ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗಿ ಕೃಷಿ ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅನಂತವಾಡಿ ಸಮೀಪ ಸಂಭವಿಸಿದೆ.
ಅನಂತವಾಡಿ, ಖಾಸಗೇರಿ ನಿವಾಸಿ ಜನಾರ್ಧನ ರಾಮ ಮರಾಠಿ (45) ಮೃತ ದುರ್ದೈವಿ. ಕೃಷಿ ಕಾರ್ಮಿಕರಾಗಿದ್ದ ಜನಾರ್ಧನ ಅವರು ನಿನ್ನೆ ಬೆಳಗ್ಗೆ ಸುಮಾರು 10 ಗಂಟೆಗೆ ಅನಂತವಾಡಿ, ಮರಾಠಿಕೇರಿ ಬಳಿಯ ತಮ್ಮ ಗದ್ದೆಯಲ್ಲಿ ಕೆಲಸಕ್ಕೆ ತೆರಳಿದ್ದರು.
ಆದರೆ, ಬೆಳಗ್ಗೆಯಿಂದಲೂ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಗದ್ದೆಯಲ್ಲಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮನೆಗೆ ತಿರುಗಿ ಬರುವ ವೇಳೆ, ದಾರಿಯಲ್ಲಿನ ಹಳ್ಳವನ್ನು ದಾಟುವಾಗ ಈ ದುರ್ಘಟನೆ ಸಂಭವಿಸಿದೆ. ಮಳೆಯ ಅಬ್ಬರದಿಂದ ಹಳ್ಳದಲ್ಲಿ ನೀರಿನ ಹರಿವು ತೀವ್ರವಾಗಿದ್ದು, ಜನಾರ್ಧನ ಅವರು ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೃತರ ಪುತ್ರಿ ಪಲ್ಲವಿ ಜನಾರ್ಧನ ಮರಾಠಿ ಅವರು ಈ ಬಗ್ಗೆ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ