ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಬೃಂದಾವನ ವಸತಿ ಬಡಾವಣೆಯಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳಲ್ಲಿ ಮಂಗನಬಾವು ಸೋಂಕಿನ ಸಂಖ್ಯೆ ಪ್ರಸ್ತುತ 130ಕ್ಕೆ ಏರಿದ್ದು, ಕಳೆದ ನಾಲ್ಕೈದು ದಿನಗಳಿಂದ ಮಕ್ಕಳಲ್ಲಿ ನೆಗಡಿ, ಕೆಮ್ಮು, ಜ್ವರ ಮತ್ತು ಮುಖದ ಬಾವು ಕಾಣಿಸಿಕೊಳ್ಳಲು ಶುರುವಾಗಿ, ಮಕ್ಕಳಲ್ಲಿ ಕಾಣಿಸಿಕೊಂಡ ಮಂಗಬಾವು ಇದೀಗ ಮತ್ತಷ್ಟು ಗಂಭೀರವಾಗಿದೆ ಉಲ್ಬಣಗೊಂಡಿದೆ.
ಮಂಗನಬಾವು ಸೋಂಕು ಕಾಣಿಸಿಕೊಂಡ ಮಕ್ಕಳನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ವಸತಿ ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಎಲ್ಲರಿಗೂ ಸೋಂಕಿನ ಭೀತಿ ಶುರುವಾದ ಕಾರಣ, ಇನ್ನುಳಿದ ವಿದ್ಯಾರ್ಥಿಗಳನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂಜಾಗೃತಾ ಕ್ರಮಕ್ಕಾಗಿ ಮನೆಗೆ ಕಳುಹಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮೂರು ದಿನದ ರಜೆ ಘೋಷಿಸಿದ್ದಾರೆ.
ಈ ಕುರಿತು ಈದಿನ.ಕಾಮ್ ಜೊತೆಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ನೀರಜ.ಬಿ.ವಿ ಮಾತನಾಡಿ, ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 105 ಗಂಡು ಮಕ್ಕಳು 101 ಹೆಣ್ಣುಮಕ್ಕಳು ಒಟ್ಟು 206 ವಿದ್ಯಾರ್ಥಿಗಳಿದ್ದಾರೆ. ಮಂಗನಬಾವು ರೋಗಕ್ಕೆ ಹೆಚ್ಚು ಭಯಪಡಬೇಕಿಲ್ಲ. ಆದರೆ ಮಂಗನಬಾವು ರೋಗ ನೀರು ಮತ್ತು ಸೋಂಕಿತರ ಸಂಪರ್ಕದಿಂದ ಹರಡುತ್ತದೆ. ಹೀಗಾಗಿ ಮತ್ತಷ್ಟು ವಿದ್ಯಾರ್ಥಿಗಳು ಸೋಂಕಿತರಾಗುವ ಆತಂಕ ಉಂಟಾಗಿದೆ. ಕ್ರಮೇಣ ವಿದ್ಯಾರ್ಥಿಗಳಲ್ಲಿ ಸೋಂಕು ಹರಡಿಕೊಂಡಿದೆ. ಕಳೆದ ಎರಡು ದಿನಗಳ ಹಿಂದೆ 31 ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 5 ಮಕ್ಕಳಿಗೆ ಸೋಂಕಿನ ಗುರುತು ಕಾಣಿಸಿದ್ದವು.
ನವೆಂಬರ್ 22ರಂದು ಮತ್ತೆ 5 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 130 ಮಕ್ಕಳಿಗೆ ಸೋಂಕು ತಗುಲಿದೆ. ವೈದ್ಯಕೀಯ ಪರೀಕ್ಷೆಯ ನಂತರ ಹೆಚ್ಚಿನ ಪರಿಶೀಲನೆಗೆ ಬೆಂಗಳೂರಿನ ಅಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ವೈದ್ಯಕೀಯ ವರದಿ ಬಂದನಂತರ ಮುಂದಿನ ಚಿಕಿತ್ಸಾ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಕ್ಕಳಿಗೆ 3 ದಿನಗಳ ರಜೆ ಘೋಷಣೆ ಮಾಡಿದ್ದಾರೆ. ಮಂಗನಬಾವು ವೈರಾಣು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಂತ ದೊಡ್ಡ ವೈರಸ್ ಎಂತಲೂ ಅಲ್ಲ. ಸಾಮಾನ್ಯವಾಗಿ ಈ ಸೋಂಕಿಗೆ ಜ್ವರ, ಕಮ್ಮು, ನೆಗಡಿ, ಮುಖ ಮತ್ತು ಗಂಟಲು ಬಾವು, ತಲೆನೋವು ಗುರುತುಗಳನ್ನು ಕಾಣಬಹುದು. ಒಂದಿಷ್ಟು ಚಿಕಿತ್ಸೆ, ಸ್ವಚ್ಛತಾ ಜಾಗೃತಿ ವಹಿಸಿದರೆ ಬೇಗ ವಾಸಿ ಆಗುತ್ತದೆ ಎಂದರು.

ಮಂಗನ ಬಾವು ಗಂಭೀರವಾದ ವೈರಾಣು ಕಾಯಿಲೆ ಆಗಿದ್ದು, ಇದರಿಂದ ಕಿವಿಯ ಕೆಳಗೆ ಮತ್ತು ಮುಂಭಾಗದಲ್ಲಿ ನೋವು ಉಂಟಾಗುತ್ತದೆ. ವೈರಾಣುವಿನಿಂದ ಹರಡುವ ಒಂದು ಸಾಂಕ್ರಾಮಿಕ ರೋಗವಾದ ಮಂಗನಬಾವು ಸೊಂಕಿತ ಜೊಲ್ಲಿನ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. 2 ರಿಂದ 12 ವರ್ಷದವರೆಗಿನ ಮಕ್ಕಳಿಗೆ ಸೋಂಕು ತಗುಲುವ ಸಂಭವ ಹೆಚ್ಚಾಗಿದ್ದು, ಸಾಧಾರಣವಾಗಿ 2 ರಿಂದ 24 ದಿನಗಳು ಈ ರೋಗದಿಂದ ಹೊರಬರಲು ಸಮಯ ಹಿಡಿಯುತ್ತದೆ.
ಆಹಾರವನ್ನು ನುಂಗುವಾಗ ಮತ್ತು ಅಗಿಯುವಾಗ ನೋವು ಆಗುತ್ತದೆ. ಹುಳಿಯಾದ ಮತ್ತು ಹೆಚ್ಚು ಜೊಲ್ಲು ತರಿಸುವ ಆಹಾರ ಪದಾರ್ಥಗಳು, ಪಾನಿಯಗಳು ನೊವನ್ನು ಹೆಚ್ಚಿಸುತ್ತವೆ. ಅತಿಹೆಚ್ಚು ಜ್ವರ, ತಲೆನೋವು ಮತ್ತು ಹಸಿವಾಗದಿರುವುದು ಇದರ ಲಕ್ಷಣವಾಗಿದೆ. ಈ ಅವಧಿಯಲ್ಲಿ ಮಗುವನ್ನು ಇತರರಿಂದ ದೂರವಿಡಬೇಕು. ಶಾಲೆಗೆ ಕಳಿಸಬಾರದು. ಒಂದು ಸಲ ಮಂಗನ ಬಾವು ಬಂದರೆ ಅದು ಮತ್ತೆ ಬರುವುದಿಲ್ಲ. ಜೀವಮಾನಪರ್ಯಂತ ನಿರೋಧತೆ ಬಂದಿರುತ್ತದೆ. ಮಂಗನ ಬಾವು ಕೆಲವು ಸಲ ಮೆದುಳಿನ ಸೋಂಕಿಗೆ ಕಾರಣವಾಗಬಹುದು (ಎನ್ಸೆಫಲೆಟಿಸ). ಅದು ಬಹು ಗಂಭೀರವಾದ ಸಮಸ್ಯೆ ತರಡು ಬೀಜಗಳ ಸೋಂಕಿಗೆ ಒಳಗಾದರೆ ಬಂಜೆತನ ಬರಬಹುದು ಎಂದು ವೈದ್ಯಕೀಯ ವರದಿಯಿಂದ ತಿಳಿದುಬರುತ್ತದೆ.
ಈ ವರದಿ ಓದಿದ್ದೀರಾ? ಧಾರವಾಡ | ಗೋವಾ ಕಡೆಗೆ ಹೊರಟಿದ್ದ ಗೂಡ್ಸ್ ಲಾರಿಗೆ ಆಕಸ್ಮಿಕ ಬೆಂಕಿ
ಈಗಾಗಲೇ ವಸತಿ ನಿಲಯಕ್ಕೆ ತಾಲೂಕು ವೈದ್ಯಾಧಿಕಾತಿ ಭೆಟ್ಟಿನೀಡಿ ಪರಿಶೀಲನೆ ನಡೆಸಿ, ಸೋಂಕಿನ ಲಕ್ಷಣವುಳ್ಳ ಮಕ್ಕಳನ್ನು ಪಾಲಕರ ಕೈಗೆ ಒಪ್ಪಿಸಿದ್ದಾರೆ. ಪ್ರಾರಂಭದಲ್ಲಿ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡು ಬಳಿಕ ಮುಖದ ಮೇಲೆ, ಗಂಟಲಿನಲ್ಲಿ ಬಾವು ಕಾಣಿಸುತ್ತದೆ. ಸರ್ಕಾರ ಈ ಕುರಿತು ಗಮನ ಹರಿಸಿ ರೋಗಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿ, ರೋಗ ಹೆಚ್ಚು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.