ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸಲು ರಾಜ್ಯದಲ್ಲಿನ ಡೀಸೆಲ್, ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಸುಂಕದಲ್ಲಿನ ಸ್ವಲ್ಪ ಮೊತ್ತವನ್ನು ಅಸಂಘಟಿತ ಕಾರ್ಮಿಕರ ಮಂಡಳಿಗೆ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ತಿಳಿಸಿದರು.
ಕಾರವಾರದ ಅಜ್ಜಿ ಓಷಿಯನ್ ಹೋಟೆಲ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಅಸಂಘಟಿತ ವಲಯದ ಕಾರ್ಮಿಕರು ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲರಾಗಿದ್ದು, ಸಂಘಟಿತ ಕಾರ್ಮಿಕರಿಗೆ ದೊರೆಯುವ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಈ ಮಂಡಳಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿನ ಡೀಸೆಲ್ ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಸುಂಕದಲ್ಲಿನ ನಿರ್ದಿಷ್ಟ ಮೊತ್ತವನ್ನು ವರ್ಗಾಯಿಸುವ ಕುರಿತು ಮುಖ್ಯಮಂತ್ರಿಗಳಲ್ಲಿ ವಿನಂತಿ ಮಾಡಿಕೊಂಡು, ಈ ವರ್ಗದ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಗರಿಷ್ಠ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.
“ಈಗಾಗಲೇ ಅಂಬೇಡ್ಕರ್ ಸಹಾಯ ಹಸ್ತ ಯೋಜನೆ, ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ, ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ದೇಶದಲ್ಲೇ ಪ್ರಥಮ ಬಾರಿಗೆ ಇ ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸಿನಿಮಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರ ಸುಂಕ ಅಧಿನಿಯಮ, ಕರ್ನಾಟಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಅಧಿನಿಯಮ ಮತ್ತು ಕರ್ನಾಟಕ ಗೃಹ ಕಾರ್ಮಿಕರ ಅಧಿನಿಯಮ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ
“ರಾಜ್ಯದಲ್ಲಿ ಕಾರ್ಮಿಕರ ಮಕ್ಕಳಿಗಾಗಿ 6 ರಿಂದ 12 ತರಗತಿಯವರಿಗೆ ಉಚಿತ ಶಿಕ್ಷಣ ನಿಡುವ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಪ್ರತೀ ಜಿಲ್ಲೆಗೊಂದು ಈ ಶಾಲೆಗಳನ್ನು ತೆರೆಯುವ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ ಸಚಿವರು, ಕನಿಷ್ಠ ವೇತನ ಪಾವತಿಯನ್ನು ಕಡ್ಡಾಯಗೊಳಿಸಿದ್ದು ಈ ಬಗ್ಗೆ ದೂರುಗಳಿದ್ದಲ್ಲಿ ಲಿಖಿತವಾಗಿ ನೇರವಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಬೇಕು, ರಾಜ್ಯದಲ್ಲಿನ ಸರ್ಕಾರಿ ಇಲಾಖೆಗಳಲ್ಲಿನ ಹೊರಗುತ್ತಿಗೆ ನೌಕರರ ನೇಮಕಾತಿಗಾಗಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿಗಳನ್ನು ರಚಿಸಲಾಗುತ್ತಿದೆ, ನಿರ್ದಿಷ್ಟ ಅವಧಿಗೆ ಸೇವೆ ಸಲ್ಲಿಸಿದ ನೌಕರರರಿಗೆ ಗ್ಯಾಚ್ಯುಯಿಟಿ ಮತ್ತು ಕಡ್ಡಾಯವಾಗಿ ವಿಮೆ ಮಾಡಿಸುವ ಕುರಿತಂತೆ ನಿಯಮಗಳನ್ನು ರೂಪಿಸಲಾಗುತ್ತಿದ್ದು, ರಾಜ್ಯದಲ್ಲಿ ಕಾರ್ಮಿಕರ ಅಭಿವೃಧ್ದಿಗೆ ಪೂರಕವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇರಳದ ಮಂಜೇಶ್ವರ ಶಾಸಕ ಅಶ್ರಫ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ರಾಣೆ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಸಚಿನ್ ವೈ ಹಳೇಮನಿ, ಅಸಂಘಟಿತ ಕಾರ್ಮಿಕ ಮಂಡಳಿಯ ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ್, ಬೆಳಗಾವಿ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.