ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಘಿ ಜ್ವರದ ಹಾವಳಿ ಹೆಚ್ಚಾಗಿದೆ. ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 42 ಮಂದಿ ಡೆಂಘಿ ಜ್ವರಕ್ಕೆ ತುತ್ತಾಗಿದ್ದಾರೆ. ಜಿಲ್ಲೆಯ ಜನರು ಭಯಭೀತರಾಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಡೆಂಘಿ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ತಿಂಗಳು 467 ಮಂದಿಯನ್ನು ಡೆಂಘಿ ಪರೀಕ್ಷೆಗೆ ಒಳಪಡಿಲಾಗಿದೆ. ಹಲವರಲ್ಲಿ ಡೆಂಘಿ ಸೋಂಕು ಪತ್ತೆಯಾಗಿಲ್ಲ. ಆದರೂ, ತಿಂಗಳಿಂದ ತಿಂಗಳಿಗೆ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿದುಬಂದಿದೆ.
ಡೆಂಘಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಡಲಾಗಿದೆ. ಡೆಂಘಿ ಹರಡುವಿಕೆಯನ್ನು ತಡೆಯಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಳಚೆ ಮತ್ತು ನೀರು ನಿಲ್ಲುವ ತಗ್ಗು ಪ್ರದೇಶದಲ್ಲಿ ಫಾಗಿಂಗ್ ಮಾಡಲಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
“ಡೆಂಘಿ ತಡೆಯಲು ಸೊಳ್ಳೆಗಳು ಉತ್ಪತ್ತಿಯಾಗುವದನ್ನು ತಡೆಯಲು ನೀರು ನೀಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗೆ ಹಾಗೂ ಹೊರಗೆ ಸ್ವಚ್ಛತೆಯನ್ನು ಕಾಪಾಡಬೇಕು. ಬೆಚ್ಚಗಿನ ನೀರು ಕುಡಿಯಬೇಕು. ಕಸ ಮತ್ತು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.