ಕಾರವಾರದ ರವೀಂದ್ರ ನಾಥ್ ಕಡಲ ತೀರದಲ್ಲಿನ ಟುಪಲೋವ್ ಯುದ್ದ ವಿಮಾನವನ್ನು ಆಗಸ್ಟ್ 15 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಆಗಸ್ಟ್ 15 ರಂದು ಟುಪಲೋವ್ ಯುದ್ದ ವಿಮಾನವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ಈ ಸ್ಥಳದಲ್ಲಿ ಕೆಫೆಟೋರಿಯಾ ಮತ್ತು ಮ್ಯೂಸಿಯಂ ಕಾಮಗಾರಿ ಕಾರ್ಯಗಳನ್ನು ಶೀಘ್ರದಲ್ಲಿ ಕೈಗೊಳ್ಳುವಂತೆ” ಸೂಚಿಸಿದರು.
“ಹೊನ್ನಾವರ ತಾಲೂಕಿನಲ್ಲಿ ಬೋಟಿಂಗ್ ಚಟುವಟಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ಬೋಟ್ ಮಾಲೀಕರು ಮತ್ತು ಬೋಟ್ ನಡೆಸುವವರು ಹೊಂದಿರಬೇಕಾದ ಎಲ್ಲಾ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ,ಅವರಿಗೆ ಅನುಮತಿ ನೀಡಬೇಕು. ಅನುಮತಿ ಪಡೆದ ಬೋಟ್ ಗಳಿಗೆ ಸೂಕ್ತ ಗುರುತಿನ ಸಂಖ್ಯೆ ನೀಡಬೇಕು, ಬೋಟಿಂಗ್ ಮತ್ತು ಪ್ರೀವೆಡ್ಡಿಂಗ್ ಚಟುವಟಿಕೆಗಳಿಗೆ ನಿರ್ದಿಷ್ಟವಾದ ದರವನ್ನು ನಿಗಧಿಪಡಿಸಿ, ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಬೇಕು. ಬೋಟ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ನಿಗದಿಪಡಿಸಬೇಕು, ಎಲ್ಲಾ ಪ್ರವಾಸಿಗರಿಗೆ ಲೈಫ್ ಜಾಕೆಟ್ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ನಿಗಧಿಪಡಿಸಿದ ಅವಧಿಯೊಳಗೆ ಬೋಟಿಂಗ್ ನಡೆಸಲು ಅವಕಾಶ ನೀಡಬೇಕು” ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ಮಳೆ ಕಾರಣದಿಂದ ನೀಡಿದ್ದ ರಜೆ ಸರಿದೂಗಿಸಲು ಶನಿವಾರ ಪೂರ್ಣಾವಧಿ ತರಗತಿ ನಡೆಸಲು ಆದೇಶ
“ಜಿಲ್ಲೆಯಲ್ಲಿನ ಅನಧಿಕೃತ ಹೋಂ ಸ್ಟೇಗಳ ಕುರಿತಂತೆ ಪಂಚಾಯತ್, ಕಂದಾಯ ಮತ್ತು ಪೊಲೀಸ್ ಇಲಾಖೆಯ ಮೂಲಕ ಪರಿಶೀಲಿಸಿ ವರದಿ ನೀಡಬೇಕು. ಅಧಿಕೃತವಾಗಿರುವ ಹೋಂ ಸ್ಟೇಗಳಿಗೆ ಅನುಮತಿಯನ್ನು ನೀಡುವಂತೆ ಮತ್ತು ನವೀಕರಣಗೊಳಿಸಬೇಕು. ಭೀಮಕೋಲ ಕೆರೆಯನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯ ಮೂಲಕ ನಿರ್ವಹಣೆ ಮಾಡುವ ಕುರಿತಂತೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು, ಗೋಕರ್ಣ,ಓಂ, ಕುಡ್ಲೆ, ಕಾಸರಕೋಡು, ಅಪ್ಸರಕೊಂಡ ಕಡಲತೀರ ಹಾಗೂ ತದಡಿ ಹಿನ್ನಿರ ಪ್ರದೇಶದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸಲು ಟೆಂಡರ್ ಆಹ್ವಾನಿಸುವಂತೆ ಹಾಗೂ ಕಡಲತೀರದಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ವಾಚ್ ಟವರ್‌ಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.