ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಪರಿಸರ ಪರಿಶೀಲನೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆ ನಡೆಯುವ ಮುನ್ನವೇ ಬಂದರು ಸ್ಥಾಪನೆಯಾದರೆ ಜಿಲ್ಲೆ ಹಾಗೂ ಬಂದರು ಪ್ರದೇಶದಲ್ಲಿ ಹೆಚ್ಚು ಉಪಯೋಗಗಳಿವೆ ಎಂದು ಸುಳ್ಳು ಪ್ರಚಾರ ಮಾಡಿ JSW ಕಂಪನಿಯು ಜನರ ದಾರಿ ತಪ್ಪಿಸುತ್ತಿದೆ ಎಂದು ಕೇಣಿ ವಾಣಿಜ್ಯ ಬಂದರು ಹೊರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಜೀವ ಬಲೆಗಾರ ಆರೋಪಿಸಿದರು.
ವಾಣಿಜ್ಯ ಬಂದರು ಸ್ಥಾಪನೆಯಿಂದ ಸ್ಥಳೀಯ ಮೀನುಗಾರರಿಗೆ ಅನುಕೂಲ ಹಾಗೂ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಮ್ಮ ಜಿಲ್ಲೆಯವರೇ ಅಲ್ಲದವರು ಹೇಳುತ್ತಿದ್ದಾರೆ. ಅದನ್ನು ದಾಖಲಿಸುತ್ತಾ ವ್ಯಾಪಕ ಸುಳ್ಳಿನ ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
“ಜಿಲ್ಲೆಯ ಹಾಗೂ ಕೇಣಿ ಪ್ರದೇಶದ ಅಭಿವೃದ್ಧಿ ವಿರೋಧಿಗಳೇನೂ ಅಲ್ಲ. ಆದರೆ, ಜನರನ್ನು ನಿರಾಶ್ರಿತರನ್ನಾಗಿ ಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುವ ಇಂತಹ ಯೋಜನೆಗೆ ನಮ್ಮ ವಿರೋಧವಿದೆ. ಮಂಗಳೂರು ಹಾಗೂ ಗೋವಾಗಳ ಅಭಿವೃದ್ದಿಗೆ ಬಂದರು ಸ್ಥಾಪನೆ ಕಾರಣ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಬಂದರು ಸ್ಥಾಪನೆಯಿಂದ ಅಲ್ಲಿ ಆಗುತ್ತಿರುವ ಮಾಲಿನ್ಯದ ಬಗ್ಗೆ ಏಕೆ ಹೇಳುತ್ತಿಲ್ಲ?” ಎಂದು ಪ್ರಶ್ನಿಸಿದರು.
“ಜಿಲ್ಲೆಯಲ್ಲಿ ಈಗ ಇರುವ ಬಂದರುಗಳಲ್ಲಿ ವಹಿವಾಟು ನಡೆಯುತ್ತಿಲ್ಲ. ಇದೇ ಸಂದರ್ಭದಲ್ಲಿ ಹೊಸ ಬಂದರು ಸ್ಥಾಪನೆ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿರುವ ಅವರು, ಇದು ಕೇವಲ ಮೀನುಗಾರರ ಹೋರಾಟ ಅಲ್ಲಾ ಬೇಲೆಕೇರಿ ಮತ್ತು ಬಾವಿಕೇರಿ ರೈತರು ಕೂಡ ತಮ್ಮ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ಕೂಡ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ. ಹೀಗೆ ಮಾಡಿದರೆ ನಾವು ಕೂಡ ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಉತ್ತರ ಕನ್ನಡ | ನಗರಸಭೆ ಅಧಿಕಾರಿಗಳಿಂದಲೇ ನೀರಿನ ಪೈಪ್ ಕಳ್ಳತನ
“ಯೋಜನೆ ವಿರೋಧಿಸುವವರಿಗೆ ಕಂಪನಿ ಏನೇ ಆಮಿಷವೊಡ್ಡಿದರೂ ನಾವು ಯಾವುದಕ್ಕೂ ಬಲಿಯಾಗುವುದಿಲ್ಲ. ಯೋಜನೆ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ” ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಹುವಾ ಖಂಡೇಕರ, ವೆಂಕಟೇಶ ದುರ್ಗೆಕರ, ಮಂಜುನಾಥ ಠಾಕೇಕರ, ಚಂದ್ರಕಾಂತ ಪಿರಣಕರ್, ಮಧ್ವರಾಜ್, ನಿಲೇಶ ಹರಿಕಂತ್ರ ಇದ್ದರು.