ಉತ್ತರ ಕನ್ನಡ: ಮುಂಡಗೋಡ ತಾಲೂಕಿನ ನಾಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪಗೇರಿ ಗ್ರಾಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಶಿರಸಿಯ ಸ್ಕೋಡ್ ವೇಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಮಾಜಕಾರ್ಯ ಗ್ರಾಮೀಣ ಶಿಬಿರ 2025-26’ ಮತ್ತು ‘ಬುಡಕಟ್ಟು ಸಮುದಾಯ ಹಾಗೂ ಸಂಶೋಧನಾ ಶಿಬಿರ’ವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಶಾಂತಾರಾಮ್ ಸಿದ್ದಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪರಿಷತ್ ಶಾಸಕರು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದವರೇ ಅಂತಿಮವಾಗಿ ಯಶಸ್ಸನ್ನು ಸಾಧಿಸಲು ಸಾಧ್ಯ. ಇಂತಹ ಸಮಾಜಕಾರ್ಯ ಶಿಬಿರಗಳು ಕೇವಲ ಸೀಮಿತ ಚಟುವಟಿಕೆಗಳಲ್ಲ ಇವು ಬುಡಕಟ್ಟು ಜನಾಂಗದ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಅವರ ಜೀವನಶೈಲಿಯನ್ನು ಅರಿತುಕೊಳ್ಳಲು ದೊರೆತ ಒಂದು ಸುಸಂದರ್ಭ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ವೆಂಕಟೇಶ್ ನಾಯಕ್ ಅವರು ಶಿಬಿರದ ಮಹತ್ವವನ್ನು ವಿವರಿಸುತ್ತಾ, ಸಮಾಜಕಾರ್ಯ ಶಿಬಿರವು ಕೇವಲ ಮನರಂಜನೆಯ ಸಾಧನವಲ್ಲ, ಬದಲಾಗಿ ಜೀವನದ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳುವ ಒಂದು ಪ್ರಮುಖ ಘಟ್ಟವಾಗಿದೆ ಎಂದರು. ವೈಯಕ್ತಿಕ ಜೀವನದ ಸವಾಲುಗಳು ಮತ್ತು ಸೋಲುಗಳನ್ನು ಎದುರಿಸಿ ಮುನ್ನಡೆಯಲು ಬೇಕಾದ ಪ್ರಾಯೋಗಿಕ ಕಲಿಕೆಯನ್ನು ಇಂತಹ ಶಿಬಿರಗಳು ನೀಡುತ್ತವೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಗೋವನ್ನು ರಕ್ಷಿಸಲು ಮುಂದಾದ ಮುಸ್ಲಿಂ ಯುವಕ ಕೆರೆಯಲ್ಲಿ ಮುಳುಗಿ ದುರ್ಮರಣ
ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ಪರಶುರಾಮ್ ಕೆ.ಜಿ. ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ, ಸಮಾಜಕಾರ್ಯ ಶಿಬಿರದ ಉದ್ದೇಶ ಮತ್ತು ಅಗತ್ಯತೆಗಳ ಕುರಿತು ಬೆಳಕು ಚೆಲ್ಲಿದರು.
ಮುಂಡಗೋಡ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಮಾ ಜಿ. ಅವರು ಮಾತನಾಡಿ, ಪ್ರಶಿಕ್ಷಣಾರ್ಥಿಗಳಿಗೆ ಅವರ ಜೀವನದ ವೃತ್ತಿಪರ ಆಯ್ಕೆಗಳ ಕುರಿತು ಮಾರ್ಗದರ್ಶನ ನೀಡಿದರು. ಈ ಉದ್ಘಾಟನಾ ಸಮಾರಂಭದಲ್ಲಿ ನಾಗನೂರು ಗ್ರಾಮ ಪಂಚಾಯಿತಿಯ ಆಡಳಿತ ಅಧಿಕಾರಿ ಶ್ರೀ ಕೃಷ್ಣ ಮಹಾ ರೆಡ್ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಶಂಭು ಆರ್. ಶಿಗ್ನೆಳ್ಳ, ಸಮಾಜಕಾರ್ಯ ವಿಭಾಗದ ಅಧ್ಯಕ್ಷರಾದ ಪರಶುರಾಮ ಕೆ.ಜಿ., ಶ್ರೀಮತಿ ಗೀತಾ, ಶಿವರಾಮ ಭಟ್ಟ, ಸ್ಕೋಡ್ ವೇಸ್ ಸಂಸ್ಥೆಯ ಅಧಿಕಾರಿ ಪ್ರಶಾಂತ್, ಶಿಬಿರ ಅಧಿಕಾರಿಗಳಾದ ಟೀನ ಜೋಸ್, ಡೈಸನ್ ಪಿ.ಟಿ., ಸಹ ಶಿಬಿರಾಧಿಕಾರಿಗಳಾದ ಶೇಖರಯ್ಯ, ಶ್ರೀನಿವಾಸ್ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.





