60 ದಿನಗಳ ನಿಷೇಧ ಅವಧಿ ಮುಗಿದ ಬೆನ್ನಲ್ಲೇ ಮೀನು ಬೇಟೆಗೆ ಸಮುದ್ರಕ್ಕೆ ಇಳಿದ ಟ್ರಾಲರ್ ಬೋಟುಗಳು ಮೊದಲ ದಿನ ಸಮಾಧಾನಕರ ಎನ್ನುವಷ್ಟು ಪ್ರಮಾಣದಲ್ಲಿ ಸೀಗಡಿ ಮೀನು ಹಿಡಿದು ತಂದಿವೆ.
ಇಲ್ಲಿನ ಬೈತಕೋಲ ಮೀನುಗಾರಿಕೆ ಬಂದರು ಸೇರಿದಂತೆ ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳದ ಬಂದರುಗಳಿಂದ ಟ್ರಾಲರ್ ಬೋಟುಗಳು ಈ ತಿಂಗಳ ಪ್ರಾರಂಭ ದಿನದಿಂದ ಮಿನುಗಾರಿಕೆ ಚಟುವಟಿಕೆ ಆರಂಭಿಸಿವೆ.
ಬಹುತೇಕ ಬೋಟುಗಳಿಗೆ ಉತ್ತಮ ಪ್ರಮಾಣದಲ್ಲಿ ಕೆಂಪು ಸೀಗಡಿ(ತೇಮ್ಲಿ) ಮೀನುಗಳ ರಾಶಿ ಲಭಿಸಿದೆ. ಜೂನ್ 1ರಿಂದ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಅವಧಿ ಜಾರಿಯಾಗಿದ್ದರಿಂದ ಮೀನುಗಾರಿಕೆ ಬೋಟುಗಳು ಬಂದರು ಪ್ರದೇಶದಲ್ಲಿ ಲಂಗರು ಹಾಕಿದ್ದವು. ಕಳೆದ 15 ದಿನಗಳಿಂದ ಬೋಟುಗಳನ್ನು ಶುಚಿಗೊಳಿಸಿ, ಪರಿಕರಗಳನ್ನು ಸಿದ್ಧಪಡಿಸಿಕೊಂಡಿದ್ದ ಮೀನುಗಾರರು ನಿಷೇಧಾಜ್ಞೆ ಮುಗಿಯುತ್ತಿದ್ದಂತೆ ನಸುಕಿನ ಜಾವವೇ ಆಳ ಸಮುದ್ರದತ್ತ ಸಾಗಿ ವರ್ಷದ ಮೊದಲ ಮೀನುಗಾರಿಗೆಯನ್ನು ಪ್ರಾರಂಭಿಸುತ್ತಾರೆ.
“ಟ್ರಾಲರ್ ಬೋಟುಗಳು ತೀರಾ ಆಳ ಸಮುದ್ರದತ್ತ ಸಾಗದೆ, ದಡದಿಂದ 10 ನಾಟಿಕಲ್ ವ್ಯಾಪ್ತಿಯೊಳಗೆ ಪ್ರಾರಂಭದಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿವೆ. ಕಳೆದ ತಿಂಗಳ ಮಧ್ಯಭಾಗದಲ್ಲಿ ಎದ್ದ ಚಂಡಮಾರುತ ತಗ್ಗಿದ್ದರಿಂದ ಅಲೆಗಳ ರಭಸವೂ ಕಡಿಮೆ ಇರುವುದರಿಂದ ಈ ಸಲ ಮೀನುಗಾರಿಕೆಗೆ ಅನುಕೂಲವಾಯಿತು. ಈ ಸಲ ಉತ್ತಮ ಮಳೆ ಆಗಿ, ವೇಗದ ಗಾಳಿ ಬಿಸದೆ ಇರುವುದರಿಂದ ಈ ಸಲ ಮೊದಲನೇ ದಿನವೇ ನಿರೀಕ್ಷಿತ ಪ್ರಮಾಣದ ಮೀನುಗಳು ಲಭಿಸಿವೆ” ಎಂದು ಟ್ರಾಲರ್ ಬೋಟಿನಲ್ಲಿ ತೆರಳಿದ್ದ ಮಾಲೀಕರು ಮತ್ತು ಮೀನುಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
“ಮೀನುಗಳ ಲಭ್ಯತೆ ಉತ್ತಮ ಎನಿಸಿದ್ದರೂ ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಕಡಿಮೆಯೇ ಇದೆ. ಹಿಂದೆಲ್ಲ 135-140 ರೂಪಾಯಿ ದರಕ್ಕೆ ಮಾರಾಟವಾಗುತ್ತಿದ್ದ ಪ್ರತಿ ಕೆಜಿ ಸೀಗಡಿ ದರ ಈ ಬಾರಿ ₹110ಕ್ಕೆ ಇಳಿಕೆಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸಮಾಧಾನಕರ ದರ ಎನ್ನಬಹುದು” ಎಂದು ಮೀನುಗಾರಾರು ತಮ್ಮಲ್ಲಿ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ಚಟುವಟಿಕೆ ಇಲ್ಲದೆ ಬಣಗುಡುತ್ತಿದ್ದ ಬಂದರಿನಲ್ಲಿ ಮತ್ತೆ ಮೀನುಗಾರಿಕೆ ಪ್ರಾರಂಭ ಆಗಿರುವುದರಿಂದ ಕಾರ್ಮಿಕರು, ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ್ದಾರೆ. ಮೊದಲ ದಿನ ಮೀನು ಸಾಗಾಟದ ವಾಹನಗಳ ಓಡಾಟದಿಂದ 2 ತಿಂಗಳು ಸ್ಥಗಿತವಾಗಿದ್ದ ಬಂದರು ರಸ್ತೆಯು, ಟ್ರಾಲರ್ ಬೋಟುಗಳು ಕಡಲಿಗೆ ಇಳಿಯುತ್ತಿದ್ದಂತೆ ತನ್ನ ವೈಭವವನ್ನು ಮರಳಿ ಪಡೆದು ಕಡಲ ಮಕ್ಕಳನ್ನು ಮತ್ತು ಅದನ್ನು ನಂಬಿ ಜೀವನ ನಡೆಸುವವರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ.
“2 ತಿಂಗಳ ಬಳಿಕ ಪ್ರಾರಂಭವಾದ ಮೀನುಗಾರಿಕೆ ಆರಂಭದಲ್ಲಿಯೇ ಅನಾಹುತಕ್ಕೆ ಕಾರಣವಾಗಿದೆ. ವಾತಾವರಣದಲ್ಲಿ ಆಗುವ ಬದಲಾವಣೆ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಒಂದೇ ಸಲ ಏಳುವ ಗಜಗಾತ್ರದ ಅಲೆಗಳು ಇವುಗಳಿಂದ ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸುವ ಮೀನುಗಾರರಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ಸರ್ಕಾರ ಮತ್ತು ಇಲಾಖೆಯವರು ಎಷ್ಟೇ ಹೇಳಿದರೂ ಮೀನುಗಾರರು ಲೈಫ್ ಜಾಕೆಟ್ ಬಳಸುವುದಿಲ್ಲ. ಅದನ್ನು ಬಳಸಿದರೆ ಆಗುವ ಅನಾಹುತದ ಪರಿಣಾಮವನ್ನು ಮತ್ತು ತಮ್ಮ ಅಮೂಲ್ಯ ಜೀವವನ್ನು ಕಾಪಾಡಿಕೊಳ್ಳಬಹುದು” ಎಂದು ಇಲಾಖೆಯು ಮನವಿ ಮಾಡಿದೆ.
ಈ ವರ್ಷ ಒಟ್ಟಾರೆ ಅಂಕಿ-ಅಂಶದಂತೆ ಮೀನುಗಾರಿಕೆ ತೆರಳಿದವರಲ್ಲಿ 12 ಮಂದಿ ಮೀನುಗಾರರು ಸಮುದ್ರದ ಪಾಲಾಗಿದ್ದಾರೆ. ಯಾವುದೇ ವರ್ಷವೂ ಇಷ್ಟು ಪ್ರಮಾಣದಲ್ಲಿ ಸಾವು ಸಂಭವಿಸಿರಲಿಲ್ಲ.
ಇದನ್ನೂ ಓದಿದ್ದೀರಾ? ಪಾಯಿಂಟ್ ನಂ 6ರಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮೀನುಗಾರರು ಇಲಾಖೆ ನೀಡುವ ಜಾಕೆಟ್ ಬಳಿಸಿ ಮೀನುಗಾರಿಕೆ ಮಾಡಲು ಆಗುವುದಿಲ್ಲ. ಆದ್ದರಿಂದ ಕೆಲಸಕ್ಕೆ ಅಡಚಣೆ ಉಂಟಾಗುತ್ತದೆ. ಹಾಗಾಗಿ ನಮ್ಮ ಕೆಲಸಕ್ಕೆ ಅನುಗುಣವಾಗಿ ಜಾಕೆಟ್ ಮತ್ತು ಇತರೆ ಪರಿಕರಗಳನ್ನು ತಯಾರಿಸಿ ಕೊಡಿ ಎಂಬುದು ಮೀನುಗಾರರ ವಾದವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಮೀನುಗಾರರು ಆಳ ಸಮುದ್ರಕ್ಕೆ ಹೋಗುವಾಗ ಸರಿಯಾದ ರೀತಿಯಲ್ಲಿ ಸಿದ್ದವಾಗಿ ಮತ್ತು ಲೈಫ್ ಜಾಕೆಟ್ ಹಾಗೂ ತಮ್ಮ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಲು ಬೇಕಾದಂತಹ ಪರಿಕರಗಳನ್ನು ಬಳಸಿದರೆ ತಮ್ಮ ಜೀವದ ಜತೆಗೆ ತಮ್ಮನ್ನು ನಂಬಿ ಬದುಕಿರುವವರ ಜೀವನವನ್ನೂ ಕಾಪಾಡಿಕೊಳ್ಳಬಹುದಾಗಿದೆ.