ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಾಳೆಹಳ್ಳಿ ಗ್ರಾಮದ ಗೌಳಿ ದಡ್ಡಿಯಲ್ಲಿ ವಾಸವಿರುವ ಗೌಳಿ ಸಮುದಾಯದ 32 ಕುಟುಂಬಗಳು ಹಲವು ವರ್ಷಗಳಿಂದ ಕಾಡಿನೊಳಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ.
ವಿದ್ಯುತ್, ನೀರು, ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಸೇವೆಗಳು ಇಲ್ಲದಿರುವುದರಿಂದ ಈ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿವೆ. ಇವರಿಗೆ ಸರ್ಕಾರದಿಂದ ಬರುವ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಕಾಣಸಿಗುತ್ತವೆ. ಹಾಗೆ ಈ ಮಳೆಗಾಲದಲ್ಲಿ ಅವರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಯಮಸ್ವರೂಪಿ ಗುಂಡಿಗಳಿಂದ ಕೂಡಿದ್ದು ಮತ್ತು ರಸ್ತೆಗಳು ಡಾಂಬರು ಕಾಣದೆ, ಚರಂಡಿ ಇಲ್ಲದೇ ಕನಿಷ್ಠ ಪಕ್ಷ ನಡೆದಾಡಲು ಕೂಡ ಕಷ್ಟ ಪಡುವಂತಾಗಿದೆ.
ಗ್ರಾಮಕ್ಕೆ ಹೆಸರು ಸೂಚಿಸುವ ಬೋರ್ಡ್ ಕೂಡ ಇಲ್ಲದೇ ಇರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಗ್ರಾಮದಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ ಒಂದು ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದೆ. ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಬೇಕೆಂದರೆ ಸುಮಾರು 10 ಕಿ.ಮೀ ನಡೆದುಕೊಂಡು ಹೋಗಬೇಕು ಎನ್ನುತ್ತಾರೆ ಅರ್ಧದಲ್ಲಿಯೇ ವಿದ್ಯಾಭ್ಯಾಸ ನಿಲ್ಲಿಸಿದ ಮಕ್ಕಳ ಪೋಷಕರು.
ಈ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕೂಡ ಈ ಗ್ರಾಮಕ್ಕೆ ಇಲ್ಲ. ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಅನಾರೋಗ್ಯದಿಂದ ಬಳಲುತ್ತಿರುವವರೂ ಕೂಡ ಖಾಸಗಿ ವಾಹನಗಳನ್ನೆ ಅವಲಂಬಿಸುವ ಪರಿಸ್ಥಿತಿ ಇಲ್ಲಿದೆ. ಆದ್ದರಿಂದ ಎಷ್ಟೋ ಮಕ್ಕಳು ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊಟೇಲ್ ಮತ್ತು ಬೇರೆ ಕಡೆ ದುಡಿಯಲು ಹೋಗುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಈ ಮೊದಲು ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದರೂ ಏನೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಇಲ್ಲಿನ ಗ್ರಾಮದ ನಿವಾಸಿಗಳದ್ದು.
ಆದಷ್ಟು ಬೇಗ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮತ್ತು ರಸ್ತೆ ನಿರ್ಮಾಣ, ಚರಂಡಿ ನಿರ್ಮಿಸಿ ಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಆಗ್ರಹಿಸಿದ್ದಾರೆ.

ಗೌಳಿ ಸಮಾಜದ ಪ್ರತಿನಿಧಿಗಳ ಪ್ರಕಾರ, ಈ ಬಗ್ಗೆ ಅನೇಕ ಬಾರಿ ಜಿಲ್ಲಾ ಆಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಸ್ಪಂದನೆ ದೊರೆತಿಲ್ಲ. ಇದರ ವಿರುದ್ಧವಾಗಿ ಗೌಳಿ ಸಮುದಾಯದವರು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣದ ಕ್ರಮವಿಲ್ಲದಿದ್ದರೆ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾವೇರಿ | ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ!
ಈ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮದ ಕೆಲವರು ಸೇರಿಕೊಂಡು ಗ್ರಾಮ ಅಭಿವೃದ್ಧಿ ಸಮಿತಿ ರಚಿಸಿಕೊಂಡಿದ್ದಾರೆ. ಅವರೇ ತಮ್ಮ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಿ ಕೊಡುವಂತೆ ಪ್ರತಿಯೊಂದು ಇಲಾಖೆಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನಾದರೂ ಮುಂಡಗೋಡ ತಾಲೂಕಿನ ಬಾಳೆಹಳ್ಳಿ ಗ್ರಾಮದ ಗೌಳಿ ದಡ್ಡಿಯಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಪ್ರಯತ್ನಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
