ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಬೆಂಗಳೂರಿನಲ್ಲಿ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದರೆ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೆಲವು ಭಾಗಗಳಲ್ಲಿ ಗುಡ್ಡು ಕುಸಿದಿದ್ದರೆ, ಹಲವಾರು ರಸ್ತೆಗಳು ಜಲಾವೃತಗೊಂಡಿವೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನ ಬಳಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಗುಡ್ಡ ಕುಸಿದಿದ್ದು, ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು, ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಶಿರೂರಿನ ಬಳಿ ಹೆದ್ದಾರಿ ನಿರ್ಮಾಣಕ್ಕಾಗಿ ಗುಡ್ಡವನ್ನು ಅಗೆಯಲಾಗಿತ್ತು. ಗುಡ್ಡದ ಉಳಿದ ಭಾಗ ಸಡಿಲಗೊಂಡಿದ್ದರಿಂದ, ಭಾರೀ ಮಳೆಗೆ ಗುಡ್ಡ ಕುಸಿದು ಬಿದ್ದಿದೆ. ಪರಿಣಾಮ ಐವರು ಸಾವನ್ನಪ್ಪಿದ್ದು, 11 ಜನ ನಾಪತ್ತೆಯಾಗಿದ್ದಾರೆ. ಹಲವಾರು ವಾಹನಗಳು ಗಂಗಾವಳಿ ನದಿಗೆ ಉರುಳಿ ಬಿದ್ದಿವೆ ಎಂದು ವರದಿಯಾಗಿದೆ.
ಮೃತರನ್ನು ಹೆದ್ದಾರಿ ಪಕ್ಕದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ (47), ಅವರ ಪತ್ನಿ ಶಾಂತಿ (36), ಮಗ ರೋಶನ್ (11), ಪುತ್ರಿ ಅವಂತಿಕಾ (6), ಸಂಬಂಧಿ ಉಪೇಂದ್ರ (50) ಎಂದು ಗುರುತಿಸಲಾಗಿದೆ.
ಹಲವರು ಗುಡ್ಡ ಕುಸಿದ ಮಣ್ಣಿನಲ್ಲಿ ಸಿಲುಕಿದ್ದು, ಅವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ತಂಡವು ರಕ್ಷಿಸಿದೆ. ಹೆದ್ದಾರಿಯ ಮೇಲೆ ಬಿದ್ದಿದ್ದ ಮಣ್ಣಿನ ರಾಶಿ ತೆರವುಗೊಳಿಸಲು 12ಕ್ಕೂ ಹೆಚ್ಚು ಜೆಸಿಬಿ ಕಾರ್ಯಾಚರಣೆ ನಡೆಸಿವೆ.