ಉತ್ತರ ಕನ್ನಡ: ಜಾಗತಿಕವಾಗಿ ಇಂಧನ ಪೂರೈಕೆಯ ಮೇಲೆ ಉಂಟಾಗಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಪರಿಣಾಮಗಳನ್ನು ಎದುರಿಸಲು ಹಾಗೂ ಸಾರ್ವಜನಿಕರಿಗೆ ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕಾಗಿ ಇಂಧನ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅರ್ಹ ಪಡಿತರ ಚೀಟಿದಾರರಿಗೆ ಏಪ್ರಿಲ್ 2026ರ ಮಾಹೆಯಲ್ಲಿ ಸೀಮೆಎಣ್ಣೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ಒಟ್ಟು 639 ಅನಿಲ ರಹಿತ ಪಡಿತರ ಚೀಟಿದಾರರಿಗೆ ಹಾಗೂ ಸೀಮೆಎಣ್ಣೆ ಪಡೆಯಲು ಒಪ್ಪಿಗೆ ಸೂಚಿಸಿರುವ 1,89,086 ಅನಿಲ ಸಹಿತ ಪಡಿತರ ಚೀಟಿದಾರರಿಗೆ ಈ ಸೌಲಭ್ಯ ದೊರೆಯಲಿದೆ. ಪ್ರತಿಯೊಂದು ಪಡಿತರ ಚೀಟಿಗೆ ತಲಾ 3 ಲೀಟರ್ನಂತೆ ಸೀಮೆಎಣ್ಣೆಯನ್ನು ಮರು ಹಂಚಿಕೆ ಮಾಡಿ ಈಗಾಗಲೇ ಆದೇಶ ಹೊರಡಿಸಲಾಗಿದೆ.
ಅರ್ಹ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲಾಖೆ ಕೋರಿದೆ.ಇದೇ ವೇಳೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಇಲಾಖೆಯು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ಸೀಮೆಎಣ್ಣೆ ನೀಡುವುದು ಕಂಡುಬಂದಲ್ಲಿ ಅಥವಾ ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ನೀಲಿ ಕಡಲಾದ ರಸ್ತೆಗಳು: ಭೀಮಘರ್ಜನೆ ಸಂಘಟನೆಯಿಂದ ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ
ಒಂದೊಮ್ಮೆ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಪಡೆಯುವಲ್ಲಿ ಯಾವುದೇ ಸಮಸ್ಯೆಗಳು ಅಥವಾ ದೂರುಗಳಿದ್ದಲ್ಲಿ, ತಕ್ಷಣವೇ ಆಯಾ ತಾಲೂಕಿನ ಆಹಾರ ಶಿರಸ್ತೇದಾರರು ಅಥವಾ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಅಥವಾ ಗಂಭೀರ ದೂರುಗಳಿದ್ದಲ್ಲಿ ಕಾರವಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.




