಗಿದ್ದು ಸಾಂಪ್ರದಾಯಿಕ, ಪಾರಂಪರಿಕ, ಜಾನಪದ ಪ್ರಭೇದಗಳು ಎಂದೂ ಕರೆಯಲ್ಪಡುವ ದೇಸಿ ಬೆಳೆಯ ತಳಿಗಳು. ಇವು ಸ್ಥಳೀಯ ಅಥವಾ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಅಭಿವೃದ್ಧಿಪಡಿಸಿ ನಿರ್ವಹಿಸಲ್ಪಡುವ ತಳಿಗಳಾಗಿದ್ದು, ಇವುಗಳು ಕಣ್ಮರೆಯಾಗುವುದನ್ನು ಮತ್ತು ನಶಿಸಿ ಹೋಗುವುದನ್ನು ತಡೆಯುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಇಂತಹ 261 ತಳಿಗಳನ್ನು ಸಂಗ್ರಹಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ.
ದೇಸಿ ಸಾಂಪ್ರದಾಯಿಕ ಬೆಳೆ ಹೊಂದಿರುವ ವಿಶಿಷ್ಟ ಗುಣಲಕ್ಷಣಗಳು ಮತ್ತು ಭೌಗೋಳಿಕ ಮೂಲಗಳ ಕಾರಣದಿಂದ ಕೆಲವೇ ರೈತರು ದೇಸಿ ತಳಿ ಕೃಷಿ ಮಾಡುವುದನ್ನು ಮುಂದುವರೆಸಿರುತ್ತಾರೆ. ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೆಲವೇ ಪ್ರಭೇದಗಳಿಗಿಂತ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತವೆ.
ಜಿಲ್ಲೆಯ ಅಂಕೋಲಾ, ಭಟ್ಕಳ, ದಾಂಡೇಲಿ, ಹಳಿಯಾಳ, ಹೊನ್ನಾವರ, ಜೋಯಿಡಾ, ಕಾರವಾರ, ಕುಮಟಾ, ಮುಂಡಗೋಡು, ಸಿದ್ದಾಪುರ, ಶಿರಸಿ, ಯಲ್ಲಾಪುರ ಭಾಗದ ರೈತರು ಹಲವು ಸಾಂಪ್ರದಾಯಿಕ ದೇಸಿ ತಳಿಗಳನ್ನು ಸಂಗ್ರಹಿಸಿ ಸಂರಕ್ಷಣೆಗಾಗಿ ನೀಡಿದ್ದಾರೆ. ಇದರಲ್ಲಿ ಕುಮಟಾ ತಾಲೂಕಿನಲ್ಲಿ 110 ದೇಸಿ ತಳಿಗಳನ್ನು ಮತ್ತು ಶಿರಸಿ ತಾಲೂಕಿನಲ್ಲಿ 80 ತಳಿಗಳನ್ನು ಗುರುತಿಸಿ ಸಂರಕ್ಷಿಸಲಾಗಿದ್ದು, ಇವುಗಳನ್ನು ಗುರುತಿಸಿ ಸಂರಕ್ಷಿಸುವಲ್ಲಿ ಪ್ರಗತಿಪರ ರೈತರಾದ ನಾಗರಾಜ್ ಮೋಹನ್ ನಾಯ್ಕ್ ಮತ್ತು ರಾಮಕೃಷ್ಣ ಗಜಾನನ ಭಟ್ ಪ್ರಮುಖ ಪಾತ್ರ ವಹಿಸಿದ್ದಾರೆ.
ದೇಸಿ ತಳಿ ಉಳಿವಿಗಾಗಿ ಸರ್ಕಾರ ಮತ್ತು ಕೃಷಿ ಇಲಾಖೆ ನೀಡುತ್ತಿರುವ ನೆರವಿನ ವಿವರ.
ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲು ಸರ್ಕಾರವು ಉದ್ದೇಶಿಸಿದ್ದು, ಕಣ್ಮರೆಯಾಗುತ್ತಿರುವ ತಳಿಗಳನ್ನು ಒಳಗೊಂಡಂತೆ ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ, ಗುರುತಿಸಿದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುವುದು, ದೇಸಿ ತಳಿಗಳನ್ನು ಹಿಂದಿನಿಂದಲೂ ಸಂರಕ್ಷಿಸಿ, ಕೃಷಿ ಮಾಡುತ್ತಿರುವ ರೈತರಿಗೆ ಬೆಂಬಲ ನೀಡುವುದು, ದೇಸಿ ತಳಿಗಳ ಜನಪ್ರಿಯತೆಗೆ ಬೆಂಬಲ ನೀಡುತ್ತಿದೆ.
ದೇಸಿ ತಳಿಗಳನ್ನು ಸಂರಕ್ಷಿಸಿ ಮತ್ತು ಬೆಳಸುವ ಮೂಲಕ ಕೃಷಿ ಪರಂಪರೆಯನ್ನು ಮುಂದುವರೆಸುತ್ತಿರುವ ರೈತರನ್ನು ಗುರುತಿಸಿ, ದೇಸಿ ತಳಿಗಳ ನಿರಂತರ ಕೃಷಿಯನ್ನು ಪ್ರೋತ್ಸಾಹಿಸಲು, ಜೀವವೈವಿಧ್ಯತೆಯನ್ನು ಬೆಂಬಲಿಸಲು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಪೋಷಿಸಲಾಗುತ್ತದೆ. ಇದಕ್ಕಾಗಿ ಬೆಂಬಲ ಮತ್ತು ಪ್ರೋತ್ಸಾಹ ಪಡೆಯಲು, ದೇಸಿ ತಳಿಗಳ ಸಂರಕ್ಷಣೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಇರಬೇಕು. ಬಿತ್ತನೆ ಬೀಜಗಳನ್ನು ಬ್ಯಾಂಕ್‌ನಲ್ಲಿರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ಧರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಪುನರುತ್ಪಾದಕ ಕೃಷಿ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು.
ದೇಸಿ ತಳಿಗಳ ಸಂರಕ್ಷಣೆಗಾಗಿ ಬೆಂಬಲ/ಪ್ರೋತ್ಸಾಹಧನವನ್ನು ಮೂಲ ಸಮೀಕ್ಷೆಯಿಂದ ಪಡೆದ ದತ್ತಾಂಶವನ್ನು ಆಧರಿಸಿ ಸಲಹಾ ಸಮಿತಿಯು ನಿರ್ಧರಿಸಲಿದೆ. ಮೂಲ ಸಮೀಕ್ಷೆಯ ದತ್ತಾಂಶದ ಮೌಲೀಕರಣವನ್ನು ಜಿಲ್ಲಾ ಯೋಜನಾ ನಿರ್ವಹಣಾ ಘಟಕವು ನಿರ್ಧರಿಸುತ್ತದೆ. ಸದರಿ ಶಿಫಾರಸಿನ ಆಧಾರದ ಮೇಲೆ ನೇರ ನಗದು ವರ್ಗಾವಣೆ(DBT) ಮೂಲಕ ದೇಸಿ ತಳಿಗಳ ಸಂರಕ್ಷಣೆಗಾಗಿ ರೈತರಿಗೆ ಪ್ರೋತ್ಸಾಹಧನವನ್ನು ಪಾವತಿಸಲಾಗುತ್ತದೆ.
ದೇಸಿ ತಳಿಗಳ ಉತ್ಪಾದನೆಗೆ ಉತ್ಪಾದನಾ ಪ್ರೋತ್ಸಾಹಧನ ನೀಡಲಿದ್ದು, ಕಾಂಪೋಸ್ಟ್, ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಇತರೆ ಸಾವಯವ ಗಿಡಮೂಲಿಕೆಗಳನ್ನು ಬಳಸಿ ದೇಸಿ ತಳಿಗಳ ಕೃಷಿ ಮಾಡುತ್ತಿರುವ ರೈತರಿಗೆ ಉತ್ಪಾದನಾ ಪ್ರೋತ್ಸಾಹಧನವನ್ನು ನೀಡಲಾಗುವುದು. ರೈತಸಿರಿ ಯೋಜನೆಯಡಿಯಲ್ಲಿ ಅರ್ಹರಿರುವ ಸಿರಿಧಾನ್ಯ ಬೆಳೆಯುವ ರೈತರು ಈ ಉತ್ಪಾದನಾ ಪ್ರೋತ್ಸಾಹಧನ ಪಡೆಯಲು ಅರ್ಹರಿರುವುದಿಲ್ಲ. ಅಲ್ಲದೇ ದೇಸಿ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಶೇಖರಣಾ ಸೌಲಭ್ಯಕ್ಕಾಗಿಯೂ ಪ್ರೋತ್ಸಾಹಧನವನ್ನು ನೀಡಲಾಗುವುದು ಹಾಗೂ ದೇಸಿ ತಳಿಗಳನ್ನು ಬೆಳೆಯುವ ರೈತರಿಗೆ ಶೇಕಡಾ 90 ರವರೆಗಿನ ಪ್ರಮಾಣೀಕರಣ ಶುಲ್ಕವನ್ನು ಭರಿಸಲಾಗುವುದು.
ದೇಸಿ ತಳಿಗಳ ವೈವಿಧ್ಯತೆ, ಕೃಷಿ ಮೂಲ ಮತ್ತು ಪ್ರಕ್ರಿಯೆಗಳನ್ನು ತಿಳಿಸಲು ಬೀಜ ಬ್ಯಾಂಕ್ ಪ್ರಮುಖವಾಗಿದ್ದು, ಸಂಶೋಧನಾ ಉದ್ದೇಶಗಳಿಗಾಗಿ ದೇಸಿ ತಳಿಗಳ ಬೀಜಗಳನ್ನು ಈ ಬೀಜಬ್ಯಾಂಕ್‌ಗಳ ಮೂಲಕ ಪಡೆಯಲಾಗುತ್ತದೆ. ದೇಸಿ ತಳಿಗಳನ್ನು ಸಂರಕ್ಷಿಸುತ್ತಿರುವ ರೈತರಿಂದ ಈ ಮಾದರಿಗಳನ್ನು ಸಂಗ್ರಹಿಸಿ ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಇಲ್ಲಿ ಬೀಜ ಬ್ಯಾಂಕ್ ನಿರ್ವಹಿಸಲು ಹಾಗೂ ಕನಿಷ್ಠ 1000 ದೇಸಿ ತಳಿಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ವಿಶೇಷ ಮಕ್ಕಳ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸಿದ ಅಲ್ಪಸಂಖ್ಯಾತರ ವೇದಿಕೆ
ದೇಸಿ ತಳಿಗಳು ಹೆಚ್ಚಿನ ಪೌಷ್ಟಿಕಾಂಶ ಮತ್ತು ರೋಗ ನಿರೋಧಕ ಸಾಮರ್ಥ್ಯವನ್ನು ಹೊಂದಿದ್ದು, ಕಾಲಾನಂತರದಲ್ಲಿ ಇದನ್ನು ಹೆಚ್ಚು ನಿರ್ಲಕ್ಷಿಸಲಾಗಿದೆ. ದೇಸಿ ತಳಿಗಳ ಸಂಭಾವ್ಯ ಪೌಷ್ಟಿಕಾಂಶದ ಅಂಶಗಳು, ಪ್ರಾದೇಶಿಕ ಪಾಕಪದ್ಧತಿಯಲ್ಲಿ ಪ್ರಸ್ತುತತೆ ಮತ್ತು ಸ್ಥಳೀಯ ಔಷಧೀಯ ಅಭ್ಯಾಸಗಳನ್ನು ಕಂಡುಹಿಡಿಯುವುದು ಅತ್ಯಗತ್ಯವಿದೆ.
ದೇಸಿ ತಳಿಗಳ ಪೌಷ್ಟಿಕಾಂಶದ ಸ್ಥಿತಿಯನ್ನು ಅಧ್ಯಯನ ಮಾಡಲು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇತರೆ ಸರ್ಕಾರಿ ಪ್ರತಿಷ್ಠಿತ ಸಂಸ್ಥೆಗಳಿಗೆ ಅನುದಾನ, ದೇಸಿ ತಳಿಗಳ ಪೌಷ್ಟಿಕಾಂಶದ ಮೌಲ್ಯ, ಬಳಕೆಯಾಗದ ಬೆಳೆಗಳು, ಮರೆತುಹೋದ ಆಹಾರಗಳು ಹಾಗೂ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರಗಳು ಮತ್ತು ಪಾಕಸ್ಪರ್ಧೆಗಳನ್ನು ಆಯೋಜಿಸಲಿದೆ.