ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ದೇಶಾದ್ಯಂತ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲೂ ರಕ್ಷಣಾ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಸೋಮವಾರ ರಕ್ಷಣಾ ಪಡೆಗಳು ಹಾಗೂ ತನಿಖಾ ಸಂಸ್ಥೆಗಳು ಕರಾವಳಿಯಲ್ಲಿ ಸಭೆ ನಡೆಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭದ್ರತೆ ಅಲರ್ಟ್ ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ.
ಜಿಲ್ಲೆಯ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಜನಸಂದಣಿ ಪ್ರದೇಶ ಹಾಗೂ ಸಮುದ್ರ ಮಾರ್ಗಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಬಿಗಿ ಬಂದೋಬಸ್ತ್ ಹೆಚ್ಚಿಸಿ ಸ್ಥಳೀಯರ ಮೇಲೂ ಹದ್ದಿನ ಕಣ್ಣಿಡಲಾಗುತ್ತಿದೆ.
ಈಗಾಗಲೇ ಗಡಿಯಲ್ಲಿ ಬಿಗುವಿನ ವಾತಾರಣ ಇದ್ದು, ಕೇವಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸೀಮಿತಗೊಳಿಸದೇ, ಸ್ಥಳೀಯವಾಗಿಯೂ ಸಮಾಜ ಘಾತಕ ಕೃತ್ಯಗಳಿಗೆ ಅವಕಾಶ ನೀಡದಂತೆ ಸ್ಥಳೀಯ ಪೊಲೀಸರ ಸಹಕಾರ ಪಡೆದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ಜಿಲ್ಲೆಯ ಎಲ್ಲ ಉಪವಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ನೇತೃತ್ವದಲ್ಲಿ ಪೊಲೀಸರು ಈಗಾಗಲೇ, ಜಿಲ್ಲೆಯಲ್ಲಿ ಸಮಾಜ ಘಾತಕ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಹಾಗೂ ಪ್ರೇರಣೆ ನೀಡುವ ಮತ್ತು ಶಾಂತಿ ಸುವ್ಯವಸ್ಥೆಯನ್ನು ಕದಡುವ ರೌಡಿ ಶೀಟರ್ಗಳ ಪೆರೇಡ್ ನಡೆಸಿ ಎಚ್ಚರಿಕೆ ನೀಡುತ್ತಿದ್ದಾರೆ.
ಜಿಲ್ಲೆಯ ಗಡಿ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ವಿಶೇಷ ಅಭಿಯಾನ, ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಚೆಕ್ ಪೋಸ್ಟ್ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ 361 ಪ್ರಕರಣಗಳಲ್ಲಿ ₹1.45 ಲಕ್ಷ ದಂಡ ವಿಧಿಸಲಾಗಿದೆ.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ, ನೌಕಾನೆಲೆ, ಕೈಗಾ ಸೇರಿದಂತೆ ಅತಿ ಸೂಕ್ಷ್ಮ ಪ್ರದೇಶ ಒಳಗೊಂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಅಲರ್ಟ್ ಆಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದಾಗಿ ಕರಾವಳಿ ಹಾಗೂ ಮಲೆನಾಡಿನ ಸೂಕ್ಷ್ಮ ಪ್ರದೇಶಗಳಲ್ಲಿ ಪರಿಶೀಲಿಸಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿದ್ದರು. ಅಲ್ಲದೆ ಪ್ರವಾಸಿ ತಾಣಗಳೊಂದಿಗೆ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ರಕ್ಷಣೆ ಒದಗಿಸುವ ಸಂಬಂಧ ಜಿಲ್ಲೆಯ ಗಡಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ತೆರೆದು ವಿಶೇಷ ನಿಗಾ ವಹಿಸಿದ್ದರು. ಅದರಂತೆ ಜಿಲ್ಲೆಯ ವಿವಿಧ ವಿಭಾಗಗಳಲ್ಲಿ ಕಳೆದ ಎರಡು ದಿನದಿಂದ ರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮದ್ಯ ಸೇವಿಸಿ ವಾಹನ ಚಲಾವಣೆ ಹಾಗೂ ನಿಯಮ ಉಲ್ಲಂಘಿಸಿ ವಾಹನ ಚಲಾವಣೆ ಮಾಡುತ್ತಿದ್ದ ಸುಮಾರು 361 ಪ್ರಕರಣಗಳನ್ನು ದಾಖಲಿಸಿ ₹1,45,600 ದಂಡ ವಸೂಲಿ ಮಾಡಿದ್ದಾರೆ. ಈ ಪೈಕಿ ಭಟ್ಕಳ ವಿಭಾಗದಿಂದ 185 ಪ್ರಕರಣ, ಶಿರಸಿ ವಿಭಾಗದಲ್ಲಿ 101, ದಾಂಡೇಲಿ ವಿಭಾಗದಲ್ಲಿ 73 ಹಾಗೂ ಕಾರವಾರ ವಿಭಾಗದಲ್ಲಿ 12 ಪ್ರಕರಣಗಳನ್ನು ದಾಖಲಿಸಿ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಸಿ ಮುಟ್ಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | 260ಕ್ಕೂ ಹೆಚ್ಚು ಮನೆಗಳ್ಳತನ; ಅಂತಾರಾಜ್ಯ ಆರೋಪಿ ಬಂಧನ
“ಜಿಲ್ಲೆಯಲ್ಲಿ ಗಡಿ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ವಿಶೇಷ ಕಾರ್ಯಾಚರಣೆ ಮೂಲಕ ನಿಯಮ ಉಲ್ಲಂಘಿಸುವುದರ ವಿರುದ್ದ ಕ್ರಮ ಕೈಗೊಳ್ಳುವುದರೊಂದಿಗೆ ಜಿಲ್ಲೆಯಾದ್ಯಂತೆ ಭದ್ರತೆ ಹೆಚ್ಚಿಸಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ” ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಐತಾಳ ತಿಳಿಸಿದ್ದಾರೆ.