ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಜೂನ್ 12ರಿಂದ 14ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಈ ವೇಳೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ.
ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಗಾಳಿ ಬೀಸಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ತೆರೆಯಲಾಗಿದೆ. ಹವಾಮಾನ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿಗಳ ಸಾಮಾಜಿಕ ಜಾಲತಾಣಗಳು ಮತ್ತು ಸ್ಥಳೀಯ ಸುದ್ದಿಪತ್ರಿಕೆಗಳಲ್ಲಿ ವರದಿಗಳನ್ನು ಪರಿಶೀಲಿಸಬಹುದೆಂದು ತಿಳಿಸಿದ್ದು, ಯಾವುದೇ ಅನಧಿಕೃತ ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡದಂತೆ ನಿರ್ದೇಶಿಸಲಾಗಿದೆ.
“ಜೂನ್ 12ರಿಂದ 14ರ ನಡುವೆ ಮೀನುಗಾರರು ಸಮುದ್ರಕ್ಕೆ ಇಳಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ತಗ್ಗು ಪ್ರದೇಶಗಳು, ಕೆರೆ, ನದಿ ಮತ್ತು ಸಮುದ್ರ ತೀರಗಳಿಗೆ ಸಾರ್ವಜನಿಕರು ಹಾಗೂ ಮುಖ್ಯವಾಗಿ ಮಕ್ಕಳು ಹೋಗದಂತೆ ಪೋಷಕರು ಜಾಗೃತೆ ವಹಿಸಬೇಕು. ಪ್ರವಾಸಿಗರು ಕೂಡ ನದಿ/ನೀರಿನ ಪ್ರದೇಶಗಳು ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು” ಎಂದು ತಿಳಿಸಿದ್ದಾರೆ.
“ಮಳೆ ಮತ್ತು ಸಿಡಿಲಿನಂತಹ ಸಂದರ್ಭಗಳಲ್ಲಿ ರೈತರು ಕೃಷಿ ಚಟುವಟಿಕೆಗಳಿಂದ ದೂರವಿರಬೇಕು. ಮಳೆ ಬೀಳುವ ಸಮಯದಲ್ಲಿ ಸಾರ್ವಜನಿಕರು, ಮಕ್ಕಳು ಮತ್ತು ಕಾರ್ಮಿಕರು ಹೊರಗೆ ತಿರುಗಾಡದೇ, ಸೂಕ್ತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ಅಪಾಯಕಾರಿ ಮರಗಳು, ವಿದ್ಯುತ್ ಕಂಬಗಳು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರಬೇಕು. ದುರ್ಬಲ ಅಥವಾ ಹಳೆಯ ಕಟ್ಟಡಗಳು, ಮರಗಳ ಕೆಳಗೆ ನಿಲ್ಲಬಾರದು” ಎಂದು ಎಚ್ಚರಿಕೆ ನೀಡಿದ್ದಾರೆ.
“ಅಗತ್ಯವಿದ್ದರೆ, ಸಾರ್ವಜನಿಕರು ಹತ್ತಿರದ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯಬಹುದು. ತಗ್ಗು ಪ್ರದೇಶಗಳಲ್ಲಿ ವಾಸಿಸುವವರು, ಮಳೆಯಿಂದ ಹಾನಿಗೊಳಗಾಗುವ ಸಾಧ್ಯತೆ ಇರುವವರು, ಅಥವಾ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಅಥವಾ ಮನೆಯ ಗೋಡೆಗಳಿರುವವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು. ತಹಶೀಲ್ದಾರರಿಂದ ಗುರುತಿಸಲ್ಪಟ್ಟ ಕಾಳಜಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಆಶ್ರಯ ಪಡೆಯಬೇಕು. ಗ್ರಾಮೀಣ ಪ್ರದೇಶದ ಕಾಲುಸಂಕ ಮತ್ತು ಕಿರು ಸೇತುವೆಗಳನ್ನು ದಾಟುವ ಮೊದಲು ಎಚ್ಚರಿಕೆ ವಹಿಸಬೇಕು” ಎಂದು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೊಡ್ಡಬಳ್ಳಾಪುರ | ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು; ತುರ್ತು ಚಿಕಿತ್ಸೆಗೆ ಉಪಯೋಗವಿಲ್ಲದ ಪಿಎಚ್‌ಸಿ
ಟೋಲ್ ಫ್ರೀ ನಂಬರ್: ಸಾರ್ವಜನಿಕರಿಗೆ ಶಿಥಿಲಾವಸ್ಥೆಯಲ್ಲಿರುವ ಅಥವಾ ಕುಸಿಯುವ ಹಂತದಲ್ಲಿರುವ ಕಾಂಪೌಂಡ್ ಅಥವಾ ಮನೆಯ ಗೋಡೆಗಳು ಕಂಡುಬಂದರೆ, ತಕ್ಷಣವೇ ಕೆಳಗಿನ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
24×7 ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ: 08382-229857, ವಾಟ್ಸ್ಯಾಪ್ ಸಂಖ್ಯೆ: 9483511015 ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಅಥವಾ ಆಯಾ ತಾಲೂಕು ತಹಶೀಲ್ದಾರ್ ಕಚೇರಿಗಳಿಗೆ ಕರೆ ಮಾಡಬಹುದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.