ದಲಿತ ಸಂಘರ್ಷ ಸಮಿತಿ(ದಸಂಸ) ನೊಂದವರ ಬಾಳಿನ ಬೆಳಕಾಗಿ ಕಾರ್ಯನಿರ್ವಹಿಸಿದೆ ಎಂದು ಡಿಎಸ್ಎಸ್ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೊಳ್ಳಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಪಂಚಾಯತ್ ಟೌನ್ ಹಾಲ್‌ನಲ್ಲಿ ಜುಲೈ 28ರ ಭಾನುವಾರದಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ಧ್ವನಿ) ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, “ಸಂವಿಧಾನಕ್ಕೆ ಕುತ್ತು ಬರುತ್ತಿರುವುದರ ಬಗ್ಗೆ ಎಚ್ಚರವಹಿಸಬೇಕು” ಎಂದು ಕರೆ ಕೊಟ್ಟರು.
“ಅನೇಕ ಸಾಹಿತಿ ಮತ್ತು ಕವಿಗಳು ಹೋರಾಟದ ಕಿಚ್ಚನ್ನು ಹೊತ್ತಿಸಿದರೆ, ಡಿಎಸ್ಎಸ್ ನೊಂದವರ ಬಾಳಿನ ಬೆಳಕಾಗಿ ಕಾರ್ಯನಿರ್ವಹಿಸಿರುವ ಸಂಘಟನೆಯಾಗಿದೆ. ಸಮಾಜದಲ್ಲಿ ದೌರ್ಜನ್ಯಕ್ಕೊಳಗಾದವರ ಧ್ವನಿಯಾಗಿ ಕೆಲಸ ಮಾಡಿದೆ. ತುಳಿತಕ್ಕೆ ಒಳಗಾಗಿದ್ದ ಹಲವು ಕುಟುಂಬಗಳ ಧ್ವನಿಯಾಗಿ ಕೆಲಸ ಮಾಡಿದೆ. ಈಗ ದಲಿತ ಸಂಘಟನೆ ಉತ್ತುಂಗದ ಸ್ಥಿತಿಯಲ್ಲಿದೆ. ಅಂಬೇಡ್ಕರ್ ಅವರ ದಯೆದಿಂದ ನಮಗೆಲ್ಲ ಸಮಾನತೆ ಸಿಕ್ಕಿದೆ. ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ, ಈ ದೇಶವನ್ನು ಆಳೋಣ, ಬಾಬಾ ಸಾಹೇಬರು ನಮಗಾಗಿ ಸಂವಿಧಾನ ಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳೋಣ” ಎಂದು ಕರೆಕೊಟ್ಟರು.
ಕೆಸಿಸಿಸಿ ಬ್ಯಾಂಕ್ ನಿರ್ದೇಶಕರು ಮಾತನಾಡಿ, “ಸ್ವತಃ ಅಂಬೇಡ್ಕರ್ ಅವರು ದಲಿತರ ಮೇಲಿನ ದೌರ್ಜನ್ಯ ಯಾವ ರೀತಿ ಇರುತ್ತದೆ ಎಂಬುದನ್ನು ಅನುಭವಿಸಿದ್ದಾರೆ. ನಮಗೆಲ್ಲರಿಗೂ ಸಂವಿಧಾನಬದ್ಧ ಹಕ್ಕುಗಳನ್ನು ನೀಡಿ ಸಮಾಜದಲ್ಲಿ ತಲೆಯಿತ್ತಿ ನಿಲ್ಲುವಂತೆ ಮಾಡಿದ್ದಾರೆ. ಇತ್ತೀಚೆಗೆ ದಲಿತರಿಗೆ ಮೀಸಲಿಟ್ಟ ಹಣವು ದುರ್ಬಳಕೆ ಆಗುತ್ತಿದೆ ಅನ್ನಿಸುತ್ತಿದೆ. ಅದನ್ನು ತಡೆಯುವುದಕ್ಕೆ ಡಿಎಸ್ಎಸ್ ಈಗ ಮುಂದಾಗಬೇಕು ಮತ್ತು ಹೋರಾಟಗಳಿಂದ ಎಷ್ಟೋ ಬದಲಾವಣೆಗಳಾಗಿವೆ. ಹೀಗಾಗಿ ಪ್ರತಿಭಟನೆ, ಹೋರಾಟಗಳು ನಿರಂತರವಾಗಿರಲಿ” ಎಂದರು.
ಮುಸ್ಲಿಂ ಮುಖಂಡರೊಬ್ಬರು ಮಾತನಾಡಿ, “ನಾವು ರಾಷ್ಟ್ರಭಕ್ತರಾಗಬೇಕೆ ಹೊರತು ಯಾವುದೋ ಒಂದು ಪಕ್ಷದ ಭಕ್ತರಾಗಬಾರದು. ಕಾರಣ, ಪ್ರಸ್ತುತದಲ್ಲಿ ನಮ್ಮ ಸಂವಿಧಾನದ ಆಶಯ ಮರೆತಿದ್ದಕ್ಕೆ ಸಂವಿಧಾನ ಕಾಪಾಡಿಕೊಳ್ಳುವ ವಿಚಾರ ಮಾಡುತ್ತಿದ್ದೇವೆ. ರಾಜಕೀಯ ಪಕ್ಷದವರು ತಮಗೆ ಬೇಕಾದಂತೆ ಸಂವಿಧಾನ ಬಳಿಸಿಕೊಂಡು ಅಂಬೇಡ್ಕರ್ ಕನಸಿಗೆ ಎಳ್ಳುನೀರು ಬಿಡುವ ಮುನ್ನ ನಾವು ಎಚ್ಚೆತ್ತುಕೊಂಡು ಸಂವಿಧಾನ ಉಳಿಸಿಕೊಳ್ಳಬೇಕು. ಸಂವಿಧಾನಕ್ಕೆ ಕುತ್ತು ಬಂದಾಗ ಉಳಿಸಿಕೊಳ್ಳಲು ಸನ್ನದ್ಧರಾಗಬೇಕಿದೆ. ಮಿಸಲಾತಿ ಕಸಿದುಕೊಳ್ಳುವ ಹುನ್ನಾರದ ವಿರುದ್ಧ ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲಬೇಕಿದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ |ಮಳೆ ಹಾನಿ : ವಿವಿಧ ಗ್ರಾಮಗಳಿಗೆ ಸಚಿವ ಈಶ್ವರ ಖಂಡ್ರೆ ಭೇಟಿ
ಎಲ್‌ವಿಕೆ ಸಮಾಜ ಸೇವಾ ಸಂಸ್ಥೆಯ ಯುವರತ್ನ ಯುವಕರು ಕ್ರಾಂತಿಗೀತೆಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಬಸವರಾಜ ಸಂಗಮೇಶ್ವರ, ಹಲವು ಜಿಲ್ಲೆಗಳ ಪದಾಧಿಕಾರಿಗಳು, ಸಂಘಟಕರು, ಗಣ್ಯರು, ಹಲವು ಸಮುದಾಯಗಳ ಮುಖಂಡರು, ಮಹಿಳೆಯರು, ಯುವಜನರು, ಅಂಬೇಡ್ಕರ್ ಅಭಿಮಾನಿಗಳು ಸೇರಿದಂತೆ ಬಹುತೇಕರು ಇದ್ದರು.
