ಶಿರಸಿ: ಅರ್ಜುನ್ ಮಿಂಟಿ ನೇತೃತ್ವದ ಭೀಮಘರ್ಜನೆ ಸಂಘಟನೆಯ ವತಿಯಿಂದ 135ನೇ ಅಂಬೇಡ್ಕರ್ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಸಂಜೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮಕ್ಕೆ ಹಳ್ಳಿ-ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಭೀಮಣ್ಣ ಟಿ. ನಾಯ್ಕ್ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ಮಹಾನ್ ಶಕ್ತಿಯಾಗಿದ್ದಾರೆ. ಅವರು ನೀಡಿದ ಸಂವಿಧಾನದ ಫಲವಾಗಿ ಇಂದು ನನ್ನಂತಹ ಸಾಮಾನ್ಯ ವ್ಯಕ್ತಿಯೂ ಶಾಸಕನಾಗಲು ಸಾಧ್ಯವಾಗಿದೆ. ಅಂಬೇಡ್ಕರ್ ಅವರು ಅನುಭವಿಸಿದ ನೋವು ಮತ್ತು ಅವಮಾನಗಳೇ ಇಂದು ನಾವೆಲ್ಲರೂ ಗೌರವಯುತ ಜೀವನ ನಡೆಸಲು ಭದ್ರ ಬುನಾದಿಯಾಗಿವೆ ಎಂದು ಸ್ಮರಿಸಿದರು.
ನಂತರ ಮಾತನಾಡಿದ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಅರ್ಜುನ್ ಮಿಂಟಿ ಅವರು, ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಸೀಮಿತವಾದವರಲ್ಲ, ಅವರು ಇಡೀ ರಾಷ್ಟ್ರದ ಆಸ್ತಿ. ಈ ದಿನವು ಕೇವಲ ಆಚರಣೆಯ ದಿನವಲ್ಲ, ಇದು ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗದ ಜನರ ಪಾಲಿಗೆ ಬೆಳಕಿನ ಹಬ್ಬವಾಗಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಪ್ರಗತಿ ಪರಿಶೀಲನಾ ಸಭೆಯಲ್ಲಿ ಗರಂ ಚರ್ಚೆ: ಶಿವರಾಮ ಹೆಬ್ಬಾರ್–ಸುನೀಲ್ ನಾಯ್ಕ ನಡುವೆ ವಾಗ್ವಾದ
ಅಂಬೇಡ್ಕರ್ ಭವನದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿತು. ಆಕರ್ಷಕ ಸ್ತಬ್ಧಚಿತ್ರಗಳು ಹಾಗೂ ಸಾವಿರಾರು ಕಾರ್ಯಕರ್ತರ ‘ಜೈ ಭೀಮ್’ ಎನ್ನುವ ಘೋಷಣೆಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದವು. ಮೆರವಣಿಗೆಯು ಅಂಬೇಡ್ಕರ್ ಸರ್ಕಲ್ನಲ್ಲಿ ಮುಕ್ತಾಯಗೊಂಡಿತು.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ಉದ್ಯಮಿ ಅಶ್ವಿನ್ ಭೀಮಣ್ಣ, ಮಹದೇವ್ ಛಲವಾದಿ, ನಂದಕುಮಾರ ಜೋಗಳೇಕರ, ಕುಮಾರ್ ಬೋರ್ಕರ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.




