ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ವಿಚಾರ ಮತ್ತೆ ಚರ್ಚೆಗೆ ಕಾರಣವಾಗಿದೆ. ಜನರ ತೀವ್ರ ವಿರೋಧದ ನಡುವೆಯೂ ಹಣದ ಆಮಿಷ ನೀಡಿ ಬೆಂಬಲ ಪಡೆಯಲು ಜೆಎಸ್‌ಡಬ್ಲ್ಯೂ ಕಂಪೆನಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.
ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ಕೇಣಿ ಬಂದರು ಅಹವಾಲು ಸ್ವೀಕಾರ ಸಭೆಯಲ್ಲಿ ಜೆಎಸ್‌ಡಬ್ಲ್ಯೂ ಕಂಪೆನಿಯ ಹಾಗೂ ಅದರ ಬೆಂಬಲಿಗರ ಕೃತ್ಯಗಳು ಬಯಲಾಗಿದೆ. ₹4,118 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂದರಿಗೆ ಬೆಂಬಲದ ಹೆಸರಿನಲ್ಲಿ ಹಣ ಹಂಚಿಕೆ ನಡೆದಿರುವುದು ತಿಳಿದುಬಂದಿದೆ.
ಬಂದರಿನ ಪರವಾಗಿ ನಿಲ್ಲಲು ಸ್ಥಳೀಯರನ್ನು ಮತ್ತು ಅಂಕೋಲಾದ ವಿವಿಧೆಡೆಯ ಜನರನ್ನು ಹಣದ ಆಮಿಷವೊಡ್ಡಿ ಕರೆಯಲಾಗಿದೆಯೆಂದು ಆರೋಪಿಸಿದ್ದು, ಕುಮಟಾ ಸೇರಿದಂತೆ ಹೊರಗಿನ ತಾಲೂಕುಗಳಿಂದಲೂ ಜನರನ್ನು ನಕಲಿ ಸಹಿಗಳೊಂದಿಗೆ ಸಹಿ ಅಭಿಯಾನಕ್ಕೆ ಕರೆಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕಂಪೆನಿಯ ಕುತಂತ್ರವನ್ನು ಅಂಕೋಲಾ ಜನರು ಸಾಕ್ಷಿ ಸಮೇತ ಮಾಧ್ಯಮದ ಮುಂದೆ ಬಯಲಿಗೆಳೆದಿದ್ದಾರೆ. ಬೊಗ್ರಿಬೈಲ್‌ನ ಮಹಿಳೆಯರಿಗೆ ಪ್ರೇಮಾ ಎಂಬ ಮಹಿಳೆ ಹಣದ ಆಮಿಷ ನೀಡಿ ಕರೆ ತಂದಿದ್ದಾಳೆಂಬ ದೂರೂ ಕೂಡ ಕೇಳಿಬಂದಿದೆ. ಇತರರಿಗೂ ತಲಾ ₹500 ನೀಡಿ ನೂರಾರು ಜನರನ್ನು ಸೇರಿಸಿದ ಆರೋಪವಿದೆ.
ಅಂಕೋಲಾದ ನಿವಾಸಿಯೆಂದು ಗುರುತಿಸಿಕೊಂಡು ಬಂದರು ಪರವಾಗಿ ಬಂದಿದ್ದ ಹಿರೇಗುತ್ತಿಯ ಯುವಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ, “ಜಮೀನು-ಮನೆಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೆ ನಮ್ಮ ಮಕ್ಕಳನ್ನು ಕರೆದುಕೊಂಡು ಬೀದಿಗಿಳಿದು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಾನುವಾರುಗಳ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ
ಜನರ ವಿರೋಧದ ನಡುವೆಯೂ ಬಂದರು ಪರವಾಗಿ ಸಹಿ ಪತ್ರ ಸಂಗ್ರಹಿಸುವ ಕಾರ್ಯ ಮುಂದುವರೆದರೆ, ಮುಖಂಡರು ಮತ್ತು ಕಂಪೆನಿ ಸಿಬ್ಬಂದಿಯ ವಿರುದ್ಧ ಜನರು ಕೈ ಎತ್ತುವುದಕ್ಕೂ ಹಿಂದೆ ಸರಿಯುವುದಿಲ್ಲವೆಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಬಂದರು ಪರ ನಕಲಿ ಸಹಿ ಹಾಕಿದ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.