ಡಿಆರ್ಎಫ್ಒ ಹುದ್ದೆಗೆ ಸದ್ಯ ಇರುವ ಶೇ.50ರಷ್ಟು ಮುಂಬಡ್ತಿ ಮತ್ತು ಶೇ.50ರಷ್ಟು ನೇರ ನೇಮಕಾತಿ ರದ್ದುಪಡಿಸಿ ಶೇ.100ರಷ್ಟು ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಲು ಸಲ್ಲಿಸಿದ್ದ ಶಿಫಾರಸು ಅನುಮೋದನೆ ಹಂತದಲ್ಲಿದ್ದು ಇದಕ್ಕೆ ಅರಣ್ಯ ಪದವೀಧರರು ಮತ್ತು ಪದವಿ ವಿದ್ಯಾರ್ಥಿಗಳ ತೀವ್ರ ವಿರೋಧ ವ್ಯಕ್ತವಾಗಿದೆ.
ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್ಒ) ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಲು, ಸರ್ಕಾರದ ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸರ್ಕಾರಕ್ಕೆ ಶಿಫಾರಸು ವರದಿ ನೀಡಿದ್ದರು. ವರದಿ ಅರಣ್ಯ ಇಲಾಖೆಯ ಅನುಮೋದನೆ ಹಂತದಲ್ಲಿದ್ದು, ಅರಣ್ಯ ಪದವೀಧರರನ್ನು ಕಂಗೆಡಿಸಿದೆ.
ಒಬ್ಬ ಅರಣ್ಯ ಪದವೀಧರನನ್ನು ರೂಪಿಸಲು 6 ಲಕ್ಷ ರೂ. ವ್ಯಯವಾಗುತ್ತದೆ. ತಜ್ಞ ಅರಣ್ಯಾಧಿಕಾರಿ ಆಗಲು ಅರ್ಹರಿರುವಂತೆ ರೂಪಿಸಲಾಗುತ್ತದೆ. ಈಗಾಗಲೇ 1,500 ಅರಣ್ಯ ಪದವೀಧರರು ಡಿಆರ್‌ಎಫ್‌ಒ ಹುದ್ದೆ ಪಡೆಯಲು ಅರ್ಹರಿದ್ದರೂ ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದರೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳಲ್ಲಿ ಆಯಾ ವಿಷಯದ ಪದವೀಧರರನ್ನೆ ತಮ್ಮ ಇಲಾಖೆ ಹುದ್ದೆಗಳಿಗೆ ನೇಮಿಸಲಾಗುತ್ತದೆ ಎಂದು ಕರ್ನಾಟಕ ಅರಣ್ಯ ಪದವೀಧರರ ಮತ್ತು ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಯಶಸ್ ಟಿ.ಎನ್ ಮಾದ್ಯಮಗಳಿಗೆ ತಿಳಿಸಿದ್ದಾರೆ.
ನೇಮಕಾತಿ ಮೀಸಲಾತಿಯಲ್ಲಿ ಕಡಿತಮಾಡುವುದರಿಂದ ಅರಣ್ಯ ಪದವೀಧರರು ಈಗಾಗಲೇ ಬೇಸರದಲ್ಲಿದ್ದಾರೆ. ಡಿಆರ್‌ಎಫ್‌ಒ ಹುದ್ದೆಗಳಿಗೆ ಹಾಲಿ ಇರುವ ನೇರ ನೇಮಕಾತಿ ರದ್ದುಗೊಳಿಸಿದರೆ ಅನ್ಯಾಯವಾಗುತ್ತದೆ ಎಂದರು.
ರಾಜ್ಯದ ಉತ್ತರ ಕನ್ನಡದ ಶಿರಸಿ, ಕೊಡಗಿನ ಪೊನ್ನಂಪೇಟೆ ಮತ್ತು ಶಿವಮೊಗ್ಗದ ಇರುವಕ್ಕಿಯಲ್ಲಿ ಅರಣ್ಯ ಪದವಿ ಕಾಲೇಜುಗಳಿವೆ. ವರ್ಷಕ್ಕೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರಣ್ಯ ಪದವಿ ಪಡೆಯುತ್ತಿದ್ದಾರೆ.